ಕೀವ್(ಉಕ್ರೇನ್) : ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ 13ನೇ ದಿನಕ್ಕೆ ಮುಂದುವರೆದಿದೆ. ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಇತ್ತೀಚೆಗೆ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ್ದು, ನಾನು ಇನ್ನೂ ಕೀವ್ ನಗರದಲ್ಲಿಯೇ ಇದ್ದೇನೆ, ಅವಿತುಕೊಳ್ಳುವುದಿಲ್ಲ ಎಂದಿದ್ದಾರೆ.
ಸೋಮವಾರ ತಡರಾತ್ರಿ ತಮ್ಮ ಫೇಸ್‌ಬುಕ್ ಪುಟದಲ್ಲಿ ಪೋಸ್ಟ್ ಮಾಡಿದ ವಿಡಿಯೋದಲ್ಲಿ ಮಾತನಾಡಿರುವ ಉಕ್ರೇನ್ ಅಧ್ಯಕ್ಷ ತಮ್ಮ ಕಚೇರಿಯಿಂದ ನಗರವನ್ನು ತೋರಿಸಿದ್ದಾರೆ. ಈ ವೇಳೆ 'ನಾನು ಕೀವ್‌ನ ಬಂಕೋವಾ ಸ್ಟ್ರೀಟ್‌ನಲ್ಲಿ ಇದ್ದೇನೆ. ನಾನು ಅಡಗಿಕೊಳ್ಳುವುದಿಲ್ಲ, ಯಾರಿಗೂ ಹೆದರುವುದಿಲ್ಲ. ನಮ್ಮ ಈ ರೀತಿಯ ದೇಶಭಕ್ತಿ ಇದೆ. ಆದಷ್ಟು ಬೇಗ ದೇಶಭಕ್ತಿ ಈ ಯುದ್ಧವನ್ನು ಗೆಲ್ಲುತ್ತದೆ ಎಂದಿದ್ದಾರೆ.
ಉಕ್ರೇನಿಯನ್ ಮತ್ತು ರಷ್ಯಾದ ನಿಯೋಗಗಳು ಬೆಲಾರಸ್ - ಪೋಲೆಂಡ್ ಗಡಿಯಲ್ಲಿ ನಡೆಸಿದ ಮೂರನೇ ಸುತ್ತಿನ ಶಾಂತಿ ಮಾತುಕತೆಯಲ್ಲಿ ಯಾವುದೇ ರೀತಿಯ ಮಹತ್ವದ ನಿರ್ಧಾರಗಳಿಲ್ಲದೇ ಕೊನೆಗೊಂಡಿದೆ. ಈ ಬೆನ್ನಲ್ಲೇ ಝೆಲೆನ್ಸ್ಕಿ ಅವರು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ದಾಖಲೆಗಳನ್ನು ಮನೆಗೆ ತೆಗೆದುಕೊಂಡು ಹೋದ ಉಕ್ರೇನ್ ನಿಯೋಗ: ರಷ್ಯಾದ ನಿಯೋಗದ ಮುಖ್ಯಸ್ಥರಾಗಿರುವ ರಷ್ಯಾದ ಅಧ್ಯಕ್ಷೀಯ ಸಹಾಯಕ ವ್ಲಾಡಿಮಿರ್ ಮೆಡಿನ್ಸ್ಕಿ ಅವರ ಪ್ರಕಾರ, ರಾಜಕೀಯ ಮತ್ತು ಮಿಲಿಟರಿ ಅಂಶಗಳ ಬಗ್ಗೆ ಚರ್ಚೆಗಳು ಮುಂದುವರಿದರೂ, ಅವು ಕಷ್ಟಕರವಾಗಿರುತ್ತವೆ. ರಷ್ಯಾ ಕಡೆಯವರು ನಿರ್ದಿಷ್ಟ ಒಪ್ಪಂದಗಳನ್ನು ಒಳಗೊಂಡ ದೊಡ್ಡ ಪ್ರಮಾಣದ ದಾಖಲೆಗಳನ್ನು ಸಭೆಗೆ ತಂದಿದ್ದರು. ಆದರೆ ಉಕ್ರೇನ್ ನಿಯೋಗ ಸ್ಥಳದಲ್ಲಿಯೇ ಸಹಿ ಹಾಕಲು ನಿರಾಕರಿಸಿದೆ. ಆದರೆ ಈ ಎಲ್ಲಾ ದಾಖಲೆಗಳನ್ನು ಅಧ್ಯಯನ ಮಾಡಲು ತೆಗೆದುಕೊಂಡು ಹೋಗಿದ್ದಾರೆ. ಇನ್ನು ನಾಗರಿಕ ಸ್ಥಳಾಂತರ ವಿಚಾರಕ್ಕೆ ಎರಡು ರಾಷ್ಟ್ರಗಳು ಒಪ್ಪಿವೆ ಎಂದು ಮೆಡಿನ್ಸ್ಕಿ ಹೇಳಿದ್ದಾರೆ.
ಇದನ್ನೂ ಓದಿ: ಉಕ್ರೇನ್ ಸಂಘರ್ಷ: ನಾಗರಿಕರ ಸ್ಥಳಾಂತರಕ್ಕೆ ರಷ್ಯಾದಿಂದ ಐದು ನಗರಗಳಲ್ಲಿ ಕದನ ವಿರಾಮ
ಕದನ ವಿರಾಮ ಘೋಷಿಸದಿರುವ ನಗರಗಳಲ್ಲಿ ತೀವ್ರ ಪ್ರಮಾಣದಲ್ಲಿ ದಾಳಿ ಮತ್ತು ಪ್ರತಿದಾಳಿಗಳಾಗಿವೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಈ ನಗರಗಳಿಂದ ನಾಗರಿಕರು ಸ್ಥಳಾಂತರ ಮಾಡುವುದನ್ನು ರಷ್ಯಾ ಪಡೆಗಳು ತಡೆಯುತ್ತಿವೆ. ಬಂದರು ನಗರವಾದ ಒಡೆಸ್ಸಾದಲ್ಲಿ ರಷ್ಯಾದ ಪಡೆಗಳು ಜಮಾವಣೆಗೊಳ್ಳುತ್ತಿವೆ. ಮುಂಜಾನೆ ಅಲ್ಲಲ್ಲಿ ಸ್ಫೋಟದ ಶಬ್ದ ಕೇಳಿಬಂದಿದೆ. ಒಡೆಸ್ಸಾದಲ್ಲಿ ಉಕ್ರೇನ್ ಪಡೆಗಳು ರಷ್ಯಾದ ನೌಕಾಪಡೆಯೊಂದನ್ನು ಉರುಳಿಸಿವೆ ಎಂದು ಬಿಬಿಸಿ ವರದಿ ಮಾಡಿದೆ.
ರಷ್ಯಾ ಬೆಂಬಲಿತ ಡೊನೆಟ್ಸ್ಕ್ ಪ್ರದೇಶದಲ್ಲಿ 2,33,000ಕ್ಕಿಂತಲೂ ಹೆಚ್ಚು ಮಂದಿ ಸಂಪರ್ಕ ಕಡಿದುಕೊಂಡಿದ್ದಾರೆ. ಸುಮಾರು 2,38,000 ಉಕ್ರೇನ್ ಮಂದಿ ಅಡುಗೆ ಅನಿಲವಿಲ್ಲದೇ ಸಂಕಷ್ಟದಲ್ಲಿ ಸಿಲುಕಿದ್ದಾರೆ. ದಾಳಿಗಳ ಮೂಲಕ ಪವರ್ ಗ್ರಿಡ್ಗಳಿಗೆ ಹಾನಿ ಮಾಡಿರುವುದರಿಂದಲೇ ಇಂಥಹ ಸ್ಥಿತಿ ನಿರ್ಮಾಣವಾಗಿದೆ ಎಂದು ಉಕ್ರೇನ್ ಸರ್ಕಾರ ಹೇಳಿಕೊಂಡಿದೆ.