ಕ್ಯಾಲಿಫೋರ್ನಿ(ಯುಎಸ್‌ಎ): ಕ್ಯಾಲಿಫೋರ್ನಿಯಾದ ಸ್ಯಾಕ್ರಮೆಂಟೊ ಕಂಟ್ರಿಯ ಗುರುದ್ವಾರದಲ್ಲಿ ಭಾನುವಾರ ಗುಂಡಿನ ದಾಳಿ ನಡೆದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಸ್ಯಾಕ್ರಮೆಂಟೊ ಕೌಂಟಿ ಶೆರಿಫ್ ಕಚೇರಿಯ ಮೂಲಗಳನ್ನು ಉಲ್ಲೇಖಿಸಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಗುರುದ್ವಾರದಲ್ಲಿ ಆಯೋಜಿಸಲಾಗಿದ್ದ ಸಿಖ್ ಕಾರ್ಯಕ್ರಮದ ವೇಳೆ ಪರಸ್ಪರ ಪರಿಚಿತ ವ್ಯಕ್ತಿಗಳ ನಡುವೆ ಹೊಡೆದಾಟ ಆರಂಭವಾಗಿತ್ತು. ಗುಂಡಿನ ದಾಳಿ ದ್ವೇಷದ ಅಪರಾಧಕ್ಕೆ ಸಂಬಂಧಿಸಿಲ್ಲ ಎಂದು ಕೌಂಟಿ ಶೆರಿಫ್ ಕಚೇರಿಯ ವಕ್ತಾರರು ತಿಳಿಸಿದ್ದಾರೆ.
ಮಧ್ಯಾಹ್ನ 2:30ರ(ಸ್ಥಳೀಯ ಕಾಲಮಾನ) ಸುಮಾರಿಗೆ ಗುರುದ್ವಾರದ ಮೈದಾನದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ವ್ಯಕ್ತಿಗಳು ಭಾಗಿಯಾಗಿದ್ದರು. ಶಂಕಿತರಲ್ಲಿ ಒಬ್ಬ ಭಾರತೀಯ ವ್ಯಕ್ತಿ ಎನ್ನಲಾಗಿದೆ. ಒಬ್ಬ ವ್ಯಕ್ತಿ ಮತ್ತೊಬ್ಬ ವ್ಯಕ್ತಿಗೆ ಗುಂಡು ಹಾರಿಸಿದ. ನಂತರ ಮತ್ತೊಬ್ಬ ವ್ಯಕ್ತಿ ಆ ವ್ಯಕ್ತಿಗೆ ಗುಂಡು ಹಾರಿಸುವ ಮೂಲಕ ಪ್ರತೀಕಾರ ತೀರಿಸಿಕೊಂಡ. ಆತ ಸ್ಥಳದಿಂದ ಪರಾರಿಯಾಗಿದ್ದಾನೆ. ತಲೆಮರೆಸಿಕೊಂಡಿರುವ ಶೂಟರ್‌ಗಾಗಿ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ.
"ಘಟನೆಯಲ್ಲಿ ಇಬ್ಬರು ವ್ಯಕ್ತಿಗಳಿಗೆ ಗಂಭೀರವಾದ ಗಾಯಗಳಾಗಿವೆ. ಇಬ್ಬರೂ ವ್ಯಕ್ತಿಗಳು 20-30ರ ಹರೆಯದವರಾಗಿದ್ದು, ಇಬ್ಬರೂ ಪರಸ್ಪರ ಗೊತ್ತಿರುವಂತೆ ತೋರುತ್ತಿದೆ. ಸ್ಥಳ ಪರಿಶೀಲನೆ ನಡೆಸಲಾಗುತ್ತಿದೆ. ಗುಂಡಿನ ದಾಳಿಯ ಹಿಂದಿರುವ ಉದ್ದೇಶ ತಿಳಿದು ಬಂದಿಲ್ಲ. ಆರೋಪಿಗಳಿಗಾಗಿ ತನಿಖೆ ಆರಂಭಿಸಲಾಗಿದೆ" ಎಂದು ಕೌಂಟಿ ಶೆರಿಫ್ ಕಚೇರಿಯ ವಕ್ತಾರ ಅಮರ್ ಗಾಂಧಿ ತಿಳಿಸಿದ್ದಾರೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗುತ್ತಿದೆ.
ಸ್ಯಾಕ್ರಮೆಂಟೊ ಸಿಖ್ ಸೊಸೈಟಿಯು ಭಾನುವಾರ ಬ್ರಾಡ್‌ಶಾ ರಸ್ತೆಯ ಗುರುದ್ವಾರದಲ್ಲಿ ಕೀರ್ತನೆ ಕಾರ್ಯಕ್ರಮ ಆಯೋಜಿಸಿತ್ತು. ಸಾವಿರಾರು ಮಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಬೆಳಗ್ಗೆ 10 ಗಂಟೆಗೆ ಮೆರವಣಿಗೆ ನಡೆದಿದ್ದು, ಸಂಜೆ 5 ಗಂಟೆಯವರೆಗೆ ಕಾರ್ಯಕ್ರಮ ನಡೆಯುವ ನಿರೀಕ್ಷೆ ಇತ್ತು. ಆದರೆ ಘಟನೆಯ ನಂತರ ಕಾರ್ಯಕ್ರಮವನ್ನು ರದ್ದುಪಡಿಸಲಾಗಿದೆ.
ಇದನ್ನೂ ಓದಿ: ಭಾರತೀಯ-ಅಮೆರಿಕನ್ ಮಗು ಹತ್ಯೆ ಪ್ರಕರಣ: ಅಪರಾಧಿಗೆ 100 ವರ್ಷ ಜೈಲು ಶಿಕ್ಷೆ!
ಅಮೆರಿಕದ ಗನ್ ಸಂಸ್ಕೃತಿಗೆ ಕಡಿವಾಣ ಬೀಳುತ್ತಿಲ್ಲ. ಕಳೆದ ಕೆಲವು ವರ್ಷಗಳಿಂದ ಹಲವಾರು ಮಾರಣಾಂತಿಕ ಗುಂಡಿನ ದಾಳಿ ಹಾಗೂ ಬಂದೂಕು ಹಿಂಸಾಚಾರದ ಸರಣಿ ಕೃತ್ಯಗಳಿಗೆ ಸಾಕ್ಷಿಯಾಗಿದೆ. ಇಲ್ಲಿ ಬಂದೂಕು ಹಿಂಸಾಚಾರ ಸಾಮಾನ್ಯವಾಗಿದೆ. ಈ ಕಾರಣಕ್ಕಾಗಿ ಅಧ್ಯಕ್ಷ ಜೋ ಬೈಡನ್ ಗನ್ ಸಂಸ್ಕೃತಿಗೆ ಕಡಿವಾಣ ಆದೇಶಕ್ಕೆ ಸಹಿ ಹಾಕಿದ್ದರು. ಕಳೆದ ವರ್ಷ ಅಮೆರಿಕದಲ್ಲಿ ಅಂದಾಜು 44 ಸಾವಿರ ಗನ್-ಸಂಬಂಧಿತ ಸಾವುಗಳು ಸಂಭವಿಸಿವೆ. ಅವುಗಳಲ್ಲಿ ಅರ್ಧದಷ್ಟು ಕೊಲೆ ಪ್ರಕರಣಗಳು, ಆತ್ಮರಕ್ಷಣೆ ಮತ್ತು ಅರ್ಧದಷ್ಟು ಆತ್ಮಹತ್ಯೆಗಳು ಸೇರಿವೆ.
ಇದನ್ನೂ ಓದಿ: ಅಮೆರಿಕದಲ್ಲಿ ನಿಲ್ಲದ ಗುಂಡಿನ ದಾಳಿ: ಇಬ್ಬರು ವಿದ್ಯಾರ್ಥಿಗಳು ಸೇರಿ 9 ಮಂದಿ ಸಾವು!