ಒಟ್ಟಾವಾ (ಕೆನಡಾ): ಕೆನಡಾದ ಒಂಟಾರಿಯೊದ ವಿಂಡ್ಸರ್‌ನಲ್ಲಿರುವ ಹಿಂದೂ ದೇವಾಲಯದ ಮೇಲೆ ಮತ್ತೆ ದುಷ್ಕರ್ಮಿಗಳು ದಾಳಿ ಮಾಡಿ ಭಾರತ ವಿರೋಧಿ ಧ್ವೇಷಪೂರಿತ ಘೋಷಣೆಯ ಬರಹಗಳನ್ನು ಬರೆದಿದ್ದಾರೆ. ಈ ಕುರಿತು ವಿಂಡ್ಸರ್ ಪೊಲೀಸರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದು, ಇದು ಉದ್ದೇಶಿತ ದಾಳಿಯಾಗಿದೆ ಎಂದು ತಿಳಿಸಿದ್ದಾರೆ. ಈ ವಿಧ್ವಂಸಕ ಕೃತ್ಯವನ್ನು ದ್ವೇಷ-ಪ್ರೇರಿತ ಘಟನೆ ಎಂದು ಪರಿಗಣಿಸಿ ತನಿಖೆ ಪ್ರಾರಂಭಿಸಿದ್ದೇವೆ ಎಂದು ಹೇಳಿದೆ.
ದ್ವೇಷ - ಪ್ರೇರಿತ ಕೃತ್ಯದಲ್ಲಿ ಇಬ್ಬರು ಶಂಕಿತ ವ್ಯಕ್ತಿಗಳು ಭಾಗಿಯಾಗಿದ್ದಾರೆ ಎಂದು ಗುರುತಿಸಲಾಗಿದೆ. ಜೊತೆಗೆ ಕೂಡಲೇ ಘಟನಾ ಸ್ಥಳಕ್ಕೆ ಪೊಲೀಸ್ ಸಿಬ್ಬಂದಿಯನ್ನು ತನಿಖೆಗಾಗಿ ರವಾನಿಸಲಾಗಿದೆ ಎಂದು ಅಲ್ಲಿನ ಪೊಲೀಸ್ ಮೂಲಗಳು ಮಾಹಿತಿ ನೀಡಿವೆ. ನಿನ್ನೆ ನಡೆದಿದ್ದು, ಈ ಬಗ್ಗೆ ಮಾಹಿತಿ ಪಡೆದ ತಕ್ಷಣ ನಾರ್ತ್‌ವೇ ಅವೆನ್ಯೂದ 1700 ಬ್ಲಾಕ್‌ನಲ್ಲಿರುವ ಹಿಂದೂ ದೇವಾಲಯಕ್ಕೆ ಅಧಿಕಾರಿಗಳನ್ನು ರವಾನಿಸಲಾಯಿತು. ತಕ್ಷಣ ಘಟನೆ ಬಗ್ಗೆ ಪರಿಶೀಲನೆ ಆರಂಭಿಸಿದ ಪೊಲೀಸರಿಗೆ ಕಟ್ಟಡದ ಹೊರಭಾಗದ ಗೋಡೆಯ ಮೇಲೆ ಕಪ್ಪು ಬಣ್ಣದಲ್ಲಿ ಹಿಂದೂ ವಿರೋಧಿ ಗೀಚುಬರಹವನ್ನು ಬರೆದಿರುವುದು ಕಂಡು ಬಂತು ಎಂದು ತನಿಖಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪೊಲೀಸರಿಗೆ ಮುಖ್ಯವಾಗಿ ಅದೇ ಪ್ರದೇಶದಲ್ಲಿ ಇಬ್ಬರು ಅನುಮಾನಸ್ಪದ ಶಂಕಿತ ವ್ಯಕ್ತಿಗಳು ಓಡಾಡುವ ದೃಶ್ಯದ ವಿಡಿಯೋ ಸಹ ಲಭ್ಯವಾಗಿದೆ. ವಿಡಿಯೋದಲ್ಲಿ ಒಬ್ಬ ಶಂಕಿತನು ಕಟ್ಟಡದ ಗೋಡೆಯ ಮೇಲೆ ವಿಧ್ವಂಸಕ ಕೃತ್ಯವನ್ನು ಎಸಗುತ್ತಿರುವಂತೆ ತೋರುತ್ತಿದ್ದು, ಇನ್ನೊಬ್ಬ ಅದನ್ನು ಗಮನಿಸುತ್ತಿದ್ದನು ಎಂದು ವಿಂಡ್ಸರ್ ಪೊಲೀಸರು ಹೇಳಿದ್ದಾರೆ. ಇಬ್ಬರು ವ್ಯಕ್ತಿಯಲ್ಲಿ ಒಬ್ಬ ಕಪ್ಪು ಸ್ವೆಟರ್, ಎಡಗಾಲಿನಲ್ಲಿ ಸಣ್ಣ ಬಿಳಿ ಲೋಗೋ ಹೊಂದಿರುವ ಕಪ್ಪು ಪ್ಯಾಂಟ್ ಮತ್ತು ಕಪ್ಪು ಮತ್ತು ಬಿಳಿಯ ಓಟದ ಬೂಟುಗಳನ್ನು ಧರಿಸಿದ್ದ.
ಹಾಗೆ, ಎರಡನೇ ಶಂಕಿತ ವ್ಯಕ್ತಿ ಕಪ್ಪು ಪ್ಯಾಂಟ್, ಕಪ್ಪು ಬೂಟು ಮತ್ತು ಬಿಳಿ ಸಾಕ್ಸ್ನ್ನು ಧರಿಸಿದ್ದ ಎಂಬ ಮಾಹಿತಿ ಪೊಲೀಸರಿಗೆ ಲಭಿಸಿದೆ. ಹಾಗಾಗಿ ಈ ಶಂಕಿತರ ಸಾಕ್ಷ್ಯಕ್ಕಾಗಿ ವಿಂಡ್ಸರ್ ಪೊಲೀಸರು ದೇವಸ್ಥಾನದ ಸಮೀಪದಲ್ಲಿರುವ ನಿವಾಸಿಗಳಿಗೆ ರಾತ್ರಿ 11 ರಿಂದ ಬೆಳಗ್ಗೆ 1 ಗಂಟೆಯ ಸಮಯದೊಳಗೆ ಅವರವರ ಮನೆಗಳ ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ಮಾಡಿಕೊಳ್ಳಲು ಸೂಚನೆ ನೀಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಯಾವುದೇ ಮಾಹಿತಿಯಿದ್ದಲ್ಲಿ ಪೊಲೀಸರ ಘಟಕ್ಕೆ ಕರೆ ಮಾಡಿ ತಿಳಿಸುವಂತೆ ಸೂಚನೆ ನೀಡಿದ್ದಾರೆ.
ಫೆಬ್ರವರಿಯಲ್ಲಿಯೂ ಇಂಥಹದ್ದೇ ಘಟನೆ: ಕೆನಡಾದ ಮಿಸ್ಸಿಸೌಗಾದಲ್ಲಿ ರಾಮಮಂದಿರವನ್ನು ಇದೇ ತರಹ ಹಿಂದೂ ವಿರೋಧಿ ಗೀಚು ಬರಹದೊಂದಿಗೆ ಧ್ವಂಸ ಮಾಡಲಾಗಿತ್ತು. ಈ ದುಷ್ಕೃತ್ಯವನ್ನು ಟೊರೊಂಟೊದಲ್ಲಿರುವ ಭಾರತದ ಕಾನ್ಸುಲೇಟ್ ಜನರಲ್ ತೀವ್ರವಾಗಿ ಖಂಡಿಸಿದ್ದರು. ಜೊತೆಗೆ ಘಟನೆಯ ಬಗ್ಗೆ ತನಿಖೆ ನಡೆಸುವಂತೆ ಮತ್ತು ದುಷ್ಕರ್ಮಿಗಳ ಮೇಲೆ ತ್ವರಿತ ಕ್ರಮ ಕೈಗೊಳ್ಳುವಂತೆ ನಾವು ಕೆನಡಾದ ಅಧಿಕಾರಿಗಳನ್ನು ವಿನಂತಿಸಿದ್ದೇವೆಂದು ಟ್ವೀಟ್ ಮಾಡಿದ್ದಾರೆ.
ಇಷ್ಟೆ ಅಲ್ಲದೇ ಜನವರಿಯಲ್ಲಿ, ಬ್ರಾಂಪ್ಟನ್‌ನಲ್ಲಿರುವ ಹಿಂದೂ ದೇವಾಲಯದ ಮೇಲೂ ಇದೇ ರೀತಿ ದಾಳಿ ನಡೆಸಲಾಗಿತ್ತು. ಇದು ಭಾರತೀಯ ಹಿಂದೂ ಸಮುದಾಯದಲ್ಲಿ ಭಾರಿ ಆಕ್ರೋಶವನ್ನು ಉಂಟುಮಾಡಿತ್ತು. ಹಾಗೆಯೇ ಗೌರಿ ಶಂಕರ ಮಂದಿರದಲ್ಲಿ ನಡೆದ ವಿಧ್ವಂಸಕ ಕೃತ್ಯಗಳು ಕೆನಡಾದಲ್ಲಿರುವ ಭಾರತೀಯ ಹಿಂದೂಗಳ ಭಾವನೆಗಳಿಗೆ ತೀವ್ರ ನೋವುಂಟು ಮಾಡಿದೆ. ನಾವು ಕೆನಡಾದ ಅಧಿಕಾರಿಗಳೊಂದಿಗೆ ಈ ವಿಷಯದ ಬಗ್ಗೆ ನಮ್ಮ ಕಳವಳ ವ್ಯಕ್ತಪಡಿಸಿದ್ದೇವೆ ಎಂದು ಟೊರೊಂಟೊದಲ್ಲಿರುವ ಭಾರತದ ಕಾನ್ಸುಲೇಟ್ ಜನರಲ್ ಹೇಳಿದ್ದಾರೆ.
ಇದನ್ನೂ ಓದಿ: ಟಿಬೆಟ್ನ ಎರಡನೇ ಬುದ್ಧ ಪದ್ಮ ಸಂಭವ; ಈತನ ಬಗ್ಗೆ ಇದೆ ಕುತೂಹಲದ ಮಾಹಿತಿ!