ಜಿನೆವಾ (ಸ್ವಿಟ್ಜರ್ಲ್ಯಾಂಡ್) : ಫಿಜರ್ ಹಾಗೂ ಬಯೋಎನ್ಟೆಕ್ ಔಷಧ ತಯಾರಿಕಾ ಕಂಪನಿಗಳು ತಾವು ಉತ್ಪಾದಿಸಿರುವ ಕೊರೊನಾ ಲಸಿಕೆ ಶೇಕಡಾ 90ರಷ್ಟು ರೋಗವನ್ನು ತಡೆಯುವಲ್ಲಿ ಸಫಲವಾಗಿದೆ ಎಂದು ಹೇಳಿಕೆ ನೀಡಿದ ಬೆನ್ನಲ್ಲೇ ಆ ಔಷಧ ವಿತರಣೆ ನ್ಯಾಯಯುತವಾಗಿರಬೇಕೆಂದು ವಿಶ್ವ ಆರೋಗ್ಯ ಸಂಸ್ಥೆಯ ಮಹಾ ನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಕರೆ ನೀಡಿದ್ದಾರೆ.
ಮಂಗಳವಾರ ನಡೆದ 73ನೇ ವಿಶ್ವ ಆರೋಗ್ಯ ಸಂಸ್ಥೆಯ ಸಭೆಯಲ್ಲಿ ಸದಸ್ಯ ರಾಷ್ಟ್ರಗಳನ್ನು ಉದ್ದೇಶಿಸಿ ಮಾತನಾಡಿದ ಅವರು ವಿಶ್ವ ಆರೋಗ್ಯ ಸಂಸ್ಥೆ ಫಿಜರ್ ಔಷಧ ಕಂಪನಿಯ ಹೇಳಿಕೆಗೆ ಸಂತಸ ವ್ಯಕ್ತಪಡಿಸುತ್ತದೆ. ಮುಂದಿನ ದಿನಗಳಲ್ಲಿ ಕೋವಿಡ್ ನಿವಾರಣೆಯಲ್ಲಿ ಹೆಚ್ಚು ಪರಿಣಾಮ ಬೀರುವ ಲಸಿಕೆಗಳನ್ನು ಆ ಕಂಪನಿಯಿಂದ ನಿರೀಕ್ಷಿಸುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದರ ಜೊತೆಗೆ ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸಲು ಲಸಿಕೆ ತುರ್ತಾಗಿ ಅಗತ್ಯವಿದೆ ಎಂದ ಅವರು ಬಡತನ, ಹಸಿವು, ಹವಾಮಾನ ಬದಲಾವಣೆಯ ದುಷ್ಪರಿಣಾಮಗಳು ಮತ್ತು ಅಸಮಾನತೆಗೆ ಯಾವುದೇ ಲಸಿಕೆ ಇಲ್ಲ ಎಂದೂ ವೇಳೆ ಹೇಳಿದರು.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿಶ್ವ ಆರೋಗ್ಯ ಸಂಸ್ಥೆಯ ಆಫ್ರಿಕಾದ ಪ್ರಾದೇಶಿಕ ನಿರ್ದೇಶಕ ಮತ್ಶಿಡಿಶೋ ಮೊಯೆತಿ ಪರಿಣಾಮಕಾರಿಯಾದ ಲಸಿಕೆ ಲಭ್ಯವಾಗುತ್ತಿರುವುದು ಅತ್ಯಂತ ಸಂತಸ ಸುದ್ದಿ. ಈ ಲಸಿಕೆಯಿಂದ ಆಫ್ರಿಕನ್ ದೇಶಗಳಲ್ಲಿ ಕೊರೊನಾ ಹಾವಳಿಯನ್ನು ತಪ್ಪಿಸಲು ಸಾಧ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.
ಪ್ರಸ್ತುತ ಒಂದು ಅಂದಾಜಿನ ಪ್ರಕಾರ ಈ ವರ್ಷದ ಅಂತ್ಯದ ವೇಳೆಗೆ ಫಿಜರ್ ಹಾಗೂ ಬಯೋಎನ್ಟೆಕ್ ಕಂಪನಿಗಳು 50 ಮಿಲಿಯನ್ ಡೋಸ್ಗಳನ್ನು ಹಾಗೂ 2021ರಲ್ಲಿ 1.3 ಬಿಲಿಯನ್ ಡೋಸ್ಗಳನ್ನು ಉತ್ಪಾದಿಸುವ ನಿರೀಕ್ಷೆಯಿದೆ.