ನವದೆಹಲಿ : ಉಕ್ರೇನ್ ಗಡಿಯಿಂದ ಕೆಲವು ಸೈನಿಕರನ್ನು ವಾಪಸ್ ಕರೆಸಿಕೊಳ್ಳುವುದಾಗಿ ರಷ್ಯಾ ಘೋಷಿಸಿದೆ. ಅಲ್ಲದೇ ಮಾಸ್ಕೋದಲ್ಲಿರುವ ವಿದೇಶಾಂಗ ಸಚಿವಾಲಯವು ಪಾಶ್ಚಿಮಾತ್ಯ ದೇಶಗಳನ್ನು ಒಂದು ಗುಂಡು ಹಾರಿಸದೆ ನಾಶಪಡಿಸಲಾಗಿದೆಂದು ಹೇಳಿದೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
ಫೆಬ್ರವರಿ 15, 2022 ಪಾಶ್ಚಿಮಾತ್ಯ ಯುದ್ಧದ ಪ್ರಚಾರ ವಿಫಲವಾದ ದಿನವಾಗಿ ಇತಿಹಾಸ ಸೇರುತ್ತದೆ. ಒಂದೇ ಒಂದು ಗುಂಡು ಹಾರಿಸದೆ ಅವರನ್ನು ಅವಮಾನಿಸಲಾಗಿದೆ ಮತ್ತು ನಾಶಪಡಿಸಲಾಗಿದೆ ಎಂದು ಟೆಲಿಗ್ರಾಮ್ ಪೋಸ್ಟ್‌ನಲ್ಲಿ ಸಚಿವಾಲಯದ ವಕ್ತಾರರಾದ ಮಾರಿಯಾ ಜಖರೋವಾ ಹೇಳಿದ್ದಾರೆ.
ರಷ್ಯಾದ ದಕ್ಷಿಣ ಮತ್ತು ಪಶ್ಚಿಮ ಮಿಲಿಟರಿ ಜಿಲ್ಲೆಗಳ ಕೆಲವು ಘಟಕಗಳು ತಾಲೀಮನ್ನು ಮುಗಿಸಿದ್ದು, ರೈಲು ಮತ್ತು ಟ್ರಕ್ ಮೂಲಕ ತಮ್ಮ ನೆಲೆಗೆ ವಾಪಸ್ ಆಗುತ್ತಿವೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ತಿಳಿಸಿದೆ.
ಇದನ್ನೂ ಓದಿ: ಉಕ್ರೇನ್ನಲ್ಲಿ ಯುದ್ಧದ ಕಾರ್ಮೋಡ: ದೇಶ ತೊರೆಯಲು ನಾಗರಿಕರು, ವಿದ್ಯಾರ್ಥಿಗಳಿಗೆ ಭಾರತ ಸೂಚನೆ
ರಕ್ಷಣಾ ಸಚಿವಾಲಯವು ರಷ್ಯಾದ ಶಸ್ತ್ರಸಜ್ಜಿತ ವಾಹನಗಳು ಗಡಿಯಿಂದ ಬೇಸ್‌ಗೆ ಮರಳುತ್ತಿರುವ ವಿಡಿಯೋವೊಂದನ್ನು ಬಿಡುಗಡೆ ಮಾಡಿದೆ. ರಷ್ಯಾದ ಇಂಟರ್‌ಫ್ಯಾಕ್ಸ್ ಸುದ್ದಿ ಸಂಸ್ಥೆ ಪ್ರಕಾರ, ಟ್ಯಾಂಕ್‌ಗಳ ಆಫ್-ರೋಡ್ ಮಾರ್ಚ್, ಟ್ಯಾಂಕ್‌ಗಳು, ಪದಾತಿ ದಳದ ಯುದ್ಧ ವಾಹನಗಳು ಮತ್ತು ಸ್ವಯಂ ಚಾಲಿತ ಫಿರಂಗಿ ವ್ಯವಸ್ಥೆಗಳನ್ನು ರೈಲಿನಲ್ಲಿ ಲೋಡ್ ಮಾಡುವುದನ್ನು ಈ ವಿಡಿಯೋ ಒಳಗೊಂಡಿದೆ. ರಷ್ಯಾ ಆಕ್ರಮಣಕ್ಕೆ ಮುಂದಾದರೆ ಉಕ್ರೇನ್‌ಗೆ ಬೆಂಬಲ ನೀಡಲು ನ್ಯಾಟೊ ಪಡೆಗಳು ಮತ್ತು ಅಮೆರಿಕವು ಸೇನೆಯನ್ನು ಸಜ್ಜುಗೊಳಿಸಿದ್ದವು.