ಜೆರುಸಲೇಂ(ಇಸ್ರೇಲ್): ಇಸ್ರೇಲ್ ದೇಶದ ಸಾರ್ವತ್ರಿಕ ಚುನಾವಣೆಯಲ್ಲಿ ಹಾಲಿ ಪ್ರಧಾನಿ ಹಾಗೂ ಪ್ರಧಾನಿ ಮೋದಿ ಆತ್ಮೀಯ ಗೆಳೆಯ ಬೆಂಜಮಿನ್ ನೆತನ್ಯಾಹು ನೇತೃತ್ವದ ಲಿಕುಡ್ ಪಾರ್ಟಿ ಬಹುಮತ ಗಳಿಸುವಲ್ಲಿ ವಿಫಲವಾಗಿದೆ.
ನೆತನ್ಯಾಹು ಪಕ್ಷ ಲಿಕುಡ್ 120 ಕ್ಷೇತ್ರಗಳ ಪೈಕಿ 31 ಸ್ಥಾನಗಳನ್ನು ಗೆದ್ದಿದ್ದರೆ ಪ್ರಬಲ ಸ್ಪರ್ಧಿ ಬ್ಲೂ ಆ್ಯಂಡ್ ವೈಟ್ ಪಾರ್ಟಿ 32 ಸ್ಥಾನಗಳಲ್ಲಿ ವಿಜಯಿಯಾಗಿದೆ. ಸರಳ ಬಹುಮತಕ್ಕೆ 61 ಸ್ಥಾನಗಳ ಅವಶ್ಯಕತೆ ಇದ್ದು, ಯಾವುದೇ ಪಕ್ಷವೂ ಈ ಸಂಖ್ಯೆಯನ್ನು ತಲುಪದ ಕಾರಣ ದೇಶದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ.
ಭ್ರಷ್ಟಾಚಾರ ಹಾಗೂ ಜನರ ವಿಶ್ವಾಸವನ್ನು ಉಳಿಸುಕೊಳ್ಳುವಲ್ಲಿ ವಿಫಲವಾದ ಪರಿಣಾಮ ನೆತನ್ಯಾಹು ಬಹುಮತದ ಸನಿಹದಲ್ಲಿ ಎಡವಿದ್ದಾರೆ. ಯಾವುದೇ ಪಕ್ಷ ಬಹುಮತ ಪಡೆಯದ ಪರಿಣಾಮ ಮೈತ್ರಿ ಅನಿವಾರ್ಯವಾಗಿದೆ.
ದಶಕದ ಆಡಳಿತಕ್ಕೆ ಕೊನೆ:
ಬೆಂಜಮಿನ್ ನೆತನ್ಯಾಹು 2009ರ ಮಾರ್ಚ್ 31ರಂದು ಮೊದಲನೇ ಬಾರಿಗೆ ಇಸ್ರೇಲ್ ದೇಶದ ಪ್ರಧಾನಿ ಪಟ್ಟಕ್ಕೇರಿದ್ದರು. ಇದಾದ ಬಳಿಕ 2013ರ ಚುನಾವಣೆಯಲ್ಲೂ ಹುದ್ದೆ ಉಳಿಸಿಕೊಳ್ಳುವಲ್ಲಿ ಸಫಲರಾಗಿದ್ದರು. 2015ರ ಚುನಾವಣೆಯಲ್ಲೀ ನೆತನ್ಯಾಹು ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿದಿದ್ದರು.
2019ರ ಈ ಚುನಾವಣೆಯಲ್ಲಿ ಇಸ್ರೇಲ್ ಮತದಾರರು ನೆತನ್ಯಾಹುರನ್ನು ಸ್ಪಷ್ಟವಾಗಿ ತಿರಸ್ಕರಿಸಿದ್ದಾರೆ. ಮಾಜಿ ಸೇನಾ ಮುಖ್ಯಸ್ಥ ಬೆನ್ನಿ ಗಂಟ್ಜ್ ಮುಂದಾಳತ್ವದ ಬ್ಲೂ ಆ್ಯಂಡ್ ವೈಟ್ ಪಾರ್ಟಿಗೆ ಒಲವು ತೋರಿದ್ದಾರೆ. ಮೂರನೇ ಸ್ಥಾನದಲ್ಲಿರುವ ಬೀಟೈನು ಪಕ್ಷ ಕಿಂಗ್ಮೇಕರ್ ಆಗಿ ಹೊರಹೊಮ್ಮುವ ಸಾಧ್ಯತೆ ನಿಚ್ಚಳವಾಗಿದೆ.