ಸಿಯೋಲ್: ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್ ಇರುವ ಪ್ರದೇಶದ ಮೇಲೆ ನಿಗಾ ವಹಿಸಿರುವುದಾಗಿ ದಕ್ಷಿಣ ಕೊರಿಯಾ ತಿಳಿಸಿದೆ. ಕಳೆದ 3 ವಾರಗಳಿಂದ ಕಿಮ್ ಕಾಣಿಸಿಕೊಳ್ಳುತ್ತಿಲ್ಲ. ಹೀಗಾಗಿ ಅವರತ್ತ ದೃಷ್ಟಿ ನೆಟ್ಟಿದ್ದು, ಅವರಿಗೆ ಸಂಬಂಧಿಸಿದ ಸುದ್ದಿ ಹಾಗೂ ಇತರೆ ಅಂಶಗಳನ್ನು ಗಮನಿಸುತ್ತಿರುವುದಾಗಿ ಹೇಳಿದೆ.
ಕಳೆದ ಕೆಲ ದಿನಗಳ ಹಿಂದೆ ಅನಾರೋಗ್ಯಕ್ಕೆ ಒಳಗಾಗಿದ್ದ ಉತ್ತರ ಕೊರಿಯಾ ಅಧ್ಯಕ್ಷ ಚಿಕಿತ್ಸೆಗೊಳಗಾಗಿದ್ದರು. ಆ ಬಳಿಕ ಎಲ್ಲೂ ಬಹಿರಂಗವಾಗಿ ಕಾಣಿಸಿಕೊಂಡಿರಲಿಲ್ಲ. ಅಲ್ಲಿನ ಯಾವುದೇ ಸರ್ಕಾರಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿರಲಿಲ್ಲ. ಇದರಿಂದ ಅವರು ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ಕೋಮಾಗೆ ಹೋಗಿದ್ದಾರೆ ಅಂತ ಕೆಲವರು ಶಂಕೆ ವ್ಯಕ್ತಪಡಿಸಿದ್ರೆ, ಇನ್ನೂ ಕೆಲವರು ಮೃತಪಟ್ಟಿದ್ದಾರೆ ಎಂದು ಹಬ್ಬಿಸಿದ್ದ ಸುದ್ದಿ ಹರಿದಾಡಿತ್ತು. ತಮ್ಮ ಬಗ್ಗೆ ಬಂದಿದ್ದ ವದಂತಿಗಳನ್ನು ತಳ್ಳಿ ಹಾಕಿದ್ದ ಕಿಮ್, ಮೇ 1 ರಂದು ರಸಗೊಬ್ಬರ ತಯಾರಿಕೆ ಕಂಪನಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಇದಾದ ಬಳಿಕ ಮತ್ತೆ ಯಾವುದೇ ಸರ್ಕಾರಿ ಸಭೆ, ಸಮಾರಂಭಗಳಲ್ಲಿ ಕಾಣಿಸುತ್ತಿಲ್ಲ.
2020ರ ಆರಂಭದಿಂದಲೇ ಉತ್ತರ ಕೊರಿಯಾದ ಅಧಿನಾಯಕ ಕಣ್ಮರೆಯಾಗಿದ್ದಾರೆ. ಜನವರಿ 25ರಂದು ಒಂದು ಸಂಗೀತ ಕಾರ್ಯಕ್ರಮಕ್ಕೆ ಹಾಜರಾಗಿದ್ದರು. ಬಳಿಕ ಫೆಬ್ರುವರಿ 16ರವರೆಗೆ 21 ದಿನಗಳ ಕಾಲ ಯಾರ ಕಣ್ಣಿಗೂ ಬಿದ್ದಿಲ್ಲ. ಮತ್ತೆ ಮಾರ್ಚ್ 22 ರಿಂದ ಏಪ್ರಿಲ್ 10ರ ಅವಧಿಯಲ್ಲಿ 19 ದಿನಗಳ ಕಾಲ ಕಾಣಿಸಿಕೊಂಡಿರಲಿಲ್ಲ. ಏಪ್ರಿಲ್ 11ರಂದು ಕೊರಿಯಾ ಕಾರ್ಮಿಕರ ಪಕ್ಷದ ನಾಯಕರೊಂದಿಗೆ ಸಭೆ ನಡೆಸಿದ್ದರು. ಆ ಬಳಿಕ ಮತ್ತೆ ಕಣ್ಮರೆಯಾಗಿದ್ದಾರೆ. ಮೇ 1 ರಂದು ಕಿಮ್ ಜಾಂಗ್ ಒಂದು ಕಾರ್ಯಕ್ರಮ ಉದ್ಘಾಟಿಸಿರುವ ಬಗ್ಗೆ ಅಲ್ಲಿನ ಅಧಿಕಾರಿಗಳು ಹೇಳುತ್ತಿದ್ದಾರೆ.
ಸಾರ್ವಜನಿಕವಾಗಿ ಈ ನಾಯಕ ಕಾಣಿಸಿಕೊಳ್ಳದಿದ್ರೂ ಆಗಿಂದಾಗ್ಗೆ ಇವರು ಕೈಗೊಳ್ಳುತ್ತಿರುವ ನಿರ್ಧಾರಗಳನ್ನು ಅಲ್ಲಿನ ಅಧಿಕಾರಿಗಳು ಮಾಧ್ಯಮಗಳ ಮೂಲಕ ಜನರಿಗೆ ತಿಳಿಸುತ್ತಿದ್ದಾರೆ. ಸರ್ಕಾರದಿಂದ ಬೇರೆ ಬೇರೆ ದೇಶಗಳಿಗೆ ಪತ್ರ ಬರೆಯುವುದು, ತಮ್ಮ ಸಿಬ್ಬಂದಿಯನ್ನು ಅಭಿನಂದಿಸುವ ಕೆಲಸವನ್ನು ಕಿಮ್ ಮಾಡ್ತಿದ್ದಾರೆ ಎಂದು ಅಧಿಕಾರಿಗಳು ಹೇಳ್ತಿದ್ದಾರೆ.