ವಿಶ್ವದ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾದ ನೊಬೆಲ್ ಪ್ರಶಸ್ತಿ ಘೋಷಣೆ ಇಂದಿನಿಂದ ಆರಂಭವಾಗಲಿದ್ದು, ಅಕ್ಟೋಬರ್ 9ರವರೆಗೆ ಘೋಷಣೆ ನಡೆಯಲಿದೆ. ಸ್ಟಾಕ್ಹೋಮ್ನಲ್ಲಿರುವ ರಾಯಲ್ ಸ್ವೀಡಿಶ್ ಅಕಾಡೆಮಿ ಆಫ್ ಸೈನ್ಸಸ್ ಈ ಪ್ರಶಸ್ತಿ ಪುರಸ್ಕೃತರ ಹೆಸರುಗಳನ್ನು ಘೋಷಿಸಲಿದ್ದು, ವಿವಿಧ ಕ್ಷೇತ್ರಗಳಲ್ಲಿ ಅಸಾಧಾರಾಣ ಕೊಡುಗೆ ನೀಡಿರುವ ವ್ಯಕ್ತಿಗಳು ಅಥವಾ ಸಂಸ್ಥೆಗಳನ್ನು ನೊಬೆಲ್ ಮೂಲಕ ಗೌರವಿಸಲಿದೆ.
ಮೊದಲ ದಿನ ಅಂದರೆ ಇಂದು ಶರೀರಶಾಸ್ತ್ರ ಅಥವಾ ವೈದ್ಯಕೀಯ ಕ್ಷೇತ್ರ, ಅಕ್ಟೋಬರ್ 3 ರಂದು ಭೌತಶಾಸ್ತ್ರ, ಅ. 4ರಂದು ರಸಾಯನಶಾಸ್ತ್ರ, ಅ. 5ರಂದು ಸಾಹಿತ್ಯ ಕ್ಷೇತ್ರ, ಅ.6ರಂದು ಶಾಂತಿ, ಅ. 9 ರಂದು ಆರ್ಥಿಕ ವಿಜ್ಞಾನ ಕ್ಷೇತ್ರದಲ್ಲಿ ಸ್ವೆರಿಜನ್ ರಿಕ್ಸ್ಬ್ಯಾಂಕ್ ಪ್ರಶಸ್ತಿ ಪುರಸ್ಕೃತರ ಹೆಸರು ಘೋಷಣೆಯಾಗಲಿದೆ. ಈ ವಾರ್ಷಿಕ ಪ್ರಶಸ್ತಿಯನ್ನು ಘೋಷಣೆ ಮಾಡಲು ಸಮಿತಿಗಳು ಸ್ಟಾಕ್ಹೋಮ್ ಹಾಗೂ ಓಸ್ಲೋದಲ್ಲಿ ಒಟ್ಟಾಗಿ ಸೇರುತ್ತವೆ. ಸ್ವೀಡಿಷ್ ರಾಜಧಾನಿಯ ಕರೋಲಿನ್‌ಸ್ಕಾ ಇನ್‌ಸ್ಟಿಟ್ಯೂಟ್‌ನಲ್ಲಿ ನ್ಯಾಯಾಧೀಶರ ಸಮಿತಿ ವೈದ್ಯಕೀಯ ಅಥವಾ ಶರೀರಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ಘೋಷಿಸಲಿದೆ.
ಇದುವರೆಗೆ ಭಾರತದ, ರವೀಂದ್ರನಾಥ ಟಾಗೋರ್, ಸಿ. ವಿ. ರಾಮನ್, ಹರ್ ಗೋವಿಂದ್ ಖೊರಾನಾ, ಮದರ್ ತೆರೆಸಾ ಸೇರಿದಂತೆ ಹಲವು ಗಣ್ಯ ವ್ಯಕ್ತಿಗಳು ಈ ನೊಬೆಲ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅಂತಹ ನೊಬೆಲ್ ಪ್ರಶಸ್ತಿ ಬಗ್ಗೆ ತಿಳಿದುಕೊಳ್ಳಲೇಬೇಕಾದ ಕೆಲವು ವಿಷಯಗಳು ಇಲ್ಲಿವೆ.
ಅತ್ಯುತ್ತಮ ಸಾಧನೆಗಳನ್ನು ಗುರುತಿಸಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೊಡುವ ನೊಬೆಲ್ ಪ್ರಶಸ್ತಿಯನ್ನು 19ನೇ ಶತಮಾನದಲ್ಲಿ ಉದ್ಯಮಿ ಹಾಗೂ ರಸಾಯನಶಾಸ್ತ್ರಜ್ಞ ಅಲ್ಫ್ರೆಡ್ ನೊಬೆಲ್ ಅವರು ಈ ಪ್ರಶಸ್ತಿಯನ್ನು ಸ್ಥಾಪಿಸಿದರು. ನೊಬೆಲ್ ಅವರ ಮರಣದ ಐದು ವರ್ಷಗಳ ನಂತರ 1901ರಲ್ಲಿ ಮೊದಲ ನೊಬೆಲ್ ಪ್ರಶಸ್ತಿ ಘೋಷಿಸಲಾಯಿತು. 1968ರಲ್ಲಿ ಸ್ವೀಡನ್ನ ಕೇಂದ್ರ ಬ್ಯಾಂಕ್ ಅರ್ಥಶಾಸ್ತ್ರಕ್ಕಾಗಿ ಆರನೇ ಪ್ರಶಸ್ತಿಯನ್ನು ರಚಿಸಿ, ನೀಡಲಾರಂಭಿಸಿತು. ಅರ್ಥಶಾಸ್ತ್ರ ಕ್ಷೇತ್ರದಲ್ಲಿ ನೀಡುವ ಈ ಪ್ರಶಸ್ತಿ ತಾಂತ್ರಿಕವಾಗಿ ನೊಬೆಲ್ ಪ್ರಶಸ್ತಿಯಲ್ಲ ಎಂದು ನೊಬೆಲ್ ವಾದಕರು ಒತ್ತಿ ಹೇಳಿದರೂ, ಆ ಪ್ರಶಸ್ತಿಯನ್ನು ಯಾವಾಗಲೂ ನೊಬೆಲ್ ಪುರಸ್ಕೃತರ ಜೊತೆಗೆ ನೀಡಲಾಗುತ್ತದೆ.
ವಿವಿಧ ಕ್ಷೇತ್ರಗಳಲ್ಲಿ ನೀಡಲಾಗುವ ಈ ನೊಬೆಲ್ ಪ್ರಶಸ್ತಿ ವಿಜೇತರನ್ನು ವಿವಿಧ ಸಮಿತಿಗಳು ಆಯ್ಕೆ ಮಾಡುತ್ತವೆ. ಭೌತಶಾಸ್ತ್ರ ಹಾಗೂ ರಸಾಯನಶಾಸ್ತ್ರ, ಅರ್ಥಶಾಸ್ತ್ರ, ಸಾಹಿತ್ಯ ಪ್ರಶಸ್ತಿಗಳನ್ನು ರಾಯಲ್ ಸ್ವೀಡಿಶ್ ಅಕಾಡೆಮಿ ಆಫ್ ಸೈನ್ಸನ್ ಆಯ್ಕೆ ಮಾಡುತ್ತದೆ. ವೈದ್ಯಕೀಯ ಕ್ಷೇತ್ರದ ವಿಜೇತರನ್ನು ಕರೋಲಿನ್ಸ್ಕಾಇನ್ಸ್ಟಿಟ್ಯೂಟ್ನ ನೊಬೆಲ್ ಅಸೆಂಬ್ಲಿ ಆಯ್ಕೆ ಮಾಡುತ್ತದೆ. ನೊಬೆಲ್ ಶಾಂತಿ ಪ್ರಶಸ್ತಿಯನ್ನು ನಾರ್ವೇಜಿಯನ್ ನೊಬೆಲ್ ಸಮಿತಿ ಆಯ್ಕೆ ಮಾಡುತ್ತದೆ.
ನಾರ್ವೆಯಲ್ಲಿ ನೀಡಲಾಗುವ ಶಾಂತಿ ಪ್ರಶಸ್ತಿ: ಉಳಿದ ಎಲ್ಲ ಕ್ಷೆತ್ರಗಳ ಪ್ರಶಸ್ತಿಯನ್ನು ಸ್ವೀಡನ್ನಲ್ಲಿ ನೀಡದರೆ, ಶಾಂತಿ ನೊಬೆಲ್ ಪ್ರಶಸ್ತಿಯನ್ನು ಮಾತ್ರ ನಾರ್ವೆಯಲ್ಲಿ ನೀಡಲಾಗುತ್ತದೆ. ಇದಕ್ಕೆ ಸ್ಪಷ್ಟ ಕಾರಣವಿಲ್ಲದೇ ಇದ್ದರೂ, ಕೆಲವು ನೊಬೆಲ್ ಇತಿಹಾಸಕಾರರು ಮಾತ್ರ, ಸ್ವೀಡನ್ನ ಮಿಲಿಟರಿ ತಿಹಾಸವೂ ಇದಕ್ಕೆ ಕಾರಣವಾಗಿರಬಹುದು ಎಂದು ಊಹಿಸಿದ್ದಾರೆ.
ಇಂದಿಗೂ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಸಂಪೂರ್ಣವಾಗಿ ನಾರ್ವೆಯವರೇ ನಿರ್ವಹಿಸುತ್ತಾರೆ. ಶಾಂತಿ ನೊಬೆಲ್ ಪುರಸ್ಕೃತರನ್ನು ನಾರ್ವೇಜಿಯನ್ ಸಮಿತಿ ಆಯ್ಕೆ ಮಾಡಿ ಘೋಷಣೆ ಮಾಡುತ್ತದೆ. ಜೊತೆಗೆ ನಾರ್ವೇಜಿಯನ್ ರಾಜಧಾನಿ ಓಸ್ಲೋದಲ್ಲಿ ಡಿ. 10ರಂದು ಶಾಂತಿ ಪ್ರಶಸ್ತಿಯನ್ನು ನೀಡಲು ತನ್ನದೇ ಆದ ಸಮಾರಂಭವನ್ನು ಆಯೋಜಿಸುತ್ತದೆ. ಉಳಿದ ನೊಬೆಲ್ ಪ್ರಶಸ್ತಿಗಳನ್ನು ಸ್ಟಾಕ್ಹೋಮ್ನಲ್ಲಿ ನೀಡಲಾಗುತ್ತದೆ.
ಚಿನ್ನದ ಜೊತೆಗೆ ನಗದು ಬಹುಮಾನ: ಈ ಬಾರಿ ನೊಬೆಲ್ ಫೌಂಡೇಶನ್ ಪ್ರಶಸ್ತಿಯ ಮೊತ್ತವನ್ನು ಹೆಚ್ಚಳ ಮಾಡಿದೆ. ಪ್ರಶಸ್ತಿ ಮೊತ್ತವನ್ನು 10 ಮಿಲಿಯನ್ ಸ್ವೀಡಿಶ್ ಕ್ರೌನ್ನಿಂದ 11 ಮಿಲಿಯನ್ ಸ್ವೀಡಿಶ್ ಕ್ರೌನ್ಗೆ ಹೆಚ್ಚಳ ಮಾಡಿದೆ. ನಮ್ಮ ಭಾರತದ ರೂಪಾಯಿ ಲೆಕ್ಕದಲ್ಲಿ ನೋಡುವುದಾದರೆ 8.19 ಕೋಟಿ ರೂಪಾಯಿಯನ್ನು ಪುರಸ್ಕೃತರು ಪ್ರಶಸ್ತಿ ಜೊತೆಗೆ ಪಡೆಯುತ್ತಾರೆ. ಡಿಸೆಂಬರ್ನಲ್ಲಿ ನಡೆಯಲಿರುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪುರಸ್ಕೃತರಿಗೆ ಪ್ರಶಸ್ತಿ, ಹಣದ ಜೊತೆಗೆ 19 ಕ್ಯಾರೆಟ್ ಚಿನ್ನದ ಪದಕವೂ ದೊರೆಯಲಿದೆ.
ವಿಶ್ವದ ಅದೆಷ್ಟೋ ಸಾಧಕರು ನೊಬೆಲ್ ಪ್ರಶಸ್ತಿಗೆ ಭಾಜನರಾಗಿದ್ದರೆ, ಅದರಲ್ಲಿ ಇಬ್ಬರು ನೊಬೆಲ್ ಅನ್ನು ತಿರಸ್ಕರಿಸಿದ್ದಾರೆ. 1964ರಲ್ಲಿ ಫ್ರೆಂಚ್ ಬರಹಗಾರ ಜೀನ್- ಪಾಲ್ ಸಾರ್ತ್ರೆ ತಮ್ಮ ಸಾಹಿತ್ಯ ಪ್ರಶಸ್ತಿಯನ್ನು ತಿರಸ್ಕರಿಸಿದ್ದರು. ಮತ್ತು 1973ರಲ್ಲಿ ಯುಎಸ್ ರಾಜತಾಂತ್ರಿಕ ಹೆನ್ರಿ ಕಿಸ್ಸಿಂಜರ್ ಜೊತೆಗೆ ಪ್ರಶಸ್ತಿಯನ್ನು ಹಂಚಿಕೊಳ್ಳಬೇಕಾಗಿದ್ದ ಶಾಂತಿ ಪ್ರಶಸ್ತಿಯನ್ನು ವಿಒಯೆಟ್ನಾಂ ರಾಜಕಾರಣಿ ಲೆ ಡಕ್ ಥೋ ನಿರಾಕರಿಸಿದ್ದರು.
ಉಕ್ರೇನ್ ಮತ್ತು ರಷ್ಯಾದ ಮಾನವ ಹಕ್ಕುಗಳ ಸಂಘಗಳೊಂದಿಗೆ ಕಳೆದ ವರ್ಷದ ಶಾಂತಿ ಪ್ರಶಸ್ತಿಯನ್ನು ಹಂಚಿಕೊಂಡ ಬೆಲರೂಸಿಯನ್ ಪ್ರಜಾಪ್ರಭುತ್ವ ಪರ ಕಾರ್ಯಕರ್ತ ಅಲೆಸ್ ಬಿಯಾಲಿಯಾಟ್ಸ್ಕಿ ಜೈಲಿನಲ್ಲಿದ್ದ ಕಾರಣ ಅವರ ಪ್ರಶಸ್ತಿ ಸ್ವೀಕರಿಸಲು ಸಾಧ್ಯವಾಗಲಿಲ್ಲ.
ಇದನ್ನೂ ಓದಿ: ಅಮೆರಿಕದ ಮೂವರು ಅರ್ಥಶಾಸ್ತ್ರಜ್ಞರಿಗೆ ನೊಬೆಲ್ ಪುರಸ್ಕಾರ