ಕರಾಚಿ (ಪಾಕಿಸ್ತಾನ) : ಪಾಕಿಸ್ತಾನದ ರೂಪಾಯಿ ಡಾಲರ್ ಎದುರು ಪಾತಾಳಕ್ಕಿಳಿದಿದೆ. ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಸಾಲ ಯೋಜನೆ ಪುನರುಜ್ಜೀವನ ವಿಳಂಬವಾಗುತ್ತಿರುವ ಮಧ್ಯದಲ್ಲೇ ಮಂಗಳವಾರ ಇಂಟರ್‌ಬ್ಯಾಂಕ್ ಮಾರುಕಟ್ಟೆಯಲ್ಲಿ ಯುಎಸ್ ಡಾಲರ್ ಎದುರು ಪಾಕಿಸ್ತಾನ ರೂಪಾಯಿ 288 ರೂ. ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ತಲುಪಿದೆ. ಇದರ ಜೊತೆಗೆ ಪಾಕಿಸ್ತಾನವು ವಿದೇಶಿ ಸಾಲ ಮರುಪಾವತಿ ಮಾಡಲಾಗದ ಹಂತ್ಕೆಕ ತಲುಪಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಮಂಗಳವಾರ ಬೆಳಗ್ಗೆ ಸುಮಾರು 10.23 ಗಂಟೆಗೆ ಪಾಕ್ ಕರೆನ್ಸಿಯು ಡಾಲರ್ ಎದುರು ಶೇಕಡಾ 1 (ಅಥವಾ ರೂ 2.86) ಕುಸಿದು 287.90 ಕ್ಕೆ ತಲುಪಿದೆ. ಇದಕ್ಕೂ ಒಂದು ದಿನ ಮುನ್ನ ಪಾಕ್ ರೂಪಾಯಿ ಮೌಲ್ಯವು ಯುಎಸ್ ಡಾಲರ್ ಎದುರು 285.04 ರೂ. ಮಟ್ಟದಲ್ಲಿ ಕೊನೆಗೊಂಡಿತ್ತು.
ಆತಂಕದ ಹಿನ್ನೆಲೆಯಲ್ಲಿ ಆಮದುದಾರರು US ಡಾಲರ್‌ಗಳ ಖರೀದಿಯನ್ನು ಪುನರಾರಂಭಿಸಿದ್ದಾರೆ ಎಂದು ಮಾರುಕಟ್ಟೆಯಲ್ಲಿನ ಬೆಳವಣಿಗೆಗಳು ಸೂಚಿಸಿವೆ. ಆದರೆ ಅಂತರಬ್ಯಾಂಕ್ ಮಾರುಕಟ್ಟೆಯಲ್ಲಿ ಡಾಲರ್ ಪೂರೈಕೆಯು ಕಡಿಮೆಯಾಗಿದೆ. ಪಾಕಿಸ್ತಾನದ ಹಣಕಾಸು ಸಚಿವ ಇಶಾಕ್ ದಾರ್ ಅವರು ಏಪ್ರಿಲ್ 10-16 ರಂದು ಅಮೆರಿಕಕ್ಕೆ ಭೇಟಿ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಅವರು 6.5 ಶತಕೋಟಿ ಡಾಲರ್ ಮೌಲ್ಯದ IMF ಸಾಲ ಕಾರ್ಯಕ್ರಮವನ್ನು ಪುನರಾರಂಭಿಸಲು ಪ್ರಯತ್ನ ಮಾಡಲಿದ್ದಾರೆ.
ಅಮೆರಿಕ ಭೇಟಿಯ ಸಮಯದಲ್ಲಿ ದಾರ್ ಅವರು ವಾಷಿಂಗ್ಟನ್ ಡಿಸಿಯಲ್ಲಿನ ಇತರ ಉನ್ನತ ಅಧಿಕಾರಿಗಳೊಂದಿಗೆ ಐಎಂಎಫ್ ಮತ್ತು ವಿಶ್ವಬ್ಯಾಂಕ್‌ನ ವಾರ್ಷಿಕ ಸಭೆಗಳಲ್ಲಿ ಭಾಗವಹಿಸಲಿದ್ದಾರೆ ಎಂದು ಸರ್ಕಾರ ಹೇಳಿದೆ. ನವೆಂಬರ್ 2022 ರಿಂದ ಸ್ಥಗಿತಗೊಂಡ ಹಣಕಾಸು ನೆರವಿನ ಯೋಜನೆಯನ್ನು ಪುನರಾರಂಭಿಸುವ ಸಲುವಾಗಿ ಪಾಕಿಸ್ತಾನವು ಜನವರಿ ಅಂತ್ಯದಿಂದ ಐಎಂಎಫ್ನೊಂದಿಗೆ ಮಾತುಕತೆ ನಡೆಸುತ್ತಿದೆ. ಐಎಂಎಫ್ ನೆರವಿನ ವಿಳಂಬದಿಂದ ಡಾಲರ್ ಒಳಹರಿವು ನಿಂತು ಹೋಗುವಂತಾಗಿದೆ. ಅದರಂತೆ, ದೇಶದ ವಿದೇಶಿ ವಿನಿಮಯ ಸಂಗ್ರಹವು ಪ್ರಸ್ತುತ 4.2 ಶತಕೋಟಿ ಡಾಲರ್ನಷ್ಟು ಕಡಿಮೆ ಮಟ್ಟಕ್ಕೆ ಕುಸಿದಿದೆ.
ಸೌದಿ ಅರೇಬಿಯಾ ತನಗೆ ಮತ್ತೊಂದು ಹಂತದ ಹಣಕಾಸು ನೆರವು ನೀಡಲು ಸಿದ್ಧವಾಗಿದೆ ಎಂದು ಪಾಕಿಸ್ತಾನ ಸರ್ಕಾರ ಹೇಳಿಕೊಂಡಿದೆ. ಆದರೆ ಸೌದಿ ಅರೇಬಿಯಾ ಯಾವಾಗ ಮತ್ತು ಎಷ್ಟು ಸಹಾಯ ಮಾಡಲಿದೆ ಎಂಬುದು ಅನಿಶ್ಚಿತವಾಗಿದೆ. ದೇಶದಲ್ಲಿ ಹೆಚ್ಚುತ್ತಿರುವ ರಾಜಕೀಯ ಮತ್ತು ಆರ್ಥಿಕ ಅಸ್ಥಿರತೆಯಿಂದಾಗಿ IMF ಮತ್ತು ಸ್ನೇಹಪರ ರಾಷ್ಟ್ರಗಳು ಪಾಕಿಸ್ತಾನಕ್ಕೆ ಸಹಾಯ ಮಾಡುವುದನ್ನು ನಿಲ್ಲಿಸಿವೆ ಎಂದು ಹಣಕಾಸು ತಜ್ಞರು ಹೇಳುತ್ತಾರೆ.
ಪಾಕಿಸ್ತಾನದ ಪಂಜಾಬ್ನಲ್ಲಿ ಚುನಾವಣೆ ನಡೆಸಲು ಕೋರ್ಟ್ ಆದೇಶ: ದೇಶದ ಎರಡು ಪ್ರಾಂತ್ಯಗಳಲ್ಲಿನ ಅಸೆಂಬ್ಲಿ ಚುನಾವಣೆಯನ್ನು ವಿಳಂಬಗೊಳಿಸುವ ದೇಶದ ಚುನಾವಣಾ ಸಮಿತಿಯ ನಿರ್ಧಾರವನ್ನು ಪಾಕಿಸ್ತಾನದ ಸುಪ್ರೀಂ ಕೋರ್ಟ್ ಅಸಂವಿಧಾನಿಕ ಎಂದು ಘೋಷಿಸಿದೆ. ಮೇ 14 ರಂದು ದೇಶದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಪಂಜಾಬ್ ಪ್ರಾಂತ್ಯದಲ್ಲಿ ಕ್ಷಿಪ್ರ ಚುನಾವಣೆ ನಡೆಸುವಂತೆ ಸುಪ್ರೀಂ ಕೋರ್ಟ್ ಮಂಗಳವಾರ ಸರ್ಕಾರಕ್ಕೆ ಆದೇಶ ನೀಡಿದೆ. ಮಾಜಿ ಪ್ರಧಾನಿ ಇಮ್ರಾನ್ ಖಾನ್ ನೇತೃತ್ವದ ಪ್ರಮುಖ ಪ್ರತಿಪಕ್ಷ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಪಕ್ಷ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಈ ತೀರ್ಪು ನೀಡಿದೆ.
ಇದನ್ನೂ ಓದಿ : ಹವಾಮಾನ ಬದಲಾವಣೆಯಿಂದ ಕೋವಿಡ್ ಸೋಂಕು ಹೆಚ್ಚಳ: ನಿರ್ಲಕ್ಷ್ಯ ಬೇಡ, ಮುನ್ನೆಚ್ಚರಿಕೆ ಇರಲಿ