ನವದೆಹಲಿ: ದುಬೈನಲ್ಲಿ ನಡೆಯುತ್ತಿರುವ ಏಷಿಯನ್ ಯೂತ್ ಬಾಕ್ಸಿಂಗ್ ಚಾಂಪಿಯನ್ಶಿಪ್ನಲ್ಲಿ ಬಿಸ್ವಾಮಿತ್ರ ಚೋಂಗ್ಥಮ್ (51ಕೆಜಿ ವಿಭಾಗ), ವಿಶಾಲ್ (80ಕೆಜಿ ವಿಭಾಗ), ನೇಹಾ (54ಕೆಜಿ ವಿಭಾಗ) ಸೇರಿದಂತೆ ಮೂವರು ಚಿನ್ನದ ಪದಕ, ಆರು ಮಂದಿ ಬೆಳ್ಳಿ ಪದಕ ಗಳಿಸಿದ್ದಾರೆ.
ಚೋಂಗ್ಥಮ್ ಉಜ್ಬೇಕಿಸ್ತಾನದ ಕುಝಿಬೋವ್ ಅಹ್ಮದ್ಜಾನ್ ಅವರನ್ನು 4-1 ಅಂತರದಿಂದ ಸೋಲಿಸಿದರು. ಮತ್ತೊಂದೆಡೆ, ವಿಶಾಲ್ ಕಿರ್ಗಿಸ್ತಾನದ ಅಕ್ಮಾಟೋವ್ ಸನ್ಜಾರ್ ಅವರನ್ನು 5-0 ಪಾಯಿಂಟ್ಗಳಿಂದ ಸೋಲಿಸಿ, ಚಿನ್ನದ ಪದಕಕ್ಕೆ ಮುತ್ತಿಟ್ಟರು.
ಮಹಿಳೆಯರ ವಿಭಾಗದಲ್ಲಿ ನೇಹಾ ಕಜಕಿಸ್ತಾನದ ಐಷಾಗುಲ್ ಯೆಲುಬವೆಯಾ ಅವರನ್ನು 3-2 ಪಾಯಿಂಟ್ಗಳ ಅಂತರದಿಂದ ಸೋಲಿಸಿ, ಏಷಿಯನ್ ಯೂತ್ ಬಾಕ್ಸಿಂಗ್ ಚಾಂಪಿಯನ್ಶಿಪ್ನಲ್ಲಿ ಚಿನ್ನದ ಪದಕ ತಮ್ಮದಾಗಿಸಿಕೊಂಡರು.
2010ರಲ್ಲಿ ಭಾರತ 2 ಚಿನ್ನದ ಪದಕಗಳನ್ನು ಮಾತ್ರ ಪಡೆದಿದ್ದು, ಈ ಪದಕಗಳನ್ನು ಪುರುಷರ ವಿಭಾಗ ಮಾತ್ರ ಪಡೆದಿತ್ತು. ಈ ದಾಖಲೆಯನ್ನು ಈಗ ಸರಿಗಟ್ಟಲಾಗಿದ್ದು, ಮೂರು ಚಿನ್ನದ ಪದಕಗಳನ್ನು ಭಾರತ ಪಡೆದಿದೆ.
ಇನ್ನು ವಿಶ್ವನಾಥ ಸುರೇಶ್ (48ಕೆಜಿ ವಿಭಾಗ), ವಂಶಜ್ (63.5ಕೆಜಿ ವಿಭಾಗ) ಮತ್ತು ಜಯದೀಪ್ ರಾವತ್ (71ಕೆಜಿ ವಿಭಾಗದಲ್ಲಿ) ಬೆಳ್ಳಿ ಪದಕ ಪಡೆದಿದ್ದಾರೆ. ಸುರೇಶ್ ಕಜಕಿಸ್ತಾನದ ಹಾಲಿ ವಿಶ್ವ ಚಾಂಪಿಯನ್ ಸಂಝಾರ್ ತಾಷ್ಕೆಂಬೆ ವಿರುದ್ಧ 0-5 ಪಾಯಿಂಟ್ಗಳ ಅಂತರದಲ್ಲಿ, ವಂಶಜ್ ಕಜಕಿಸ್ತಾನದ ಯೆರ್ನೂರ್ ಸುಯುನ್ಬೆ ವಿರುದ್ಧ 0-5 ಪಾಯಿಂಟ್ಗಳ ಅಂತರದಲ್ಲಿ, ಜಯುದೀಪ್ ರಾವತ್ ಉಜ್ಬೇಕಿಸ್ತಾನದ ಅಬ್ದುಲ್ಲೇವ್ ಅಲೋಖೋನ್ ವಿರುದ್ಧ ಸೋಲು ಅನುಭವಿಸಿದ್ದಾರೆ.
ಮಹಿಳೆಯರ ವಿಭಾಗದಲ್ಲಿ ನಿವೇದಿತಾ (48ಕೆಜಿ ವಿಭಾಗ) ಅವರು ಉಜ್ಬೇಕಿಸ್ತಾನದ ಫರ್ಜೋನಾ ಫೋಜಿಲೋವಾ ವಿರುದ್ಧ ಸೋತರೆ, ತಮನ್ನಾ (50ಕೆಜಿ ವಿಭಾಗ) ಅವರು ಉಜ್ಬೇಕ್ನ ಸಬಿನಾ ಬೊಬೊಕುಲ ವಿರುದ್ಧ 4-1 ಪಾಯಿಂಟ್ಗಳ ಅಂತರದಿಂದ, ಸೋಲು ಅನುಭವಿಸಿದ್ದಾರೆ. ಸಿಮ್ರಾನ್ (52 ಕೆಜಿ ವಿಭಾಗ) ಅವರು ಉಜ್ಬೇಕಿಸ್ತಾನದ ಕಜಕೋವಾ ಫೆರುಜಾ ವಿರುದ್ಧ 0-5 ಅಂತರದಿಂದ ಸೋತು ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟಿದ್ದಾರೆ.
ಇಂದು ರಾತ್ರಿ ವೇಳೆಗೆ ಪ್ರೀತಿ (57 ಕೆಜಿ ವಿಭಾಗ), ಪ್ರೀತಿ ದಹಿಯಾ (60 ಕೆಜಿ ವಿಭಾಗ), ಖುಷಿ (63 ಕೆಜಿ ವಿಭಾಗ), ಸ್ನೇಹಾ (66 ಕೆಜಿ ವಿಭಾಗ), ಖುಷಿ (75 ಕೆಜಿ ವಿಭಾಗ) ಮತ್ತು ತನಿಷ್ಬೀರ್ (81 ಕೆಜಿ ವಿಭಾಗ) ಫೈನಲ್ ಪಂದ್ಯಗಳಲ್ಲಿ ಭಾಗವಹಿಸಲಿದ್ದಾರೆ.
ಓರ್ವ ಮಹಿಳೆ ಸೇರಿದಂತೆ ಐವರು ಭಾರತೀಯ ಬಾಕ್ಸರ್‌ಗಳು ಈ ಹಿಂದೆ ಸೆಮಿಫೈನಲ್‌ನಲ್ಲಿ ಸೋತು, ಸ್ಪರ್ಧೆಯಲ್ಲಿ ಕಂಚಿನ ಪದಕಕ್ಕೆ ತೃಪ್ತಿಪಟ್ಟಿದ್ದಾರೆ. ಪುರುಷರಲ್ಲಿ ದಕ್ಷ್ (67 ಕೆಜಿ ವಿಭಾಗ), ದೀಪಕ್ (75 ಕೆಜಿ ವಿಭಾಗ), ಅಭಿಮನ್ಯು (92 ಕೆಜಿ ವಿಭಾಗ) ಮತ್ತು ಅಮಾನ್ ಸಿಂಗ್ ಬಿಶ್ತ್ (92 ಕೆಜಿ ಮೇಲ್ಪಟ್ಟ ವಿಭಾಗ)ದಲ್ಲಿ ಕಂಚಿನ ಪದಕಗಳನ್ನು ಪಡೆದರೆ, ಲಶು ಯಾದವ್ (70 ಕೆಜಿ ವಿಭಾಗ) ಮಹಿಳಾ ವಿಭಾಗದಲ್ಲಿ ಕಂಚಿನ ಪದಕ ಪಡೆದಿದ್ದಾರೆ.
ಈ ಹಿಂದೆ ಮಂಗೋಲಿಯಾದ ಉಲಾನ್‌ಬಾತಾರ್‌ನಲ್ಲಿ ನಡೆದ ಏಷ್ಯನ್ ಯೂತ್ ಚಾಂಪಿಯನ್‌ಶಿಪ್‌ನ ಟೂರ್ನಿ ನಡೆದಿತ್ತು. ಈ ಟೂರ್ನಿಯಲ್ಲಿ ಭಾರತವು ಐದು ಚಿನ್ನ ಸೇರಿದಂತೆ 12 ಪದಕಗಳನ್ನು ಪಡೆದುಕೊಂಡಿದೆ.
ಇದನ್ನೂ ಓದಿ: Tokyo Paralympics: ಕಂಚಿನ ಪದಕ ಗೆದ್ದ ಶೂಟರ್ ಸಿಂಗ್ರಾಜ್