ಇಸ್ರೇಲ್ : ಇಸ್ರೇಲ್‌ನ ಪ್ರಧಾನಮಂತ್ರಿ ಬೆಂಜಮಿನ್ ನೆತನ್ಯಾಹು ಕೋವಿಡ್–19 ಲಸಿಕೆ ಹಾಕಿಸಿಕೊಳ್ಳುವ ಮೂಲಕ ದೇಶಾದ್ಯಂತ ಲಸಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ. ಟೆಲ್ ಅವಿವ್ ಸಮೀಪದ ರಮಾತ್ ಗಾನ್‌ನಲ್ಲಿರುವ ಶೇಬಾ ವೈದ್ಯಕೀಯ ಕೇಂದ್ರದಲ್ಲಿ ಪ್ರಧಾನಿ ನೆತನ್ಯಾಹು ಮತ್ತು ಇಸ್ರೇಲ್‌ನ ಆರೋಗ್ಯ ಸಚಿವರು ಫೈಝರ್–ಬಯೊಎನ್‌ಟೆಕ್ ಲಸಿಕೆ ಪಡೆದುಕೊಂಡಿದ್ದಾರೆ.
'ಆರೋಗ್ಯ ಸಚಿವ ಯುಲಿ ಎಡೆಲ್‌ಸ್ಟೀನ್ ಅವರೊಂದಿಗೆ ನಾನು ಲಸಿಕೆ ಪಡೆಯುವ ಮೂಲಕ ಲಸಿಕೆ ಹಾಕಿಸಿಕೊಳ್ಳಲು ಮುಂದಾಗಿದ್ದೇನೆ. ಈ ಮೂಲಕ ನಿಮ್ಮನ್ನೂ ಪ್ರೋತ್ಸಾಹಿಸುತ್ತಿದ್ದೇನೆ' ಎಂದು ನೆತನ್ಯಾಹು ಟಿವಿ ವೀಕ್ಷಕರಿಗೆ ಹೇಳಿದ್ದಾರೆ.
ಇವರು ಲಸಿಕೆ ಪಡೆದುಕೊಳ್ಳುವ ಕಾರ್ಯಕ್ರಮ ಶನಿವಾರದಂದು ಇಸ್ರೇಲ್‌ನ ಮಾಧ್ಯಮಗಳಲ್ಲಿ ಪ್ರಸಾರಗೊಂಡಿತ್ತು. ಮೂರು ವಾರಗಳಲ್ಲಿ ಕೊರೊನಾ ವೈರಸ್ ಲಸಿಕೆ ಎಲ್ಲರಿಗೂ ದೊರೆಯಲಿದೆ ಎಂದು ಅವರು ಭರವಸೆ ನೀಡಿದ್ದಾರೆ.
ಇದನ್ನು ಓದಿ: ಫೈಜರ್ ಲಸಿಕೆ: ಸೋಮವಾರದಿಂದ ಅಮೆರಿಕದ ಎಲ್ಲ ರಾಜ್ಯಗಳಿಗೆ ಹಂಚಿಕೆ
ಕಳೆದ ಫೆಬ್ರವರಿ ತಿಂಗಳೊಳಗೆ ಇಸ್ರೇಲ್‌ನಲ್ಲಿ ಕೊರೊನಾ ಮೊದಲ ಪ್ರಕರಣ ದೃಢಪಟ್ಟಿತ್ತು. ಆರೋಗ್ಯ ಸಚಿವಾಲಯದ ಪ್ರಕಾರ, ಈವರೆಗೂ ಸುಮಾರು 3,70,000 ಕೋವಿಡ್ ಪ್ರಕರಣ ದಾಖಲಾಗಿವೆ. ಅಷ್ಟೇ ಅಲ್ಲ, 3,000 ಮಂದಿ ಮೃತಪಟ್ಟಿದ್ದಾರೆ.
ಇಸ್ರೇಲ್ ಫೈಝರ್–ಬಯೊಎನ್‌ಟೆಕ್‌ನಿಂದ 80 ಲಕ್ಷ ಡೋಸ್‌ಗಳಷ್ಟು ಕೋವಿಡ್–19 ಲಸಿಕೆಗೆ ಬೇಡಿಕೆ ಇಟ್ಟಿದೆ. ಹತ್ತು ದಿನಗಳ ಮುಂಚೆಯೇ ಮೊದಲ ಹಂತದಲ್ಲಿ ಲಸಿಕೆ ಪೂರೈಕೆಯಾಗಿದ್ದು, ಫೈಝರ್ ಲಸಿಕೆಯನ್ನು –70 ಡಿಗ್ರಿ ಸೆಲ್ಸಿಯಸ್‌ನಷ್ಟು ಶೀತಲ ವಾತಾವರಣದಲ್ಲಿ ಸಂಗ್ರಹಿಸಬೇಕಾದ ಸವಾಲಿದೆ ಎಂದು ತಿಳಿದು ಬಂದಿದೆ.