ಸ್ಪೇನ್: ಇಲ್ಲಿನ ಅಟ್ಲಾಂಟಿಕ್ ಸಾಗರದ ದ್ವೀಪವಾದ ಲಾ ಪಾಲ್ಮಾದಲ್ಲಿ ಜ್ವಾಲಾಮುಖಿ ಸ್ಫೋಟಗೊಂಡಿದೆ. ಇನ್ನು ಲಾವಾರಸ ಎಲ್ಲೆಡೆ ಹರಿದಿದ್ದು, ಸ್ಥಳೀಯ ಪ್ರದೇಶಗಳು ಬೆಂಕಿಯಿಂದ ಆವೃತವಾಗಿದೆ. ಕಳೆದ ಒಂದು ವಾರದ ಹಿಂದೆಯಷ್ಟೇ ಇಲ್ಲಿ ಭೂಕಂಪನ ಸಂಭವಿಸಿತ್ತು.
ಜ್ವಾಲಾಮುಖಿ ಸ್ಫೋಟದಿಂದ ಲಾವಾರಸ ಹೆಚ್ಚಾಗಿ ಚಿಮ್ಮುತ್ತಿದ್ದು, ಸ್ಥಳೀಯ ಮನೆಗಳು ಸುಟ್ಟು ಭಸ್ಮವಾಗಿದೆ. ಅಷ್ಟೇ ಅಲ್ಲದೆ, ಮುಂಜಾಗೃತಾ ಕ್ರಮವಾಗಿ ಸುಮಾರು 1000 ಜನರನ್ನು ಅಲ್ಲಿಂದ ಸ್ಥಳಾಂತರಿಸಲಾಗಿದೆ ಎಂದು ಸ್ಪೇನ್‌ನ ಸಿವಿಲ್ ಗಾರ್ಡ್ ಮಾಹಿತಿ ನೀಡಿದೆ.
'The Canary Islands Volcanology Institute' ಜ್ವಾಲಾಮುಖಿ ಸ್ಫೋಟಗೊಂಡ ಬಗ್ಗೆ ವರದಿ ಮಾಡಿದೆ. ಇನ್ನು ಇಲ್ಲಿ ಕೊನೆಯದಾಗಿ 1971 ರಲ್ಲಿ ಸ್ಫೋಟ ಕಂಡು ಬಂದಿತ್ತು ಎಂದು ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ.
ಇನ್ನು ಲಾ ಪಾಲ್ಮಾವು 85,000 ಜನಸಂಖ್ಯೆಯನ್ನು ಹೊಂದಿರುವ, ಆಫ್ರಿಕಾದ ಪಶ್ಚಿಮ ಕರಾವಳಿಯ ಸ್ಪೇನ್‌ನ ಕ್ಯಾನರಿ ದ್ವೀಪಗಳ ದ್ವೀಪಸಮೂಹದಲ್ಲಿರುವ ಎಂಟು ಜ್ವಾಲಾಮುಖಿ ದ್ವೀಪಗಳಲ್ಲಿ ಒಂದಾಗಿದೆ. ಮೊರಾಕ್ಕೋದಿಂದ ಈ ದ್ವೀಪಗಳು 100 ಕಿಮೀ (60 ಮೈಲಿ) ದೂರದಲ್ಲಿದೆ. ಜ್ವಾಲಾಮುಖಿ ಸ್ಫೋಟಕ್ಕೆ ಮುನ್ನ ಕಳೆದ ವಾರ 4.2-ತೀವ್ರತೆಯ ಭೂಕಂಪ ಸಂಭವಿಸಿತ್ತು.