ಬೌಡೊಯಿನ್: ಅಮೆರಿಕದಲ್ಲಿ ಮತ್ತೆ ಗುಂಡಿನ ಮೊರೆತ ಕೇಳಿಬಂದಿದೆ. ತೋಟದ ಮನೆಯೊಂದರಲ್ಲಿ ನಾಲ್ವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಅಲ್ಲದೇ, ಅದೇ ಮಾರ್ಗದ ರಸ್ತೆಯ ಮೇಲೆ ಮೇಲೆ ದಾಳಿ ನಡೆಸಲಾಗಿದ್ದು, ಮೂವರು ಗಾಯಗೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಲಾಗಿದೆ.
ಜೋಸೆಫ್ ಈಟನ್(34) ಬಂಧಿತ ಆರೋಪಿ. ಬೌಡೊಯಿನ್ನ ಮನೆಯಲ್ಲಿ ನಾಲ್ಕು ಶವಗಳು ಪತ್ತೆಯಾಗಿವೆ. ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಇದಕ್ಕೂ ಮೊದಲು ಇಲ್ಲಿನ ಹೈವೇಯಲ್ಲಿ ಆರೋಪಿ ಗುಂಡಿನ ದಾಳಿ ಮಾಡಿ ಮೂವರನ್ನು ಗಾಯಗೊಳಿಸಿದ್ದ. ಈ ಹತ್ಯೆಗೂ ಆರೋಪಿಗೂ ಸಂಬಂಧವಿರಬೇಕು ಎಂದು ಪೊಲೀಸರು ಶಂಕಿಸಿದ್ದಾರೆ.
ಮೃತದೇಹಗಳನ್ನು ಮಂಗಳವಾರ ಬೆಳಗ್ಗೆ ಪತ್ತೆ ಮಾಡಲಾಗಿದೆ. ಒಂಟಿ ಮನೆಯಲ್ಲಿ ಪತಿ- ಪತ್ನಿ ವಾಸವಾಗಿದ್ದರು. ಮೃತ ವ್ಯಕ್ತಿ ಕಂಪನಿಯೊಂದನ್ನು ನಡೆಸುತ್ತಿದ್ದರು. ಸಾವಿಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಮೃತಪಟ್ಟ ಉಳಿದ ಇಬ್ಬರು ಯಾರೆಂಬುದು ಇನ್ನೂ ತಿಳಿದುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯನ್ನು ಬಂಧಿಸಲಾಗಿದ್ದು, ಜೈಲಿಗೆ ಕಳುಹಿಸಲಾಗಿದೆ. ಈ ವಾರದ ಕೊನೆಯಲ್ಲಿ ಆತ ನ್ಯಾಯಾಲಯಕ್ಕೆ ಹಾಜರಾಗಲಿದ್ದಾನೆ. ಹೆದ್ದಾರಿಯಲ್ಲಿ ನಡೆದ ಗುಂಡಿನ ದಾಳಿ ಅಥವಾ ಬೌಡೊಯಿನ್ ಮನೆಯಲ್ಲಿ ನಡೆದ ಹತ್ಯಾಕಾಂಡ ಘಟನೆಯ ಕುರಿತು ಮಾಹಿತಿ ಹೊಂದಿರುವ ಯಾರಾದರೂ ಪೊಲೀಸ್ ಅಧಿಕಾರಿಗಳನ್ನು ಸಂಪರ್ಕಿಸಲು ಕೋರಲಾಗಿದೆ.
ಗುಂಡಿನ ದಾಳಿ ಮಾಡಿದ್ದ ಆರೋಪಿಗಳ ಬಂಧನ: ಅಮೆರಿಕದ ಕ್ಯಾಲಿಫೋರ್ನಿಯಾದ ಸ್ಯಾಕ್ರಮೆಂಟೊ ಕೌಂಟಿಯ ಗುರುದ್ವಾರದಲ್ಲಿ ಕಳೆದ ತಿಂಗಳೂ ಮಾರ್ಚ್ನಲ್ಲಿ ನಡೆದಿದ್ದ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ 17 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಅಮೆರಿಕ ಪೊಲೀಸರು ಭಾನುವಾರ ಮತ್ತು ಸೋಮವಾರ ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ಸಿಖ್ ಸಮುದಾಯಕ್ಕೆ ಸೇರಿದ 17 ಜನರನ್ನು ಅರೆಸ್ಟ್ ಮಾಡಲಾಗಿದೆ.
ಬಂಧಿತರಿಂದ ಮಿಷನ್ ಗನ್ ಹಾಗೂ ಎ.ಕೆ–47 ಗನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತರನ್ನು ಸ್ಯಾಕ್ರಮೆಂಟೊ ಕೌಂಟಿಯ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸಲಾಗುತ್ತಿದೆ. ಇಬ್ಬರು ಯುವಕರ ನಡುವಿನ ವೈಯಕ್ತಿಕ ದ್ವೇಷ ಈ ಘಟನೆಗೆ ಕಾರಣ ಎಂದು ಪೊಲೀಸರು ಹೇಳಿದ್ದಾರೆ.
ಓದಿ: 7 ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಮಾಡಿದ ರಬ್ಬರ್ ಬಾಯ್ ಡೇನಿಯಲ್: ದೋಷವೇ ವರವಾಗಿದ್ದು ಹೇಗೆ..?