ಲಂಡನ್ : ಕೃತಕ ಬುದ್ಧಿಮತ್ತೆ (Artificial intelligence -AI) ತಂತ್ರಜ್ಞಾನಕ್ಕೆ ರಾಷ್ಟ್ರಗಳ ಸಾಂಪ್ರದಾಯಿಕ ಗಡಿಗಳ ಬಗ್ಗೆ ಯಾವುದೇ ಹಂಗಿಲ್ಲ, ಹೀಗಾಗಿ ಈ ವಿಚಾರದಲ್ಲಿ ರಾಷ್ಟ್ರಗಳು ಮತ್ತು ಪ್ರಯೋಗಾಲಯಗಳ ನಡುವೆ ಜಾಗತಿಕ ಸಹಕಾರ ತುರ್ತಾಗಿ ಅಗತ್ಯವಿದೆ ಎಂದು ಯುಕೆ ಪ್ರಧಾನಿ ರಿಷಿ ಸುನಕ್ ಸೋಮವಾರ ಹೇಳಿದ್ದಾರೆ. ಇಲ್ಲಿ 'ಲಂಡನ್ ಟೆಕ್ ವೀಕ್ 2023' ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಯುಕೆಯನ್ನು ಕೇವಲ ಬೌದ್ಧಿಕ ನೆಲೆ ಮಾತ್ರವಲ್ಲದೆ ಜಾಗತಿಕ AI ಸುರಕ್ಷತಾ ನಿಯಂತ್ರಣದ ಭೌಗೋಳಿಕ ನೆಲೆಯನ್ನಾಗಿ ಮಾಡಲು ತಾವು ಬಯಸುವುದಾಗಿ ಹೇಳಿದರು.
"ಹವಾಮಾನ ಬದಲಾವಣೆಯನ್ನು ನಿಭಾಯಿಸಲು ಕಾನ್ಫರೆನ್ಸ್ ಆಫ್ ದಿ ಪಾರ್ಟೀಸ್ (COP) ಮೂಲಕ ಒಂದಾಗುತ್ತಿರುವ ಮಾದರಿಯಲ್ಲಿಯೇ ಯುಕೆ ಈ ವರ್ಷಾಂತ್ಯದಲ್ಲಿ ಜಾಗತಿಕ AI ಸುರಕ್ಷತೆಯ ಕುರಿತು ಮೊದಲ ಶೃಂಗಸಭೆಯನ್ನು ಆಯೋಜಿಸಲಿದೆ" ಎಂದು ಪ್ರಧಾನಿ ಘೋಷಿಸಿದರು. ಲಂಡನ್ ಟೆಕ್ ವೀಕ್‌ನಲ್ಲಿ ಮತ್ತೊಮ್ಮೆ ಭಾಗವಹಿಸುತ್ತಿರುವುದು ದೊಡ್ಡ ಅವಕಾಶ ಎಂದು ಭಾವಿಸುತ್ತೇನೆ ಎಂದು ಅವರು ನುಡಿದರು.
ತಂತ್ರಜ್ಞಾನ ವಲಯದಲ್ಲಿ ಅಗಾಧ ಬದಲಾವಣೆಗಳಾಗುತ್ತಿವೆ. AI ಮಾತ್ರವಲ್ಲದೆ ಕ್ವಾಂಟಮ್, ಸಿಂಥೆಟಿಕ್ ಬಯಾಲಜಿ, ಸೆಮಿಕಂಡಕ್ಟರ್ಗಳು ಸೇರಿದಂತೆ ಎಲ್ಲ ವಲಯಗಳು ಅಗಾಧ ಬೆಳವಣಿಗೆ ಸಾಧಿಸುತ್ತಿವೆ. ಹೀಗಾಗಿ ಇಂಥ ಸಮಯದಲ್ಲಿ ನಾವಿರುವ ಸ್ಥಿತಿಯಲ್ಲೇ ತಟಸ್ಥವಾಗಿರಲು ಸಾಧ್ಯವಿಲ್ಲ ಎಂಬುದು ಸುನಕ್ ಅವರ ಅಭಿಪ್ರಾಯವಾಗಿದೆ.
ನಾವು ವಿಶ್ವದ ಟೆಕ್ ರಾಜಧಾನಿಗಳಲ್ಲಿ ಒಂದಾಗಿ ನಮ್ಮ ಸ್ಥಾನವನ್ನು ಉಳಿಸಿಕೊಳ್ಳಲು ಮಾತ್ರವಲ್ಲದೆ ಇನ್ನೂ ಮುಂದೆ ಹೋಗಲು ಬಯಸಿದರೆ ಮತ್ತು ಟೆಕ್ ವ್ಯವಹಾರಗಳನ್ನು ಪ್ರಾರಂಭಿಸಲು, ಬೆಳೆಯಲು ಮತ್ತು ಹೂಡಿಕೆ ಮಾಡಲು ಇದನ್ನು ವಿಶ್ವದ ಅತ್ಯುತ್ತಮ ದೇಶವನ್ನಾಗಿ ಮಾಡಲು ಬಯಸಿದರೆ ನಾವು ಕಾರ್ಯನಿರ್ವಹಿಸಬೇಕಿದೆ ಅದೂ ಕೂಡ ತುಂಬಾ ತ್ವರಿತವಾಗಿ ಇದನ್ನು ಮಾಡಬೇಕಿದೆ ಎಂದು ಅವರು ಒತ್ತಿ ಹೇಳಿದರು.
ಕ್ವಾಂಟಮ್‌ನ ಕಂಪ್ಯೂಟೇಶನಲ್ ಶಕ್ತಿಯೊಂದಿಗೆ ನಾವು ಕ್ಯಾನ್ಸರ್ ಮತ್ತು ಬುದ್ಧಿಮಾಂದ್ಯತೆಯಂತಹ ಕಾಯಿಲೆಗಳಿಗೆ ಪರಿಹಾರಗಳನ್ನು ಕಂಡುಹಿಡಿಯುವ ಸಾಧ್ಯತೆಗಳಿವೆ ಅಥವಾ ಇಡೀ ಜಗತ್ತಿಗೆ ಆಹಾರವನ್ನು ನೀಡುವಂಥ ಬೆಳೆಗಳನ್ನು ಬೆಳೆಯುವ ವಿಧಾನಗಳನ್ನು ಕಂಡುಹಿಡಿಯಬಹುದು ಎಂದು ಸುನಕ್ ಹೇಳಿದರು. AI ಬಗ್ಗೆ ತಿಳಿದ ಪರಿಣಿತರು ಈ ತಂತ್ರಜ್ಞಾನಗಳು ನಮ್ಮ ಮೌಲ್ಯಗಳು ಮತ್ತು ಸ್ವಾತಂತ್ರ್ಯಗಳನ್ನು ಮೂಲಕ ಹಾಳುಮಾಡುವ ವಿಧಾನಗಳ ಬಗ್ಗೆ ನಮಗೆ ಎಚ್ಚರಿಕೆ ನೀಡುತ್ತಿದ್ದಾರೆ. ಹೀಗಾಗಿ AI ಅನ್ನು ಬಳಸುವುದು ಅಂದರೆ AI ನ ಸುರಕ್ಷತೆಯನ್ನು ಖಾತ್ರಿ ಪಡಿಸುವುದು ಕೂಡ ಆಗಿದೆ ಎಂದು ಸುನಕ್ ಪ್ರತಿಪಾದಿಸಿದರು.
AI ತನ್ನ ಪರಿಣಿತ ಕಾರ್ಯಪಡೆಗೆ ಯುಕೆ 100 ಮಿಲಿಯನ್ ಪೌಂಡ್‌ಗಳನ್ನು ಮೀಸಲಾಗಿಟ್ಟಿದೆ. ಇತರ ಯಾವುದೇ ಸರ್ಕಾರಕ್ಕಿಂತ AI ಸುರಕ್ಷತೆಗೆ ಮೀಸಲಾದ ಅತ್ಯಧಿಕ ಮೊತ್ತ ಇದಾಗಿದೆ. ಯುಕೆ ಈಗಾಗಲೇ ಕಂಪ್ಯೂಟ್ ತಂತ್ರಜ್ಞಾನದಲ್ಲಿ 900 ಮಿಲಿಯನ್ ಪೌಂಡ್ ಮತ್ತು ಕ್ವಾಂಟಮ್ ತಂತ್ರಜ್ಞಾನದಲ್ಲಿ 2.5 ಬಿಲಿಯನ್ ಪೌಂಡ್ ಸೇರಿದಂತೆ ದಾಖಲೆ ಮೊತ್ತವನ್ನು ಹೂಡಿಕೆ ಮಾಡಿದೆ.
ಇದನ್ನೂ ಓದಿ : ರಷ್ಯಾ ಜೊತೆ ನಿಕಟ ಬಾಂಧವ್ಯ ಬಯಸುತ್ತೇವೆ: ಕಿಮ್ ಜೊಂಗ್ - ಉನ್