ಲಂಡನ್: 2020ರಲ್ಲಿ ಕೊರೊನಾ ಸಾಂಕ್ರಾಮಿಕದ ಆರಂಭದಿಂದಲೇ ಬಹಿಷ್ಕಾರಕ್ಕೊಳಗಾಗಿದ್ದ 'ಹ್ಯಾಂಡ್ಶೇಕ್' ಇದೀಗ ಪುನರಾಗಮಿಸಿದೆ. ಹಸ್ತಲಾಘವ ಮಾಡಿದರೆ ಒಬ್ಬರಿಂದೊಬ್ಬರಿಗೆ ವೈರಸ್ ಹರಡುತ್ತದೆ ಎಂದು ತಜ್ಞರು ಹೇಳಿದ್ದರಿಂದ ಕಳೆದ ಒಂದೂವರೆ ವರ್ಷದಿಂದ ಹ್ಯಾಂಡ್ಶೇಕ್ ಸಂಸ್ಕೃತಿ ಮಾಯವಾಗಿತ್ತು.
ಅಮೆರಿಕದಲ್ಲಿ ಈಗಾಗಲೇ ಸಂಪೂರ್ಣವಾಗಿ ಕೋವಿಡ್ ಲಸಿಕೆ ಪಡೆದವರು ಮಾಸ್ಕ್ ಧರಿಸುವ, ದೈಹಿಕ ಅಂತರ ಕಾಯ್ದುಕೊಳ್ಳುವ ಅಗತ್ಯವಿಲ್ಲ ಎಂದು ತಿಳಿಸಿದೆ. ಜಿನೀವಾದಲ್ಲಿ ಈ ವಾರ ನಡೆದ ಶೃಂಗಸಭೆಯಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಯುಸ್ ಅಧ್ಯಕ್ಷ ಜೋ ಬೈಡನ್ ಅವರು ಮಾಡಿದ ಭಾಷಣ, ಚರ್ಚೆಗಳಿಗಿಂತ ವಿಶ್ವದ ಕ್ಯಾಮೆರಾಗಳ ಮುಂದೆ ಪರಸ್ಪರ ಹಸ್ತಲಾಘವ ಮಾಡಿದ್ದೇ ಸುದ್ದಿಯಾಗಿದೆ.
ಕೆಲ ದಿನಗಳ ಹಿಂದೆ ಇಂಗ್ಲೆಂಡ್ನಲ್ಲಿ ನಡೆದ G7 ಶೃಂಗಸಭೆಯಲ್ಲಿ ಬೈಡನ್ ಹಾಗೂ ಯುಕೆ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಪರಸ್ಪರ ಅಂಗೈ ಬದಲಾಗಿ ಮೊಣಕೈ ಕೊಟ್ಟುಕೊಂಡು ವಿಭಿನ್ನವಾಗಿ ಸ್ವಾಗತಿಸಿಕೊಂಡಿದ್ದರು.
2019ರ ಡಿಸೆಂಬರ್ನಲ್ಲೇ ಚೀನಾದಲ್ಲಿ ಮೊದಲು ಕೊರೊನಾ ವೈರಸ್ ಪತ್ತೆಯಾಗಿತ್ತು. ಆದರೆ ಬೇರೆ ರಾಷ್ಟ್ರಗಳಿಗೆ ಇನ್ನೂ ಹರಡಿರಲಿಲ್ಲ. ಈ ವೇಳೆಯಲ್ಲಿ ಅಂದರೆ 2020ರ ಫೆಬ್ರವರಿಯಲ್ಲಿ ಗುಜರಾತ್ನಲ್ಲಿ ನಡೆದ 'ನಮಸ್ತೆ ಟ್ರಂಪ್' ಕಾರ್ಯಕ್ರಮಕ್ಕೆ ಆಗಮಿಸಿದ್ದ ಅಂದಿನ ಅಮೆರಿಕ ಅಧ್ಯಕ್ಷ ಟ್ರಂಪ್ ವೈರಸ್ ಭಯದಲ್ಲಿ ಹ್ಯಾಂಡ್ಶೇಕ್ ಮಾಡಲು ಹಿಂಜರಿಯುತ್ತಿದ್ದರು.
ಕೋವಿಡ್ಗೂ ಮುನ್ನ ಜಾಗತಿಕ ನಾಯಕರು ಭೇಟಿಯಾದಾಗ ಶೇಕ್ ಹ್ಯಾಂಡ್ ಮಾಡುವುದು ಸರ್ವೇಸಾಮಾನ್ಯವಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು ಹಸ್ತಲಾಘವ ಜೊತೆಗೆ ಅಪ್ಪುಗೆಯ ಸ್ವಾಗತವನ್ನೂ ನೀಡಿ ಸುದ್ದಿಯಾಗುತ್ತಿದ್ದರು. ಆದರೆ ಇವೆಲ್ಲಾ ನಿಂತು ಅನೇಕ ಸಮಯವಾಗಿದೆ. ಹ್ಯಾಂಡ್ಶೇಕ್ ಇರಲಿ, ಭೇಟಿಯೂ ಇಲ್ಲದೇ ಎಲ್ಲಾ ಕಾರ್ಯಕ್ರಮಗಳೂ ವರ್ಚುವಲ್ ಆಗಿ ನಡೆಯುತ್ತಿವೆ. ಶೇಕ್ ಹ್ಯಾಂಡ್ ಬದಲಾಗಿ ನಮಸ್ಕಾರ ಮಾಡುವಂತೆ ಭಾರತದ ಅನೇಕ ರಾಜ್ಯಗಳ ಆರೋಗ್ಯ ಇಲಾಖೆಗಳು ತಿಳಿಸಿವೆ. ಇದು ಆರೋಗ್ಯಕರ ಕೂಡ. ಆದರೆ ಇದೀಗ ಜಾಗತಿಕ ನಾಯಕರೇ ಈ ನಿರ್ಬಂಧಕ್ಕೆ ಬ್ರೇಕ್ ಹಾಕಿದ್ದಾರೆ.