ಬೊಗೋಟಾ, ಕೊಲಂಬಿಯಾ: ಹಣೆಬರಹ ಗಟ್ಟಿಯಾಗಿದ್ದರೆ ವಿಧಿಯನ್ನೇ ಎದುರಿಸಬಹುದು ಎಂಬುದಕ್ಕೆ ಇದೇ ತಾಜಾ ಉದಾಹರಣೆ. ಒಂದಲ್ಲ, ಎರಡಲ್ಲ ಬರೋಬ್ಬರಿ 40 ದಿನಗಳ ಹಿಂದೆ ಅಮೆಜಾನ್ ಕಾಡಿನಲ್ಲಿ ಘಟಿಸಿದ ವಿಮಾನ ದುರಂತದಲ್ಲಿ ನಾಲ್ವರು ಬಾಲಕರು ಕಣ್ಮರೆಯಾಗಿದ್ದರು. ಇದೀಗ ಅವರು ಜೀವಂತವಾಗಿ ಪತ್ತೆಯಾಗಿದ್ದಾರೆ. ಇದು ಇಡೀ ಕೊಲಂಬಿಯನ್ನರನ್ನೇ ಅಚ್ಚರಿಗೀಡು ಮಾಡಿದೆ.
ನ್ಯಾಷನಲ್ ಲಿಬರೇಷನ್ ಆರ್ಮಿಯ ಬಂಡಾಯದ ವೇಳೆ ಸಣ್ಣ ವಿಮಾನದಲ್ಲಿ 4 ಮಕ್ಕಳು ಸೇರಿ 7 ಮಂದಿ ತೆರಳುತ್ತಿದ್ದಾಗ ಅದು ಇದ್ದಕ್ಕಿಂದ್ದಂತೆ ಅಮೆಜಾನ್ ಕಾಡಿನಲ್ಲಿ ಪತನಗೊಂಡಿತ್ತು. ಸ್ಥಳ ಶೋಧ ನಡೆಸಿದಾಗ ವಿಮಾನ ಸುಟ್ಟು ಕರಕಲಾಗಿ ಮೂವರು ಸಾವನ್ನಪ್ಪಿದ್ದರು. ಈ ವೇಳೆ ಮಕ್ಕಳು ಕಂಡು ಬಂದಿರಲಿಲ್ಲ. ಸುತ್ತಲ ಪ್ರದೇಶ ಹುಡುಕಾಡಿದರೂ ಎಲ್ಲೂ ಅವರ ಸುಳಿವು ಸಿಕ್ಕಿರಲಿಲ್ಲ. ಇದು ಅಚ್ಚರಿ ಮತ್ತು ಆತಂಕಕ್ಕೆ ಕಾರಣವಾಗಿತ್ತು.
'40 ದಿನಗಳ ಹಿಂದೆ ಸಣ್ಣ ವಿಮಾನ ಅಪಘಾತದಲ್ಲಿ ಬದುಕುಳಿದ ನಾಲ್ವರು ಮಕ್ಕಳನ್ನು ಅಧಿಕಾರಿಗಳು ಜೀವಂತವಾಗಿ ಪತ್ತೆ ಮಾಡಿದ್ದಾರೆ. ಅಮೆಜಾನ್ ಕಾಡಿನಲ್ಲಿ ಅವರು ಸಿಕ್ಕಿದ್ದಾರೆ. ಇದು ಕೊಲಂಬಿಯನ್ನರನ್ನು ತುದಿಗಾಲಲ್ಲಿ ನಿಲ್ಲಿಸಿದೆ' ಎಂದು ಕೊಲಂಬಿಯಾದ ಅಧ್ಯಕ್ಷ ಗುಸ್ಟಾವೊ ಪೆಟ್ರೋ ಹೇಳಿದ್ದಾರೆ.
'ರಕ್ಷಣಾ ತಂಡ ಪತ್ತೆ ಮಾಡಿದಾಗ ಮಕ್ಕಳು ಒಂಟಿಯಾಗಿದ್ದರು. ಈಗ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಕ್ಕಳು ಅಚ್ಚರಿ ಎಂಬಂತೆ ಬದುಕುಳಿದಿದ್ದಾರೆ. ವಿಮಾನ ಅಪಘಾತದಲ್ಲಿ ಬೇರೆಯವರು ಸಾವನ್ನಪ್ಪಿ, ಇವರು ಮಾತ್ರ ಜೀವಂತವಾಗಿ ತಪ್ಪಿಸಿಕೊಂಡಿದ್ದು, ಪವಾಡವೇ ಸರಿ' ಎಂದು ಹೇಳಿದ್ದಾರೆ.
ಇದಕ್ಕೂ ಮೊದಲು ಕೊಲಂಬಿಯಾದ ಅಧ್ಯಕ್ಷ ಗುಸ್ಟಾವೊ ಪೆಟ್ರೋ ಅವರು, ಕ್ಯೂಬಾಕ್ಕೆ ತೆರಳಿ ಅಲ್ಲಿನ ನ್ಯಾಷನಲ್ ಲಿಬರೇಶನ್ ಆರ್ಮಿ ಬಂಡಾಯ ಗುಂಪು ನಡೆಸುತ್ತಿರುವ ಹೋರಾಟದ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಿ, ಕದನ ವಿರಾಮ ಒಪ್ಪಂದಕ್ಕೆ ಸಹಿ ಹಾಕಿ ಬಂದಿದ್ದಾರೆ.
ಅಂದು ಏನೇನಾಗಿತ್ತು?: ಮೇ 1 ರ ಮುಂಜಾನೆ ಈ ಅಪಘಾತ ಸಂಭವಿಸಿತ್ತು. ಆರು ಪ್ರಯಾಣಿಕರು ಮತ್ತು ಪೈಲಟ್‌ನೊಂದಿಗೆ ಸೆಸ್ನಾ ಸಿಂಗಲ್ ಇಂಜಿನ್ ಪ್ರೊಪೆಲ್ಲರ್ ವಿಮಾನವು ಆಕಾಶದಲ್ಲಿ ಹಾರಾಡುವಾಗಲೇ ಇಂಜಿನ್ ವೈಫಲ್ಯಕ್ಕೀಡಾಗಿತ್ತು. ಸ್ವಲ್ಪ ಸಮಯದ ನಂತರ ವಿಮಾನವು ರಾಡಾರ್‌ನಿಂದ ತಪ್ಪಿಸಿಕೊಂಡಿತು. ಬಳಿಕ ಅದು ಅಮೆಜಾನ್ ಕಾಡಿನಲ್ಲಿ ಪತಕ್ಕೀಡಾದ ಬಗ್ಗೆ ಮಾಹಿತಿ ಬಂದಿದ್ದವು. ಬದುಕುಳಿದವರಿಗಾಗಿ ಹುಡುಕಾಟ ನಡೆಸಿದಾಗ, ಮೂವರು ಸಾವಿಗೀಡಾಗಿದ್ದರು. ಅವರ ಶವಗಳು ವಿಮಾನ ನಾಶವಾದ ಪ್ರದೇಶದಲ್ಲಿ ಪತ್ತೆಯಾಗಿದ್ದವು. ಮಕ್ಕಳು ಮಾತ್ರ ಈ ವೇಳೆ ಅಲ್ಲೆಲ್ಲೂ ಕಂಡು ಬಂದಿರಲಿಲ್ಲ.
ನೇಪಾಳ ವಿಮಾನ ದುರಂತ: ವರ್ಷದ ಆರಂಭದಲ್ಲಿ ನೇಪಾಳದಲ್ಲಿ ನಡೆದ ವಿಮಾನ ಅಪಘಾತದಲ್ಲಿ 72 ಮಂದಿ ಸಾವನ್ನಪ್ಪಿದ ಘೋರ ದುರಂತ ಸಂಭವಿಸಿತ್ತು. ಇದರಲ್ಲಿ ಐವರು ಭಾರತೀಯರು ಪ್ರಾಣ ಕಳೆದುಕೊಂಡಿದ್ದರು.
ಪೋಖರಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಸಂಭವಿಸಿದ ವಿಮಾನ ಪತನ ದುರಂತದಲ್ಲಿ ವಿಮಾನದಲ್ಲಿದ್ದ ಪ್ರಯಾಣಿಸುತ್ತಿದ್ದ 72 ಮಂದಿ ಪೈಕಿ ಮೊದಲು 68 ಪ್ರಯಾಣಿಕರ ಮೃತದೇಹ ಪತ್ತೆಯಾಗಿತ್ತು. ಬಳಿಕ ಎಲ್ಲಾ ಮೃತದೇಹಗಳನ್ನು ಪತ್ತೆ ಮಾಡಲಾಗಿತ್ತು. ಎಂಜಿನ್ನಲ್ಲಿ ತಾಂತ್ರಿಕ ದೋಷ ಉಂಟಾಗಿ ಲ್ಯಾಂಡಿಂಗ್ ವೇಳೆ ಈ ಘನಘೋರ ಅನಾಹುತ ನಡೆದಿತ್ತು.
ಇದನ್ನೂ ಓದಿ: ನೇಪಾಳ ವಿಮಾನ ಅಪಘಾತ: ಹಬ್ಬಕ್ಕೆ ಮನೆಗೆ ಬರುವೆನೆಂದು ಹೋದ ಮಗಳು ಬರಲೇ ಇಲ್ಲ!