ಸಿಯೋಲ್ : ನಮ್ಮ ದೇಶದಲ್ಲಿ ಒಂದೇ ಒಂದು ಕೋವಿಡ್ ಕೇಸ್ ದಾಖಲಾಗಿಲ್ಲ ಎಂದು ಹೇಳುತ್ತಲೇ ಬಂದಿದ್ದ ಉತ್ತರ ಕೊರಿಯಾ ಇದೀಗ ಮತ್ತೆ ಈ ಮಾತನ್ನ ವಿಶ್ವ ಆರೋಗ್ಯ ಸಂಸ್ಥೆ (WHO) ಬಳಿ ಪುನರುಚ್ಚರಿಸಿದೆ.
ದೇಶದಲ್ಲಿ ಏಪ್ರಿಲ್ ತಿಂಗಳಲ್ಲಿ 25,986 ಜನರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿದೆ. ಇವರಲ್ಲಿ ಯಾರೊಬ್ಬರಿಗೂ ಸೋಂಕು ಇರುವುದು ದೃಢಪಟ್ಟಿಲ್ಲ ಎಂದು ಹೇಳಿರುವ ಉತ್ತರ ಕೊರಿಯಾ, ತನ್ನ ವೈರಸ್ ವಿರೋಧಿ ಪ್ರಯತ್ನಗಳನ್ನು 'ರಾಷ್ಟ್ರೀಯ ಅಸ್ತಿತ್ವದ ವಿಚಾರ' (matter of national existence) ಎಂದು ಬಣ್ಣಿಸಿದೆ.
ನಾವು ಪ್ರವಾಸಿಗರನ್ನು ನಿರ್ಬಂಧಿಸಿದ್ದೇವೆ, ಬೇರೆ ರಾಷ್ಟ್ರಗಳ ರಾಜತಾಂತ್ರಿಕರನ್ನು ದೇಶದಿಂದ ಹೊರಗೆ ಕಳುಹಿಸಿದ್ದೇವೆ, ಗಡಿಯಾಚೆಗಿನ ಸಂಚಾರ ಮತ್ತು ವ್ಯಾಪಾರವನ್ನು ಕಠಿಣವಾಗಿ ನಿಷೇಧಿಸಲಾಗಿದೆ. ಸೌಮ್ಯ ರೋಗ ಲಕ್ಷಣ ಕಂಡು ಬಂದವರನ್ನು ಕ್ವಾರಂಟೈನ್ಗೆ ಒಳಪಡಿಸಲಾಗುತ್ತಿತ್ತು. ಇದೀಗ ಅದರ ಅವಶ್ಯಕತೆಯೂ ಇಲ್ಲ ಎಂದು ಉತ್ತರ ಕೊರಿಯಾ ಸಮರ್ಥಿಸಿಕೊಂಡಿದೆ.
ಇದನ್ನೂ ಓದಿ: ವರ್ಷದ ಬಳಿಕ ಕೋವಿಡ್ ಸಾವಿಲ್ಲದೆ ಒಂದು ದಿನ ಕಳೆದ ಇಂಗ್ಲೆಂಡ್
ಏ.23-29ರ ಅವಧಿಯಲ್ಲಿ ಉತ್ತರ ಕೊರಿಯಾ 751 ಮಂದಿಯನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದ್ದು, ಇವರಲ್ಲಿ 139 ಜನರು ಶೀತ,ಜ್ವರದಂತಹ ಸಮಸ್ಯೆ ಹಾಗೂ ತೀವ್ರ ಉಸಿರಾಟದ ಸೋಂಕಿನಿಂದ ಬಳಲುತ್ತಿದ್ದಾರೆಂದು ವಿಶ್ವ ಆರೋಗ್ಯ ಸಂಸ್ಥೆ ತನ್ನ ವಾರದ ವರದಿಯಲ್ಲಿ ತಿಳಿಸಿದೆ.
ಇದರ ಬೆನ್ನಲ್ಲೇ ಉತ್ತರ ಕೊರಿಯಾ ಸರ್ಕಾರ ನಮ್ಮಲ್ಲಿ ಒಬ್ಬ ಕೋವಿಡ್ ಸೋಂಕಿತನೂ ಇಲ್ಲ ಎಂದು ಹಳೇ ರಾಗ ಎಳೆದಿದೆ. ಆದರೆ, ತಜ್ಞರು ಮಾತ್ರ ಉತ್ತರ ಕೊರಿಯಾ ಕೋವಿಡ್ ಮಾಹಿತಿ ಕುರಿತು ಸಂಶಯ ವ್ಯಕ್ತಪಡಿಸುತ್ತಲೇ ಬಂದಿದ್ದಾರೆ.