ವಾಷಿಂಗ್ಟನ್: ಕಳೆದ ಮೂರು ವರ್ಷಗಳ ಹಿಂದೆ ಕಂಡು ಬಂದಿದ್ದ ಕೋವಿಡ್ ಸಾಂಕ್ರಾಮಿಕ ಸೋಂಕು ಜಗತ್ತನ್ನೇ ತಲ್ಲಣಗೊಳಿಸಿತ್ತು. ಅಪಾರ ಸಾವು ನೋವುಗಳಿಗೆ ಕಾರಣವಾದ ಕೋವಿಡ್ ಸೋಂಕಿನಿಂದ ಇಂದಿಗೂ ಹೊರಬರಲು ಸಾಧ್ಯವಾಗಿಲ್ಲ. ಕೋವಿಡ್ನ ರೂಪಾಂತರ ತಳಿಯಾದ ಓಮ್ರಿಕಾನ್ ಮತ್ತು ಅದರ ಹೊಸ ಹೊಸ ತಳಿಗಳಿಂದಾಗಿ ಜನರು ಇಂದಿಗೂ ಸೋಂಕಿಗೆ ತುತ್ತಾಗುತ್ತಿದ್ದಾರೆ. ಓಮಿಕ್ರಾನ್ನ ಉಪತಳಿಯಾದ XBB.1.5 ಇದೀಗ ಅಮೆರಿಕ ಜನರನ್ನು ಕಾಡುತ್ತಿದ್ದು, ದೇಶದಲ್ಲಿ ಕಂಡು ಬಂದ ಶೇ 85ರಷ್ಟು ಹೊಸ ಕೋವಿಡ್ ಪ್ರಕರಣದಲ್ಲಿ ಈ ಓಮಿಕ್ರಾನ್ ಉಪತಳಿಯಾದ XBB.1.5 ಕಂಡು ಬಂದಿದೆ ಎಂದು ವರದಿಯಾಗಿದೆ.
ಅಮೆರಿಕದಲ್ಲಿ ವೇಗವಾಗಿ ಹರಡುತ್ತಿರುವ ಈ ಓಮಿಕ್ರಾನ್ ಉಪತಳಿ ಒಬ್ಬರಿಂದ ಒಬ್ಬರಿಗೆ ಬೇಗ ಹರಡುತ್ತಿದೆ. ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರಗಳ ಇತ್ತೀಚಿನ ವರದಿ ಪ್ರಕಾರ, ವೇಗವಾಗಿ ಹರಡುತ್ತಿರುವ ಈ ಉಪತಳಿಯು ಕೋವಿಡ್ನಲ್ಲಿ ಪತ್ತೆಯಾದ ಶೇ 85 ಪ್ರಕರಣಗಳಲ್ಲಿ ಕಂಡು ಬಂದಿದೆ ಎಂದು ತಿಳಿಸಿದೆ.
ಏನಿದು XBB.1.5: ಓಮ್ರಿಕಾನ್ನ ರೂಪಾಂತರ ತಳಿಯಾಗಿದ್ದು, ಈ ಹಿಂದಿನ ತಳಿಯ ಮಾದರಿಯಲ್ಲಿಯೇ ಇದು ಇದೆ. ಹೆಚ್ಚು ವೇಗವಾಗಿ ಹರಡುವ ಈ ತಳಿಯಿಂದ ಶೀತದ ಅನುಭವ ಆಗುತ್ತದೆ. ಬ್ರಿಟನ್ನಲ್ಲೂ ಈ ಪ್ರಕರಣಗಳು ಪತ್ತೆಯಾಗಿದೆ. ಇದು ಪ್ರತಿರಕ್ಷಣಾ ವ್ಯವಸ್ಥೆ ಮೇಲೆ ಪರಿಣಾಮ ಬೀರಿದರೂ, ಜೀವಕೋಶಗಳಿಗೆ ಸೋಂಕು ತಗುಲಿಸುವ ಸಾಮರ್ಥ್ಯ ಕಡಿಮೆ ಇದೆ.
ಕಳೆದ ವರ್ಷದಿಂದಲೂ ಈ ಓಮ್ರಿಕಾನ್ ಉಪತಳಿ ಪತ್ತೆಯಾಗುತ್ತಲೇ ಇದೆ. ಇದು ಇತರ ತಳಿಗಿಂತ ಹೆಚ್ಚು ಸಾಂಕ್ರಾಮಿಕವಾಗಿದ್ದು, ರೂಪಾಂತರಿಯಾಗಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಇನ್ನು ಈ ತಳಿಗಳು ಕಳೆದ ವಾರ ಶೇ 79.2 ರಷ್ಟು ಕಂಡು ಬಂದಿತ್ತು. ಎರಡು ವಾರಗಳ ಮೊದಲು ಶೇ 71.9 ರಷ್ಟಿತ್ತು. ಇದೀಗ ವೇಗವಾಗಿ ಹರಡುತ್ತಿದ್ದು, ಶೇ 85ಕ್ಕೆ ತಲುಪಿದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿಯಲ್ಲಿ ತಿಳಿಸಿದೆ.
ಕಳೆದ ವರ್ಷ ಪತ್ತೆಯಾಗಿದ್ದ ತಳಿ: ಕಳೆದ ನವೆಂಬರ್ನಲ್ಲಿ ಈ ತಳಿ ಪತ್ತೆಯಾಗಿದ್ದು, ಅದನ್ನು ಪತ್ತೆ ಮಾಡಲು ಮುಂದಾಗಲಾಯಿತು. ಆಗ ಶೇ 1ರಷ್ಟಿದ್ದು, ಇದು ವೇಗವಾಗಿ ಹರಡುತ್ತಿರುವ ಹಿನ್ನಲೆ ಪ್ರಕರಣಗಳು ಉಲ್ಬಣಗೊಂಡಿದೆ. ಇದರ ತಳಿಗಳು ಹೆಚ್ಚು ಸಾಂಕ್ರಾಮಿಕವಾಗಿರುವ ಹಿನ್ನೆಲೆ ಹೆಚ್ಚೆಚ್ಚು ಹರಡುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಈ ತಳಿಯು ವೇಗವಾಗಿ ಹರಡಿದರೂ ಯಾವುದೇ ಗಂಭೀರ ಸಮಸ್ಯೆಗೆ ಗುರಿ ಮಾಡುವುದಿಲ್ಲ. ಈ ಸೋಂಕಿನ ಗುಣಲಕ್ಷಣಗಳು ಸಾಧಾರಣವಾಗಿದ್ದು, ಇದನ್ನು ತಡೆಯಬಹುದಾಗಿದೆ. ಸೋಂಕಿನ ಹಿನ್ನೆಲೆ ಸಾಮಾಜ್ಯ ಜ್ವರ, ನೆಗಡಿಯಂತಹ ಪ್ರಮುಖ ಲಕ್ಷಣಗಳು ಕಂಡು ಬರುತ್ತಿದೆ. ಜನರು ಮತ್ತೆ ಮಾಸ್ಕ್ ಅನ್ನು ಧರಿಸುವ ಮೂಲಕ ಇದನ್ನು ತಡೆಗಟ್ಟಬಹುದಾಗಿದೆ ಎಂದು ಡಾ ಮಿಷೆಲ್ ಟೆಂಗ್ ತಿಳಿಸಿದ್ದಾರೆ.
ಇನ್ನು ಅಮೆರಿಕದಲ್ಲಿ ಇಂದಿಗೂ ಅಧಿಕ ಪ್ರಮಾಣದಲ್ಲಿ ಕೋವಿಡ್ ಪ್ರಕರಣದ ಸಾವು ನೋವುಗಳು ದಿನನಿತ್ಯ ವರದಿಯಾಗುತ್ತಿದೆ. ದಿನನಿತ್ಯ 500 - 600 ಸಾವುಗಳು ಕಂಡು ಬರುತ್ತಿದ್ದು, ಅಮೆರಿಕ ಇಂದಿಗೂ ಕೂಡ ಕೋವಿಡ್ನಿಂದ ಭಾರಿ ಕೆಟ್ಟ ಪರಿಣಾಮಕ್ಕೆ ಗುರಿಯಾದ ದೇಶವಾಗಿದೆ. ಕೋವಿಡ್ನಿಂದ ಇಲ್ಲಿಯವರೆಗೆ ಇಲ್ಲಿ ಸಾವನ್ನಪ್ಪಿದವರ ಸಂಖ್ಯೆ 1,144,441 ರಷ್ಟಿದೆ
ಇದನ್ನೂ ಓದಿ: ಭಾರತದ ನೆರೆ ದೇಶಗಳು ಚೀನಾದ ಸಾಲಗಳನ್ನು ಬಲವಂತದ ಹತೋಟಿಗೆ ಬಳಸಬಹುದು: ಅಮೆರಿಕಾ ಕಳವಳ