ಕೈರೋ(ಈಜಿಪ್ಟ್): ಮೋಸ್ಟ್ ವಾಂಟೆಡ್ ಉಗ್ರ ಅಯ್ನಾನ್ ಅಲ್ ಜವಾಹಿರಿಯನ್ನು ಅಮೆರಿಕ ಡ್ರೋನ್ ದಾಳಿ ನಡೆಸಿ ಹತ್ಯೆ ಮಾಡಿತ್ತು. ತನ್ನ ನಾಯಕನನ್ನು ಕೊಂದ 35 ನಿಮಿಷಗಳ ವಿಡಿಯೋವನ್ನು ಅಂತಾರಾಷ್ಟ್ರೀಯ ಉಗ್ರ ಸಂಘಟನೆಯಾದ ಅಲ್ ಖೈದಾ ಶುಕ್ರವಾರ ಬಿಡುಗಡೆ ಮಾಡಿದೆ ಎಂದು ವರದಿಯಾಗಿದೆ.
ಗುಪ್ತಚರ ಸಂಸ್ಥೆಯಾದ SITE ಈ ವಿಡಿಯೋದ ಸತ್ಯಾಸತ್ಯತೆ ಬಗ್ಗೆ ನಿರೂಪಿಸಿದ್ದು, ಅಲ್ಖೈದಾ ಸಂಘಟನೆಯ ಜವಾಹಿರಿಯ ಬಲಿ ಪಡೆದ ವಿಡಿಯೋ ಎಂದು ಹೇಳಿದೆ. 9/11 ದಾಳಿ ಎಂದೇ ಕುಖ್ಯಾತಿಯಾದ ಅಮೆರಿಕದ ಅವಳಿ ಕಟ್ಟಡಗಳ ಧ್ವಂಸದ ಮಾಸ್ಟರ್ಮೈಂಡ್ ಜವಾಹಿರಿಯನ್ನು ಅದರ ಸೇನಾಪಡೆಗಳು ಬೆಂಬತ್ತಿದ್ದವು. ಹಲವು ವರ್ಷಗಳಿಂದ ಅಜ್ಞಾತವಾಸದಲ್ಲಿದ್ದ ಉಗ್ರನನ್ನು ಅಫ್ಘಾನಿಸ್ತಾನದ ಕಾಬೂಲ್ನಲ್ಲಿ ಇರುವುದನ್ನು ಪತ್ತೆ ಮಾಡಲಾಗಿತ್ತು.
ಅದರಂತೆ ನಿಖರ ದಾಳಿ ರೂಪಿಸಿ ಡ್ರೋನ್ ಮೂಲಕ ಜುಲೈ 31 ರಂದು ಜವಾಹಿರಿಯನ್ನು ಉಡಾಯಿಸಲಾಯಿತು. ಅದರ ವಿಡಿಯೋವನ್ನು ಅಲ್ಖೈದಾ ಈಗ ಹಂಚಿಕೊಂಡಿದೆ. ದಾಳಿ ನಡೆದ ದಿನಾಂಕವನ್ನು ಮಾತ್ರ ಅದು ನಮೂದಿಸಿಲ್ಲ.
ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಪಡಿಸಿಕೊಳ್ಳುವವರೆಗೂ ಜವಾಹಿರಿ ಪಾಕಿಸ್ತಾನದಲ್ಲಿ ವಾಸಿಸುತ್ತಿದ್ದ ಎಂದೇ ಹೇಳಲಾಗಿತ್ತು. ತಾಲಿಬಾನಿಗಳು ಅಧಿಕಾರ ಸ್ಥಾಪಿಸಿದ ಬಳಿಕ ಪಾಕ್ ಗಡಿಯಿಂದ ಆಫ್ಘನ್ಗೆ ತೆರಳಿದ್ದ. ಅಮೆರಿಕ ಪಡೆಗಳು ಕೂಡ ಅಷ್ಟೊತ್ತಿಗೆ ಅಲ್ಲಿಂದ ಕಾಲ್ಕಿತ್ತಿದ್ದವು. ಈ ಕಾರಣಕ್ಕಾಗಿ ಆತ ಆಫ್ಘನ್ಗೆ ವಲಸೆ ಹೋಗಿದ್ದ. ಆತನ ಕುಟುಂಬ ಕಾಬೂಲ್ನಲ್ಲಿ ವಾಸಿಸುತ್ತಿದೆ ಎಂದು ತಿಳಿದುಬಂದಿದೆ.
ಇನ್ನು ಅಯ್ನಾನ್ ಅಲ್ ಜವಾಹಿರಿ ಪಾಕಿಸ್ತಾನಕ್ಕೆ ಕಂಟಕವಾಗಿದ್ದ ಕಾರಣ ಅಲ್ಲಿನ ಸರ್ಕಾರವೇ ಅಮೆರಿಕದ ಜೊತೆಗೂಡಿ ಹತ್ಯೆ ಮಾಡಲು ಸಂಚು ರೂಪಿಸಿತ್ತು ಎಂದು ಅಮೆರಿಕನ್ ಎಂಟರ್‌ಪ್ರೈಸ್ ಇನ್‌ಸ್ಟಿಟ್ಯೂಟ್‌ನ (ಎಇಐ) ಹಿರಿಯ ಉದ್ಯೋಗಿ ಮೈಕೆಲ್ ರೂಬಿನ್ ಹೇಳಿಕೆ ನೀಡಿದ್ದರು.
ಓದಿ: ಸಾರಿಗೆ ನೌಕರರ ಧರಣಿ: ಪ್ರತಿಭಟನೆ ಕೈ ಬಿಡುವಂತೆ ಪೊಲೀಸರಿಂದ ಧಮ್ಕಿ ಆರೋಪ