ಓಕ್ಲಾಮಾ: ಓರ್ವ ಬಂದೂಕುಧಾರಿಯಿಂದ ಅಮೆರಿಕದಲ್ಲಿ ಬುಧವಾರ ಮತ್ತೊಂದು ಗುಂಡಿನ ದಾಳಿ ನಡೆದಿದೆ. ಓಕ್ಲಾಮಾದ ಟಲ್ಸಾ ಆಸ್ಪತ್ರೆ ಆವರಣದಲ್ಲಿ ರೈಫಲ್ ಮತ್ತು ಹ್ಯಾಂಡ್ ಗನ್ನಿಂದ ಓರ್ವ ದಾಳಿ ಮಾಡಿದ ಪರಿಣಾಮ ನಾಲ್ವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ದುಷ್ಕರ್ಮಿ ನಡೆಸಿದ ಶೂಟೌಟ್ನಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. ಜೊತೆಗೆ ದಾಳಿ ವೇಳೆ ತನ್ನಿಂದಲೇ ಗುಂಡು ತಗುಲಿ ಗಾಯಗೊಂಡ ಶೂಟರ್ ಕೂಡ ಮೃತಪಟ್ಟಿದ್ದಾನೆ ಎಂದು ಟಲ್ಸಾ ಪೊಲೀಸ್ ಇಲಾಖೆಯ ಉಪ ಮುಖ್ಯಸ್ಥ ಎರಿಕ್ ಮಾಹಿತಿ ನೀಡಿದ್ದಾರೆ. ಘಟನೆ ಬಗ್ಗೆ ಶ್ವೇತಭವನ ಪರಿಶೀಲನೆ ನಡೆಸುತ್ತಿದೆ. ಜೊತೆಗೆ ಸ್ಥಳಕ್ಕೆ ಅಧಿಕಾರಿಗಳು ತೆರಳಿ ತನಿಖೆ ಕೈಗೊಂಡಿದ್ದಾರೆ ಎಂದು ಅಧ್ಯಕ್ಷ ಜೋ ಬೈಡನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಮೆರಿಕದಲ್ಲಿ ಕಳೆದ ತಿಂಗಳು ಎರಡು ದೊಡ್ಡ ಸಾಮೂಹಿಕ ಗುಂಡಿನ ದಾಳಿಗಳು ನಡೆದ ಬೆನ್ನಲ್ಲೇ ಈ ದಾಳಿ ನಡೆದಿದೆ. ಕಳೆದ ವಾರವಷ್ಟೇ ಗುಂಡಿನ ದಾಳಿಯಲ್ಲಿ 19 ಮಕ್ಕಳು ಮತ್ತು ಇಬ್ಬರು ಶಿಕ್ಷಕರು ಬಲಿಯಾಗಿದ್ದ ಘಟನೆ ಟೆಕ್ಸಾಸ್‌ನಲ್ಲಿ ನಡೆದಿತ್ತು. ಬಳಿಕ ನ್ಯೂಯಾರ್ಕ್‌ನ ಸೂಪರ್‌ಮಾರ್ಕೆಟ್‌ನಲ್ಲಿ ಬಂದೂಕುದಾರಿಯ ಗುಂಡಿನ ದಾಳಿಗೆ 10 ಜನ ಮೃತರಾಗಿದ್ದರು. ಇದೀಗ ಮತ್ತೊಂದು ಗುಂಡಿನ ದಾಳಿ ನಡೆದಿರುವುದು ಜನರಲ್ಲಿ ಆತಂಕ ಮೂಡಿಸಿದೆ.
(ಇದನ್ನೂ ಓದಿ: ಟೆಕ್ಸಾಸ್ ಶಾಲೆಯಲ್ಲಿ ಗುಂಡಿನ ದಾಳಿ: ಮೃತ ವಿದ್ಯಾರ್ಥಿಗಳ ಸ್ಮಾರಕ ಸ್ಥಳಕ್ಕೆ ಜೋ ಬೈಡನ್ ಭೇಟಿ)