ನ್ಯೂಯಾರ್ಕ್: ಮ್ಯಾನ್ಮಾರ್‌ನಲ್ಲಿ ನಡೆದ ರಕ್ತಪಾತವನ್ನು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಮತ್ತು ಅವರ ವಿಶೇಷ ಮ್ಯಾನ್ಮಾರ್‌ನ ರಾಯಭಾರಿ ಕ್ರಿಸ್ಟೀನ್ ಶ್ರೆನರ್ ಬರ್ಗೆನರ್ ಅವರು ತೀವ್ರವಾಗಿ ಖಂಡಿಸಿದ್ದಾರೆ.
ಮ್ಯಾನ್ಮಾರ್ ಮಿಲಿಟರಿ ದಂಗೆಯು ಶಾಂತಿ ಮತ್ತು ಸ್ಥಿರತೆಯನ್ನು ಹಾಳು ಮಾಡುತ್ತಿದೆ. ನಾನು ಈಗಾಗಲೇ ಅಲ್ಲಿ ನಡೆಯುತ್ತಿರುವ ಕೊಲೆ, ಕೈದಿಗಳಿಗೆ ಚಿತ್ರಹಿಂಸೆ, ಪ್ರತಿಭಟನಾಕಾರರ ಮೇಲೆ ದೌರ್ಜನ್ಯ, ಕಿರುಕುಳದ ಬಗ್ಗೆ ಮಾಹಿತಿ ಪಡೆದುಕೊಂಡಿದ್ದೇನೆ. ಎಲ್ಲರೂ ಸಂಯಮದಿಂದ ಮಾನವ ಹಕ್ಕುಗಳನ್ನು ಅನುಸರಿಸುವ ಮೂಲಕ ಗೌರವದಿಂದ ನಡೆದುಕೊಳ್ಳಬೇಕು ಎಂದು ತಿಳಿಸಿದ್ದಾರೆ.
ಇನ್ನು ಮ್ಯಾನ್ಮಾರ್‌ನ ಪರಿಸ್ಥಿತಿಯನ್ನು ಶಾಂತಗೊಳಿಸುವ ಸಲುವಾಗಿ ಪ್ರಾದೇಶಿಕ ನಾಯಕರು ಮತ್ತು ಭದ್ರತಾ ಮಂಡಳಿ ಸದಸ್ಯರು ನಿರಂತರವಾಗಿ ಬೆಂಬಲ ನೀಡುತ್ತಿದ್ದಾರೆ ಎಂದರು.
ಫೆಬ್ರುವರಿ 1ರಿಂದ ಮ್ಯಾನ್ಮಾರ್ ಆಡಳಿತವನ್ನು ಸೇನೆ ವಶಕ್ಕೆ ತೆಗೆದುಕೊಂಡ ಬಳಿಕ ದೇಶಾದ್ಯಂತ ಸೇನೆ ವಿರುದ್ಧ ಪ್ರತಿಭಟನೆ ನಡೆಯುತ್ತಿದ್ದು, ಈವರೆಗೆ ಸುಮಾರು 70 ಮಂದಿ ಸಾವನ್ನಪ್ಪಿದ್ದು, 2000 ಕ್ಕೂ ಅಧಿಕ ಜನರನ್ನು ಬಂಧಿಸಲಾಗಿದೆ ಎಂದು ಆಗ್ನೇಯ ಏಷ್ಯಾದ ಮಾನವ ಹಕ್ಕುಗಳ ಯುಎನ್ ತಜ್ಞರು ತಿಳಿಸಿದ್ದಾರೆ.