ಎಲಾಜಿಗ್: ಪೂರ್ವ ಟರ್ಕಿಯಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು, ಸುಮಾರು 18 ಜನರು ಸಾವನ್ನಪ್ಪಿದ್ದಾರೆ. ಅನೇಕ ಕಟ್ಟಡಗಳು ನೆಲಸಮವಾಗಿದ್ದು, ರಕ್ಷಣಾ ಕಾರ್ಯ ಭರದಿಂದ ಸಾಗಿದೆ.
ಭಾರತದ ಕಾಲಮಾನದ ಪ್ರಕಾರ ಶುಕ್ರವಾರ ರಾತ್ರಿ ಟರ್ಕಿಯಲ್ಲಿ ಭೂಕಂಪ ಸಂಭವಿಸಿದೆ. ಭೂಕಂಪನದ ತೀವ್ರತೆ ರಿಕ್ಟರ್ ಮಾಪಕದಲ್ಲಿ 6.7ರಷ್ಟು ದಾಖಲಾಗಿದೆ. ಅನೇಕ ಕಟ್ಟಡಗಳು ನೆಲಸಮವಾಗಿವೆ ಎಂದು ಭೂಕಂಪ ತಜ್ಞರು ತಿಳಿಸಿದ್ದಾರೆ.
ಕಟ್ಟಡಗಳು ನೆಲಸಮವಾಗಿರುವುದರ ಜತೆಗೆ ದೂರ ಸಂಪರ್ಕ ಜಾಲ ಸಹ ಕಡಿತಗೊಂಡಿದೆ. ಹಾಗಾಗಿ ಸಂತ್ರಸ್ತರನ್ನು ತಲುಪಲು ರಕ್ಷಣಾ ಕಾರ್ಯಕರ್ತರಿಗೆ ಕಷ್ಟವಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈಗಾಗಲೇ ಭೂಕಂಪದಿಂದಾಗಿ 18 ಜನ ಸಾವನ್ನಪ್ಪಿದ್ದು, ಸಾವಿರಾರು ಮಂದಿಗೆ ಗಾಯಗಳಾಗಿವೆ. ಸಮೀಪದಲ್ಲೇ ಚಿಕಿತ್ಸಾ ಕೇಂದ್ರಗಳನ್ನು ತೆರೆದು ಚಿಕಿತ್ಸೆ ನೀಡಲಾಗುತ್ತಿದೆ.
ಕುಸಿದು ಬಿದ್ದಿರುವ ಕಟ್ಟಡಗಳ ಅಡಿಯಲ್ಲಿ ಅನೇಕರು ಸಿಲುಕಿರುವ ಶಂಕೆ ಇದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. 1999ರ ಆಗಸ್ಟ್ನಲ್ಲಿ ಇಸ್ತಾಂಬುಲ್ನ ಇಜ್ಮಿಟ್ ನಗರದಲ್ಲಿ 7.4 ತೀವ್ರತೆಯ ಭೂಕಂಪ ಸಂಭವಿಸಿತ್ತು. ಆಗ ಸುಮಾರು 17 ಸಾವಿರ ಮಂದಿ ಸಾವನ್ನಪ್ಪಿ, 5 ಲಕ್ಷ ಮಂದಿ ನಿರಾಶ್ರಿತರಾಗಿದ್ದರು.