ಕೀವ್( ಉಕ್ರೇನ್): ಉಕ್ರೇನ್ ಮೇಲಿನ ರಷ್ಯಾ ಆಕ್ರಮಣಕ್ಕೆ ಒಂದು ತಿಂಗಳು ತುಂಬುತ್ತಿದೆ. ಎರಡೂ ಕಡೆ ಸಂಧಾನ ಮಾತುಕತೆಗಳು ಮುಂದುವರೆದಿದೆ ಆದರೂ ಇಬ್ಬರೂ ತಮ್ಮ ನಿಲುವುಗಳಿಗೆ ಅಂಟಿಕೊಂಡಿರುವುದು ಹಾಗೂ ರಷ್ಯಾ ಪಟ್ಟುಗಳಿಂದಾಗಿ ಸಂಧಾನ ಯಶಸ್ವಿಯಾಗಿಲ್ಲ. ಹೀಗಾಗಿ ಹಠಕ್ಕೆ ಬಿದ್ದಿರುವ ರಷ್ಯಾ ಉಕ್ರೇನ್ ವಶಕ್ಕೆ ಪಡೆಯಲು ತೀವ್ರ ಹೋರಾಟ ಮುಂದುವರೆಸಿದೆ. ಆದರೆ, ಉಕ್ರೇನ್ ಪ್ರಬಲ ರಷ್ಯಾದ ಜಂಘಾಬಲವನ್ನೇ ಉಡುಗಿಸುತ್ತಿದೆ. ಎರಡ್ಮೂರು ದಿನದಲ್ಲಿ ಮುಗಿಯಬೇಕಿದ್ದ ಯುದ್ಧವನ್ನ 1 ತಿಂಗಳವರೆಗೂ ಎಳೆದು ತಂದಿದೆ.
ಉಕ್ರೇನ್ನ ಹಲವು ನಗರಗಳನ್ನು ನಾಮಾವಶೇಷ ಮಾಡಿರುವ ರಷ್ಯಾ ವಿರುದ್ಧ ಸಂಪೂರ್ಣ ವಿಶ್ವ ಸಿಡಿದೇಳಬೇಕು ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಕರೆ ನೀಡಿದ್ದಾರೆ. ಯುದ್ಧಕ್ಕೆ ಒಂದು ತಿಂಗಳು ತುಂಬುತ್ತಿರುವ ಹಿನ್ನೆಲೆಯಲ್ಲಿ ಮಾತನಾಡಿದ ಝೆಲೆನ್ಸ್ಕಿ, ರಷ್ಯಾ ದುರಾಕ್ರಮಣದ ವಿರುದ್ಧ ವಿಶ್ವದಾದ್ಯಂತ ನಾಗರಿಕರು ಬೀದಿಗಿಳಿಯಬೇಕೆಂದು ಮನವಿ ಮಾಡಿದ್ದಾರೆ.
ಈ ಸಂಬಂಧ ವೀಡಿಯೊ ಸಂದೇಶ ಹಂಚಿಕೊಂಡಿರುವ ಉಕ್ರೇನ್ ವಿದೇಶಾಂಗ ಸಚಿವಾಲಯ,ರಷ್ಯಾದ ಯುದ್ಧವು ಕೇವಲ ಯುದ್ಧವಲ್ಲ. ಉಕ್ರೇನ್ನ ಸ್ವಾತಂತ್ರ್ಯದ ವಿರುದ್ಧದ ಯುದ್ಧವಾಗಿದೆ. ಜನರ ಹಕ್ಕನ್ನು ಕಸಿದುಕೊಳ್ಳುವ ಈ ಯುದ್ಧದ ವಿರುದ್ಧ ನೀವೆಲ್ಲ ನಿಲ್ಲಬೇಕು ಎಂದು ಕೇಳಿಕೊಳ್ಳುತ್ತೇನೆ. ನಿಖರವಾಗಿ ಒಂದು ತಿಂಗಳು ಮುಂದುವರೆದಿರುವ ಈ ಯುದ್ಧವನ್ನು ನಿಲ್ಲಬಯಸುವ ನೀವೆಲ್ಲ ಒಟ್ಟಾಗಿ ನಮಗೆ ಬೆಂಬಲ ನೀಡಬೇಕು, ರಷ್ಯಾ ವಿರುದ್ಧ ಪ್ರತಿಭಟನೆ ನಡೆಸಬೇಕು ಎಂದು ಝೆಲೆನ್ಸ್ಕಿ ಕರೆ ನೀಡಿದ್ದಾರೆ.
ಫೆಬ್ರವರಿ 24 ರ ಮುಂಜಾನೆ, ಡೊನೆಟ್ಸ್ಕ್ ಮತ್ತು ಲುಹಾನ್ಸ್ಕ್ ಪೀಪಲ್ಸ್ ರಿಪಬ್ಲಿಕ್ಗಳು (ಡಿಪಿಆರ್ ಮತ್ತು ಎಲ್ಪಿಆರ್) ಕೀವ್ ಪಡೆಗಳ ವಿರುದ್ಧ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಸಹಾಯಕ್ಕಾಗಿ ಮನವಿ ಮಾಡಿದ ನಂತರ ರಷ್ಯಾ ಉಕ್ರೇಕ್ ಮೇಲೆ ವಿಶೇಷ ಮಿಲಿಟರಿ ಕಾರ್ಯಾಚರಣೆಯನ್ನು ಪ್ರಾರಂಭಿಸಿತ್ತು. ತನ್ನ ವಿಶೇಷ ಕಾರ್ಯಾಚರಣೆಯ ಗುರಿಯು ಉಕ್ರೇನ್ ಅನ್ನು ನಿಶಸ್ತ್ರೀಕರಣ ಮತ್ತು ನಾಜಿಯತ್ವವನ್ನು ತೆಗೆದು ಹಾಕುವುದಾಗಿದೆ. ಹಾಗೂ ಮಿಲಿಟರಿ ನೆಲೆಗಳನ್ನು ಮಾತ್ರ ಗುರಿಯಾಗಿಸಿ ದಾಳಿ ಮಾಡಲಾಗುತ್ತದೆ. ಹಾಗಾಗಿ ನಾವು ನಾಗರಿಕರನ್ನು ಗುರಿಯಾಗಿಸಿಕೊಂಡು ದಾಳಿ ಮಾಡುವುದಿಲ್ಲ ಎಂದು ರಷ್ಯಾ ಆರಂಭದಲ್ಲಿ ಹೇಳಿಕೊಂಡಿತ್ತು. ಈಗಲೂ ಅದೇ ವಾದವನ್ನು ರಷ್ಯಾ ಮುಂದಿಡುತ್ತಿದೆ. ಆದರೆ ಪರಿಸ್ಥಿತಿ ವಿಭಿನ್ನವಾಗಿದೆ.
ಈ ನಡುವೆ ಉಕ್ರೇನ್ ಮೇಲಿನ ರಷ್ಯಾ ದಾಳಿಯನ್ನ ಪಾಶ್ಮಿಮಾತ್ಯ ರಾಷ್ಟ್ರಗಳು ಖಂಡಿಸಿವೆ. ರಷ್ಯಾ ಮೇಲೆ ಆರ್ಥಿಕ ದಿಗ್ಬಂಧನ ವಿಧಿಸಿವೆ. ಅತ್ತ ರಷ್ಯಾ ನರಮೇಧ ಮಾಡುತ್ತಿದೆ ಎಂದು ಅಮೆರಿಕ, ಇಂಗ್ಲೆಂಡ್ ಸೇರಿದಂತೆ ಪ್ರಮುಖ ರಾಷ್ಟ್ರಗಳು ಆಕ್ರೋಶ ವ್ಯಕ್ತಪಡಿಸಿವೆ.
ಇದನ್ನು ಓದಿ:ನಾಲ್ಕು ವಾರ ದಾಟಿದ ರಷ್ಯಾ - ಉಕ್ರೇನ್ ಯುದ್ಧ.. ಉಕ್ರೇನ್ಗೆ ಬ್ರಿಟನ್, ಅಮೆರಿಕ ನೆರವು!