ಕ್ವೆಟ್ಟಾ (ಪಾಕಿಸ್ತಾನ): ಪ್ರಕ್ಷುಬ್ಧ ಸ್ಥಿತಿಯಲ್ಲಿರುವ ಬಲೂಚಿಸ್ತಾನ್ ಪ್ರಾಂತ್ಯದ ಝರ್ಘೂನ್ ಪ್ರದೇಶದ ಭದ್ರತಾ ಪೋಸ್ಟ್ ಮೇಲೆ ಉಗ್ರರು ದಾಳಿ ನಡೆಸಿದ್ದು ಒಬ್ಬ ಭಯೊತ್ಪಾದಕ ಗುಂಡಿಗೆ ಬಲಿಯಾದರೆ, ಮೂವರು ಯೋಧರು ಸಾವಿಗೀಡಾಗಿದ್ದಾರೆ ಎಂದು ಪಾಕಿಸ್ತಾನ ಸೇನೆಯ ಮಾಧ್ಯಮ ವ್ಯವಹಾರಗಳ ವಿಭಾಗ ತಿಳಿಸಿದೆ. ಈ ಕುರಿತು ಇಂಟರ್-ಸರ್ವೀಸಸ್ ಪಬ್ಲಿಕ್ ರಿಲೇಶನ್ಸ್ (ISPR) ನೀಡಿದ ಹೇಳಿಕೆಯಲ್ಲಿ, ಗುಂಡಿನ ದಾಳಿ ನಡೆದ ಪ್ರದೇಶದಲ್ಲಿ ಕಲ್ಲಿದ್ದಲು ಗಣಿಗಳನ್ನು ಗುರಿಯಾಗಿಸಿದ್ದಾರೆ. ಅಲ್ಲಿ ನಡೆಯುವ ಸುಲಿಗೆ ಪ್ರಯತ್ನಗಳಿಗೆ ಕಡಿವಾಣ ಹಾಕಲು ಇತ್ತೀಚೆಗೆ ಚೆಕ್ ಪೋಸ್ಟ್ ಸ್ಥಾಪಿಸಲಾಗಿತ್ತು. ಇವುಗಳ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದಾರೆ ಎಂದು ತಿಳಿಸಿದೆ.
ಭಯೋತ್ಪಾದಕರ ವಿರುದ್ಧ ಭದ್ರತಾ ಪಡೆಗಳು ಕೂಡಾ ಪ್ರತಿದಾಳಿ ನಡೆಸಿವೆ. ಎನ್ಕೌಂಟರ್ನಲ್ಲಿ ಮೂವರು ಯೋಧರು ಹತರಾಗಿದ್ದಾರೆ. ಒಬ್ಬ ಭಯೋತ್ಪಾದಕನನ್ನು ಹೊಡೆದುರುಳಿಸಲಾಗಿದೆ ಎಂದು ಸೇನೆ ಮಾಹಿತಿ ನೀಡಿದೆ. ಕಳೆದ ವರ್ಷದಲ್ಲಿ ನಡೆದ 436 ಭಯೋತ್ಪಾದಕ ದಾಳಿಗಳಲ್ಲಿ ಕನಿಷ್ಠ 293 ಜನರು ಸಾವನ್ನಪ್ಪಿದ್ದರು. 521 ಮಂದಿ ಗಾಯಗೊಂಡಿದ್ದರು ಎಂದು ISPR ಮಹಾ ನಿರ್ದೇಶಕ ಮೇಜರ್ ಜನರಲ್ ಅಹ್ಮದ್ ಷರೀಫ್ ಚೌಧರಿ ಇತ್ತೀಚೆಗೆ ಹೇಳಿದ್ದರು. ಪ್ರಸಕ್ತ ವರ್ಷದಲ್ಲಿ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯಲ್ಲಿ ಒಟ್ಟಾರೆ 137 ಭದ್ರತಾ ಸಿಬ್ಬಂದಿ ಪ್ರಾಣ ಕಳೆದುಕೊಂಡಿದ್ದಾರೆ. 117 ಮಂದಿ ಗಾಯಗೊಂಡಿದ್ದಾರೆ ಎಂದು ವಿವರ ನೀಡಿದ್ದಾರೆ.
ಇದನ್ನೂ ಓದಿ: ಜಿ-7 ಶೃಂಗಸಭೆ.. ಪ್ರಧಾನಿ ಮೋದಿ - ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮಾತುಕತೆ
ಪ.ಆಫ್ರಿಕಾದ ಬುರ್ಕಿನಾ ಫಾಸೊದಲ್ಲಿ ಉಗ್ರರ ಅಮಾನವೀಯ ದಾಳಿ: ಕಳೆದ ತಿಂಗಳು ಎಪ್ರಿಲ್ನಲ್ಲಿ ಇಸ್ಲಾಮಿಕ್ ಉಗ್ರಗಾಮಿಗಳು ಪಶ್ಚಿಮ ಆಫ್ರಿಕಾದ ರಾಷ್ಟ್ರ ಉತ್ತರ ದಿಕ್ಕಿನಲ್ಲಿರುವ ಬುರ್ಕಿನಾ ಫಾಸೊದಲ್ಲಿ ಭೀಕರ ಗುಂಡಿನ ದಾಳಿ ನಡೆಸಿದ್ದರು. ಇದರ ಪರಿಣಾಮ 44 ಜನರು ಹತರಾಗಿದ್ದರು. ಸೆನೋ ಪ್ರಾಂತ್ಯದ ಕೌರಕೌ ಮತ್ತು ತೊಂಡೋಬಿ ಮೇಲೆ ಜಿಹಾದಿಗಳು ದಾಳಿ ನಡೆಸಿದ್ದು, ನಾಗರಿಕರಲ್ಲಿ ಭೀತಿ ಉಂಟು ಮಾಡಿದ್ದರು. ಇಲ್ಲಿ ಇಸ್ಲಾಮಿಕ್ ಉಗ್ರರು ನಿರಂತರ ದಾಳಿ ನಡೆಸುತ್ತಿದ್ದು ಜನ, ಆಸ್ತಿಪಾಸ್ತಿಗೆ ತೀವ್ರ ಹಾನಿಯಾಗಿದೆ.
ಈ ರಾಷ್ಟ್ರವು ಅಲ್-ಖೈದಾ ಮತ್ತು ಇಸ್ಲಾಮಿಕ್ ಸ್ಟೇಟ್ ಗುಂಪಿಗೆ ಸಂಬಂಧಿಸಿದ ಜಿಹಾದಿ ಹಿಂಸಾಚಾರದಿಂದ ನಲುಗಿ ಹೋಗಿದೆ. 6 ವರ್ಷಗಳಲ್ಲಿ ಸಾವಿರಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಇಲ್ಲಿಯವರೆಗೂ 2 ಮಿಲಿಯನ್ ಜನರು ಸ್ಥಳಾಂತರಗೊಂಡಿದ್ದಾರೆ. ಜಿಹಾದಿಗಳು ದೇಶಾದ್ಯಂತ ಅನೇಕ ದಾಳಿಗಳಲ್ಲಿ ಸೈನಿಕರು ಮತ್ತು ನಾಗರಿಕರು ಸೇರಿದಂತೆ ಕನಿಷ್ಠ 32 ಜನರನ್ನು ಹತ್ಯೆ ಮಾಡಿದ್ದಾರೆ. ಹಿಂಸಾಚಾರ ದೇಶದ ಇತಿಹಾಸದಲ್ಲಿ ಅತ್ಯಂತ ಕೆಟ್ಟ ಮಾನವೀಯ ಬಿಕ್ಕಟ್ಟು ಸೃಷ್ಟಿಸಿದೆ. ವಿಶ್ವಸಂಸ್ಥೆಯ ಪ್ರಕಾರ, ಐದು ನಾಗರಿಕರಲ್ಲಿ ಒಬ್ಬರು ಉಗ್ರ ದಾಳಿಗೆ ಒಳಗಾಗುತ್ತಿದ್ದಾರೆ. ಸುಮಾರು 4.7 ಮಿಲಿಯನ್ ಜನರು ಮಾನವೀಯ ನೆರವಿಗೆ ಮೊರೆ ಇಡುವಂತಾಗಿದೆ ಎಂದು ಅಸಹಾಯಕತೆ ವ್ಯಕ್ತಪಡಿಸಿದೆ.
ಇದನ್ನೂ ಓದಿ: ಭಾರತ-ಬ್ರಿಟನ್ ಆಲಿಂಗನ: ರಿಷಿ ಸುನಕ್ ಜೊತೆ ಮೋದಿ ದ್ವಿಪಕ್ಷೀಯ ಮಾತುಕತೆ