ಜೆಫರ್ಸನ್‌ವಿಲ್ಲೆ(ಅಮೆರಿಕ): ಇಲ್ಲಿನ ದಕ್ಷಿಣ ಇಂಡಿಯಾನಾದ ರುದ್ರಭೂಮಿಯೊಂದರ ಕಟ್ಟಡದಲ್ಲಿ ಶುಕ್ರವಾರ 30ಕ್ಕೂ ಹೆಚ್ಚು ಶವಗಳು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಜೆಫರ್ಸನ್‌ವಿಲ್ಲೆಯ ಉಪನಗರದ ಲೂಯಿಸ್‌ವಿಲ್ಲೆಯ ಪೊಲೀಸರು ಶುಕ್ರವಾರ ಸಂಜೆ ಲ್ಯಾಂಕ್‌ಫೋರ್ಡ್ ಫ್ಯುನರಲ್ ಹೋಮ್ ಮತ್ತು ಫ್ಯಾಮಿಲಿ ಸೆಂಟರ್‌ಗೆ ಮಾಹಿತಿ ದೊರೆತ ತಕ್ಷಣ ತೆರಳಿದ್ದು, ಕೊಳೆಯುವ ಹಂತಗಳಲ್ಲಿದ್ದ ಶವಗಳೂ ಸೇರಿದಂತೆ ಒಟ್ಟು 31 ಶವಗಳನ್ನು ಪತ್ತೆ ಹಚ್ಚಿದರು.
ಈ ಬಗ್ಗೆ ಮಾಹಿತಿ ನೀಡಿರುವ ಮೇಜರ್ ಐಸಾಕ್ ಪಾರ್ಕರ್, ಕಟ್ಟಡದಿಂದ ಕೆಟ್ಟ ವಾಸನೆ ಬರುತ್ತಿರುವುದಾಗಿ ಕೌಂಟಿ ಕರೋನರ್ಸ್ ಕಚೇರಿಗೆ ಮಾಹಿತಿ ಬಂದಿತ್ತು. ಪೊಲೀಸ್ ಇಲಾಖೆ ರಾತ್ರಿಯಿಂದ ಬೆಳಗಿನವರೆಗೆ ಕಾರ್ಯಾಚರಣೆ ನಡೆಸಿ ಕಟ್ಟಡದ ಸುತ್ತಲಿನ ವಿವಿಧ ಸ್ಥಳಗಳಲ್ಲಿದ್ದ ಮೃತದೇಹಗಳನ್ನು ಪತ್ತೆ ಹಚ್ಚಿದ್ದಾರೆ. ಸಿಕ್ಕಿರುವ ಶವಗಳಲ್ಲಿ ಕೆಲವು ಮಾರ್ಚ್ನಿಂದ ಫ್ಯುನರಲ್ ಹೋಂನಲ್ಲೇ ಇವೆ. 16 ಶವಸಂಸ್ಕಾರ ಮಾಡಲು ಬಾಕಿ ಇದ್ದ ದೇಹಗಳನ್ನು ಪೊಲೀಸರು ತಪಾಸಣೆ ವೇಳೆ ಪತ್ತೆ ಹಚ್ಚಿದ್ದಾರೆ.
ತನಿಖೆಗೆ ತೆರಳಿದ ವೇಳೆ ಅಲ್ಲಿನ ಪರಿಸ್ಥಿತಿ ಬಹಳ ಕೆಟ್ಟದಾಗಿತ್ತು. ಆ ದೃಶ್ಯ ತುಂಬಾನೇ ಅಸಹನೀಯವಾಗಿತ್ತು. ರುದ್ರಭೂಮಿಯ ಮಾಲೀಕರು ಶುಕ್ರವಾರದಿಂದ ಪೊಲೀಸರ ಜೊತೆ ಸಂಪರ್ಕದಲ್ಲಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದರು.
ದೊರೆತಿರುವ ಶವಗಳ ಗುರುತು ಪತ್ತೆಹಚ್ಚುವಿಕೆಗಾಗಿ ಕ್ಲಾರ್ಕ್ ಕೌಂಟಿ ಕೊರೋನರ್ಸ್ ಕಚೇರಿಗೆ ಕೊಂಡೊಯ್ಯಲಾಗಿದೆ. ಈ ಬಗ್ಗೆ ಮಾಹಿತಿ ಇದ್ದವರು ಕಚೇರಿಯನ್ನು ಸಂಪರ್ಕಿಸಬಹುದು ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ : ಗಡಿ ದಾಟುತ್ತಿದ್ದ ಟ್ರಕ್‌ನಲ್ಲಿ ರಾಶಿ - ರಾಶಿ ಹೆಣಗಳು ಪತ್ತೆ.. 46 ಸಾವು, 16 ಜನ ಅಸ್ವಸ್ಥ, ಪೊಲೀಸ್ ಹೈ ಅಲರ್ಟ್