ಸಾದಿಕಾಬಾದ್( ಪಾಕಿಸ್ತಾನ): ಮದುವೆ ಪಾರ್ಟಿಗೆ ತೆರಳುತ್ತಿದ್ದವರನ್ನು ತುಂಬಿಕೊಂಡು ತೆರಳುತ್ತಿದ್ದ ದೋಣಿ ಮುಳುಗಿದ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ. ಕಿಕ್ಕಿರಿದು ತುಂಬಿದ್ದ ಈ ದೋಣಿ ಮುಳುಗಿದ ಪರಿಣಾಮ ಕನಿಷ್ಠ 18 ಮಹಿಳೆಯರು ಮುಳುಗಿ ಸಾವನ್ನಪ್ಪಿದ್ದಾರೆ. 12ಕ್ಕಿಂತ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪೊಲೀಸರು ಮತ್ತು ಸ್ಥಳೀಯ ಅಧಿಕಾರಿಗಳ ಪ್ರಕಾರ, ಪಂಜಾಬ್ ಪ್ರಾಂತ್ಯದ ಸಾದಿಕಾಬಾದ್ ಉಪಜಿಲ್ಲೆಯ ಮಚ್ಕಾ ಮತ್ತು ಖರೋರ್ ಗ್ರಾಮಗಳ ನಡುವೆ ಇರುವ ನದಿಯಲ್ಲಿ ಮದುವೆ ಮಂದಿಯನ್ನು ಕರೆದೊಯ್ಯುತ್ತಿದ್ದ ದೋಣಿ ಮುಳುಗಿ ಈ ದುರ್ಘಟನೆ ನಡೆದಿದೆ. ಒಂದೇ ಕುಟುಂಬದ ಸುಮಾರು 100 ಸದಸ್ಯರು ದೋಣಿಯಲ್ಲಿದ್ದರು ಎಂದು ತಿಳಿದು ಬಂದಿದೆ.
ಹದಿನೆಂಟು ಮಹಿಳೆಯರು ಈ ಘಟನೆಯಲ್ಲಿ ಮೃತಪಟ್ಟಿದ್ದಾರೆ. 25 ರಿಂದ 30 ಜನರನ್ನು ಸ್ಥಳೀಯರು ರಕ್ಷಿಸಿದ್ದಾರೆ ಎಂದು ಸಾದಿಕಾಬಾದ್ ವಕ್ತಾರ ರಾಣಾ ಕಾಶಿಫ್ ಮೆಹಮೂದ್ ಹೇಳಿದ್ದಾರೆ. ರಕ್ಷಣಾ ಕಾರ್ಯಾಚರಣೆ ಬಿರುಸಿನಿಂದ ಸಾಗಿದೆ.
ಇದನ್ನು ಓದಿ:ಅಮೆರಿಕದಲ್ಲಿ ನಿಲ್ಲದ ಗುಂಡಿನ ದಾಳಿ: ಮಾಲ್‌ನಲ್ಲಿ ನಾಲ್ವರು ಬಲಿ, ಇಬ್ಬರಿಗೆ ಗಾಯ