ಇಸ್ಲಾಮಾಬಾದ್: ಆರ್ಥಿಕ ಬಿಕ್ಕಟ್ಟಿನಿಂದ ಕಂಗಾಲಾಗಿರುವ ಪಾಕಿಸ್ತಾನದಲ್ಲಿ ಇಂದು ನಡೆದಿರುವ ಆತಂಕಕಾರಿ ಘಟನೆಯಿಂದ ಅಲ್ಲಿನ ಜನರು ಬೆಚ್ಚಿಬಿದ್ದಿದ್ದಾರೆ. ಪೇಶಾವರದ ಮಸೀದಿಯಲ್ಲಿ ಬಾಂಬ್ ಸ್ಫೋಟ ಸಂಭವಿಸಿದ್ದು, 17 ಮಂದಿ ಸಾವನ್ನಪ್ಪಿರುವ ವರದಿ ಆಗಿದೆ. ಆತ್ಮಾಹುತಿ ದಾಳಿ (ಸೂಸೈಡ್ ಬಾಂಬರ್) ಮೂಲಕ ಈ ಕೃತ್ಯ ನಡೆಸಿರುವ ಶಂಕೆ ಇದೆ ಎನ್ನಲಾಗಿದೆ. ಮಸೀದಿಗೊಳಗೆ ಬಾಂಬ್ ಸ್ಫೋಟಿಸಿದ್ದು, ಘಟನೆಯಲ್ಲಿ 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಪೇಶಾವರದ ಪೊಲೀಸ್ ಲೈನ್ಸ್ ಪ್ರದೇಶದಲ್ಲಿರುವ ಮಸೀದಿಯಲ್ಲಿ ಸೋಮವಾರ ಮಧ್ಯಾಹ್ನದ ಪ್ರಾರ್ಥನೆ ಬಳಿಕ ಈ ಕೃತ್ಯ ನಡೆದಿದೆ. ಇಲ್ಲಿನ ರಕ್ಷಣಾ ಅಧಿಕಾರಿಗಳ ಮಾಹಿತಿ ಪ್ರಕಾರ, ಸೂಸೈಡ್ ಬಾಂಬರ್ ಮಧ್ಯಾಹ್ನದ ಪ್ರಾರ್ಥನೆ ಸಮಯದಲ್ಲಿ ಮಸೀದಿಯ ಮುಖ್ಯದ್ವಾರದಲ್ಲಿ ನಿಂತಿದ್ದ, ಆತ ತನ್ನನ್ನು ತಾನು ಸ್ಫೋಟಿಸಿಕೊಳ್ಳುವ ಮೂಲಕ ಮಾರಣಹೋಮಕ್ಕೆ ಕಾರಣವಾಗಿದ್ದಾನೆ ಎಂದಿದ್ದಾರೆ.
ಘಟನೆಯಲ್ಲಿ 13 ಜನರ ಸ್ಥಿತಿ ಚಿಂತಾಜನಕವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ ಎಂದು ಜಿಯೋ ನ್ಯೂಸ್ ವರದಿ ಮಾಡಿದೆ. ಗಾಯಗೊಂಡ ವ್ಯಕ್ತಿಗಳನ್ನು ತಕ್ಷಣಕ್ಕೆ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಅವರಿಗೆ ಚಿಕಿತ್ಸೆ ಮುಂದುವರೆದಿದೆ ಎಂದು ಪೇಶಾವರ ಲೇಡಿ ರೀಡಿಂಗ್ ಆಸ್ಪತ್ರೆ ವಕ್ತಾರರು ತಿಳಿಸಿದ್ದಾರೆ. ಸ್ಫೋಟ ನಡೆದ ಪ್ರದೇಶವನ್ನು ಸಂಪೂರ್ಣವಾಗಿ ಸೀಲ್ ಮಾಡಲಾಗಿದ್ದು, ಕೇವಲ ಅಂಬ್ಯುಲೆನ್ಸ್ ವಾಹನಗಳಿಗೆ ಮಾತ್ರ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ ಎಂದು ಡಾನ್ ವರದಿ ಮಾಡಿದೆ.
ಸ್ಫೋಟದಿಂದ ಮಸೀದಿ ಕಟ್ಟಡದ ಒಂದು ಭಾಗ ಕುಸಿದಿದ್ದು. ಹಲವು ಮಂದಿ ಇದರ ಅಡಿ ಸಿಲುಕಿರುವ ಸಾಧ್ಯತೆ ಇದ್ದು, ರಕ್ಷಣಾ ಕಾರ್ಯ ನಡೆಸಲಾಗಿದೆ. ಇದು ಸೂಸೈಡ್ ಬಾಂಬ್ ದಾಳಿಯ ಅಥವಾ ಮಸೀದಿಯಲ್ಲಿ ಬಾಂಬ್ ಇಟ್ಟು ಈ ಯೋಜನೆ ರೂಪಿಸಲಾಗಿದೆಯಾ ಎಂಬುದರ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ.
ಘಟನೆಯನ್ನು ಖಂಡಿಸಿ ಟ್ವೀಟ್ ಮಾಡಿರುವ ಪಾಕಿಸ್ತಾನ ಮಾಜಿ ಪ್ರಧಾನ ಮಂತ್ರಿ ಇಮ್ರಾಖ್ ಖಾನ್, ಪೇಶಾವರದ ಪೊಲೀಸ್ ಲೈನ್ಸ್ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ನಡೆಸಿರುವ ಘಟನೆಯನ್ನು ನಾವು ಬಲವಾಗಿ ಖಂಡಿಸುತ್ತೇವೆ. ಸಂತ್ರಸ್ತ ಕುಟುಂಬಗಳಿಗೆ ನನ್ನ ಸಾಂತ್ವನ. ಹೆಚ್ಚುತ್ತಿರುವ ಭಯೋತ್ಪಾದನೆಯ ಬೆದರಿಕೆಯನ್ನು ಎದುರಿಸಲು ನಮ್ಮ ಗುಪ್ತಚರ ಇಲಾಖೆ ಸುಧಾರಿಸುವುದು ಮತ್ತು ನಮ್ಮ ಪೊಲೀಸ್ ಪಡೆಗಳನ್ನು ಸರಿಯಾಗಿ ಸಜ್ಜುಗೊಳಿಸುವುದು ಅತ್ಯಗತ್ಯ ಎಂದು ಟ್ವೀಟ್ ಮೂಲಕ ಒತ್ತಾಯಿಸಿದ್ದಾರೆ.
2022ರಲ್ಲೂ ಕೂಡ ಪೇಶಾವರದಲ್ಲಿ ಇದೇ ರೀತಿ ಕೊಚ ರಿಸಲ್ದಾರ್ ಪ್ರದೇಶದ ಮಸೀದಿಯಲ್ಲಿ ಸೂಸೈಡ್ ಬಾಂಬರ್ ಸ್ಫೋಟ ನಡೆಸಿದ್ದ. ಈ ಘಟನೆಯಲ್ಲಿ 63 ಮಂದಿ ಸಾವನ್ನಪ್ಪಿದ್ದರು. ಇದಕ್ಕೂ ಮುನ್ನ ಕಳೆದ ವರ್ಷದ ಜನವರಿ 22ರಂದು ಪೇಶಾವರದ ಬಡಬೆರ್ ಪೊಲೀಸ್ ಠಾಣೆಯ ಸಮೀಪ ಪೊಲೀಸ್ ಕಾರನ್ನು ಸ್ಫೋಟಿಸಲಾಗಿತ್ತು. ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿರಲಿಲ್ಲ. ನಸೀರ್ ಖಾನ್ ಎಂಬಾತ ಐಇಡಿ ಬಳಸಿ ಈ ಸ್ಫೋಟ ನಡೆಸಿದ್ದನು ಎಂದು ಜಿಯೋ ನ್ಯೂಸ್ ವರದಿ ಮಾಡಿತ್ತು. ಈ ಸ್ಫೋಟವನ್ನು ರಿಮೋಟ್ ಕಂಟ್ರೋಲ್ ಸಾಧನದ ಸಹಾಯದಿಂದ ಮಾಡಲಾಗಿತ್ತು. ಸ್ಫೋಟಕಗಳನ್ನು ಕಾರಿನಲ್ಲಿ ಇಡಲಾಗಿತ್ತು. ಇದಾದ ಬಳಿಕ ಪೊಲೀಸರು ಈ ಅಪರಾಧ ಸಂಬಂಧ ಮಾಹಿತಿ ಸಂಗ್ರಹಿಸಿದ್ದರು.
ಇದನ್ನೂ ಓದಿ: ಉಕ್ರೇನ್ ಯುದ್ಧಕ್ಕೂ ಮೊದಲು ನನ್ನ ಮೇಲೆ ಪುಟಿನ್ ಕ್ಷಿಪಣಿ ದಾಳಿ ಬೆದರಿಕೆ: ಇಂಗ್ಲೆಂಡ್ ಮಾಜಿ ಪ್ರಧಾನಿ