ಗಾಜಾಪಟ್ಟಿ: ಇಸ್ರೇಲ್ ಮತ್ತು ಪ್ಯಾಲಸ್ತೀನ್ ಸಂಘರ್ಷಕ್ಕೆ ತಾತ್ಕಾಲಿಕ ಅಂತ್ಯ ದೊರೆತಿದೆ. ಎರಡೂ ರಾಷ್ಟ್ರಗಳು 'ಪರಸ್ಪರ ಮತ್ತು ಏಕಕಾಲಿಕ' ಕದನ ವಿರಾಮ ಘೋಷಿಸಲು ನಿರ್ಣಯ ಕೈಗೊಂಡಿವೆ ಎಂದು ಹಮಾಸ್ ಅಧಿಕೃತವಾಗಿ ರಾಯಿಟರ್ಸ್ಗೆ ದೃಢಪಡಿಸಿದೆ.
ಈ ಘೋಷಣೆ ಮೂಲಕ ಎರಡೂ ರಾಷ್ಟ್ರಗಳ 11 ದಿನಗಳ ಸಂಘರ್ಷ, ಅದರಲ್ಲೂ ಗಾಜಾಪಟ್ಟಿಯಲ್ಲಿ ಹಿಂಸಾಚಾರಕ್ಕೆ ಕೊನೆಗೂ ತಾತ್ಕಾಲಿಕ ತೆರೆಬಿದ್ದಂತಾಗಿದೆ. ಶುಕ್ರವಾರ ಮುಂಜಾನೆ 2 ಗಂಟೆಯಿಂದ ಕದನ ವಿರಾಮ ಆರಂಭವಾಗಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ರಾಷ್ಟ್ರೀಯ ಕ್ರೀಡಾ ಪುರಸ್ಕಾರಗಳಿಗೆ ಅರ್ಜಿ ಆಹ್ವಾನಿಸಿದ ಕ್ರೀಡಾ ಸಚಿವಾಲಯ
ಇಸ್ರೇಲ್ನ ಕ್ಯಾಬಿನೆಟ್ ಕೂಡಾ ಕದನ ವಿರಾಮ ಒಪ್ಪಂದ ಮಾಡಿಕೊಂಡಿರುವುದಾಗಿ ಒಪ್ಪಿಕೊಂಡಿದ್ದು, ಮುಂದಿನ ಕ್ರಮ ಕೈಗೊಳ್ಳುವುದಾಗಿ ಹೇಳಿದೆ.
ಕದನವಿರಾಮ ಘೋಷಣೆಯಾದ ಮೂರು ಗಂಟೆಗಳ ನಂತರ ಅಂದರೆ ಮುಂಜಾನೆ 2 ಗಂಟೆಗೆ ಒಪ್ಪಂದ ಜಾರಿಗೆ ಬರಲಿದೆ ಎಂದು ಈಜಿಪ್ಟ್ನ ಸರ್ಕಾರಿ ಸ್ವಾಮ್ಯದ ಎಂಇಎನ್ಎ ಸುದ್ದಿ ಸಂಸ್ಥೆ ಉಲ್ಲೇಖಿಸಿದೆ.
ಬೆಂಜಮಿನ್ ನೆತನ್ಯಾಹು ಕಚೇರಿ ಕೂಡಾ ಈ ಬಗ್ಗೆ ಮಾಹಿತಿ ನೀಡಿದ್ದು, ಮಿಲಿಟರಿ ಮುಖ್ಯಸ್ಥರು ಮತ್ತು ಇತರ ಉನ್ನತ ರಕ್ಷಣಾ ಅಧಿಕಾರಿಗಳ ಶಿಫಾರಸುಗಳ ನಂತರ ಭದ್ರತಾ ಕ್ಯಾಬಿನೆಟ್ ಕದನ ವಿರಾಮ ಪ್ರಸ್ತಾಪವನ್ನು ಸರ್ವಾನುಮತದಿಂದ ಅಂಗೀಕರಿಸಿದೆ ಎಂದಿದೆ.
ಇಸ್ರೇಲ್ ಸೈನ್ಯದ ಕಾರ್ಯಾಚರಣೆ ಅಭೂತಪೂರ್ವವಾಗಿತ್ತು ಎಂದು ಭದ್ರತಾ ಕ್ಯಾಬಿನೆಟ್ ಬಣ್ಣಿಸಿದೆ.
ಇನ್ನೂ ಕೆಲವೊಂದು ಮೂಲಗಳ ಪ್ರಕಾರ ಕದನ ವಿರಾಮ ಇನ್ನೂ ಕೆಲವು ಗಂಟೆಗಳಿರುವಂತೆ ಇಸ್ರೇಲ್ ಗಾಜಾ ಪಟ್ಟಿಯ ಹಲವು ಭಾಗಗಳ ಮೇಲೆ ದಾಳಿ ಮಾಡಿದೆ ಎಂದು ತಿಳಿದುಬಂದಿದೆ.