ಕಾಬೂಲ್: ಕಾಬೂಲ್ ವಿಮಾನ ನಿಲ್ದಾಣದ ಹೊರಗಡೆ ಗುರುವಾರ ಸಂಭವಿಸಿದ ಅವಳಿ ಆತ್ಮಾಹುತಿ ದಾಳಿಯಲ್ಲಿ ಕನಿಷ್ಠ 90 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಭೀಕರ ದಾಳಿ ಮಾಡಿದ್ದು ತಾವೇ ಎಂದು ಉಗ್ರ ಸಂಘಟನೆ ಐಸಿಸ್-ಕೆ ಒಪ್ಪಿಕೊಂಡಿದೆ. ಉಗ್ರ ಸಂಘಟನೆಯ ಕೃತ್ಯವನ್ನು ಭಾರತ, ಬ್ರಿಟನ್ ಸೇರಿ ವಿಶ್ವದ ಹಲವು ರಾಷ್ಟ್ರಗಳು ಖಂಡಿಸಿವೆ.
ಕಾಬೂಲ್ ಆತ್ಮಾಹುತಿ ದಾಳಿಯನ್ನು ಅಮೆರಿಕ ಖಚಿತಪಡಿಸಿದೆ. ದಾಳಿಯಲ್ಲಿ ಯುಎಸ್ನ 13 ಸೇನಾ ಸಿಬ್ಬಂದಿ ಮೃತಪಟ್ಟಿದ್ದಾರೆ. ದಾಳಿಯ ಬಳಿಕವೂ ನಾವು ರಕ್ಷಣಾ ಕಾರ್ಯಾಚರಣೆ ಮುಂದುವರಿಸುತ್ತೇವೆ ಎಂದು ಅಮೆರಿಕಾದ ಕಮಾಂಡರ್ ಸ್ಪಷ್ಟಪಡಿಸಿದ್ದಾರೆ. ದಾಳಿಯಲ್ಲಿ 150ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ದಾಳಿಯ ಬಗ್ಗೆ ಹಲವು ದೇಶಗಳು ಎಚ್ಚರಿಕೆ ನೀಡಿದ ಬೆನ್ನಲ್ಲೇ ಸ್ಫೋಟ ಸಂಭವಿಸಿದೆ.
ಭಾರತೀಯ ವಿದೇಶಾಂಗ ಇಲಾಖೆ ಖಂಡನೆ
ಕಾಬೂಲ್ ದಾಳಿಯನ್ನು ಭಾರತ ಕಟುವಾಗಿ ಖಂಡಿಸುತ್ತೆ. ಉಗ್ರ ದಾಳಿಯಲ್ಲಿ ಮೃತಪಟ್ಟವರ ಕುಟುಂಬಕ್ಕೆ ಸಾಂತ್ವನ ಹೇಳುತ್ತೇವೆ. ಉಗ್ರರಿಗೆ ಮತ್ತು ಭಯೋತ್ಪಾದನೆಗೆ ಬೆಂಬಲ ನೀಡುವವರ ವಿರುದ್ಧ ವಿಶ್ವ ಒಂದಾಗಿ ನಿಲ್ಲಬೇಕಾಗಿದೆ ಎಂಬುದನ್ನು ಇಂದಿನ ದಾಳಿ ಮತ್ತೊಮ್ಮೆ ತೋರಿಸಿಕೊಟ್ಟಿದೆ ಎಂದು ಭಾರತ ವಿದೇಶಾಂಗ ಇಲಾಖೆ ಅಭಿಪ್ರಾಯಪಟ್ಟಿದೆ.
ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಆಂಟೋನಿಯೋ, ಕಾಬೂಲ್ ದಾಳಿ ಖಂಡಿಸಿದ್ದಾರೆ. ಇದು ಅಫ್ಘಾನಿಸ್ತಾನದ ಸ್ಥಿತಿಯನ್ನ ತೋರಿಸುತ್ತದೆ ಎಂದು ಹೇಳಿದ್ದಾರೆ.