ಜಿನೀವಾ: ಉಕ್ರೇನ್ ಮೇಲೆ ರಷ್ಯಾದ ಆಕ್ರಮಣ ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೆ ಸುಮಾರು 6.60 ಲಕ್ಷ ಜನರು ನೆರೆಯ ದೇಶಗಳಿಗೆ ಪಲಾಯನ ಮಾಡಿದ್ದಾರೆ. ನಿನ್ನೆಗೆ ಹೋಲಿಸಿದರೆ ಇದು 1.60 ಲಕ್ಷ ಹೆಚ್ಚಿದೆ. ಒಂದು ದಿನದ ಹಿಂದೆ ಇದು 5 ಲಕ್ಷ ಇತ್ತು ಎಂದು ವಿಶ್ವಸಂಸ್ಥೆಯ ನಿರಾಶ್ರಿತರ ಸಂಸ್ಥೆ ಮಾಹಿತಿ ನೀಡಿದೆ.
ಉಕ್ರೇನ್ ಯುದ್ಧ ಸಂತ್ರಸ್ತರ ಪಲಾಯನವು ಈ ಶತಮಾನದಲ್ಲಿಯೇ ಅತ್ಯಧಿಕ ದೊಡ್ಡ ವಲಸೆಯಾಗಿದೆ. ಇದು ರಷ್ಯಾದ ದಾಳಿಯಿಂದ ತಪ್ಪಿಸಿಕೊಳ್ಳಲು ಉಕ್ರೇನ್‌ನಲ್ಲಿ ವಾಸಿಸುತ್ತಿರುವ ವಿವಿಧ ರಾಷ್ಟ್ರಗಳ ಪ್ರಜೆಗಳು ಸೇರಿದಂತೆ ಉಕ್ರೇನಿಯನ್ನರು ಕೂಡ ದೇಶ ತೊರೆಯುತ್ತಿದ್ದಾರೆ. ಅವರನ್ನು ಯಾವ ದೇಶಗಳೂ ಗಡಿ ಪ್ರವೇಶಿಸದಂತೆ ತಡೆಯಬಾರದು ಎಂದು ವಿಶ್ವಸಂಸ್ಥೆಯ ಹೈ ಕಮಿಷನರ್‌ನ ವಕ್ತಾರರಾದ ಶಾಬಿಯಾ ಮಾಂಟೂ ಮನವಿ ಮಾಡಿದ್ದಾರೆ.
ಉಕ್ರೇನ್ನಲ್ಲಿನ ಹಿಂಸಾಚಾರದಿಂದ ತಪ್ಪಿಸಿಕೊಂಡು ನೆರೆಯ ರಾಷ್ಟ್ರಗಳಿಗೆ ಬರುತ್ತಿರುವ ವಲಸಿಗರಿಗೆ ಆಯಾ ದೇಶಗಳು ಅವಕಾಶ ನೀಡಬೇಕು ಎಂದು ಕೋರಿದ್ದಾರೆ.
1. ಪ್ರತಿಭಟನಾಕಾರರ ಬಿಡುಗಡೆಗೆ ಆಗ್ರಹ: ರಷ್ಯಾ ನಡೆಸುತ್ತಿರುವ ಮಿಲಿಟರಿ ಕಾರ್ಯಾಚರಣೆಯ ವಿರುದ್ಧ ಸ್ವದೇಶಿಯರು ನಡೆಸುತ್ತಿರುವ ಪ್ರತಿಭಟನೆಯನ್ನು ಹತ್ತಿಕ್ಕಲು ವ್ಲಾಡಿಮಿರ್ ಪುಟಿನ್ ಸರ್ಕಾರ ಪ್ರತಿಭಟನಾಕಾರರನ್ನು ಬಂಧಿಸಿದೆ. ಎಲ್ಲ ಬಂಧಿತರನ್ನು ಶೀಘ್ರವೇ ಬಿಡುಗಡೆ ಮಾಡಬೇಕು ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೋರಾಟ ವಿಭಾಗ ಒತ್ತಾಯಿಸಿದೆ.
ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಕಳೆದ ಒಂದು ವಾರದಿಂದ ರಷ್ಯಾದಲ್ಲಿ ಸುಮಾರು 6,400 ಜನರನ್ನು ಬಂಧಿಸಲಾಗಿದೆ. ಇನ್ನು ರಷ್ಯಾದ ಮಿತ್ರರಾಷ್ಟ್ರ ಬೆಲಾರಸ್‌ನಲ್ಲಿ ಕೂಡ ಯುದ್ಧದ ವಿರುದ್ಧ ನಡೆದ ಪ್ರತಿಭಟನೆಯಲ್ಲಿ 744 ಜನರನ್ನು ಬಂಧಿಸಲಾಗಿದೆ.
2. ಯುದ್ಧ ಸಂತ್ರಸ್ತರಿಗೆ ಸಹಾಯ ಮಾಡಿ: ಉಕ್ರೇನ್ನಲ್ಲಿನ ಯುದ್ಧದಿಂದ ಸಂತ್ರಸ್ತರಾಗಿರುವ ಜನರಿಗೆ ಸಹಾಯ ಮಾಡಲು 250 ಮಿಲಿಯನ್ ಡಾಲರ್ ಸಹಾಯ ಮಾಡುವಂತೆ ರೆಡ್‌ಕ್ರಾಸ್ ಸಂಸ್ಥೆ ಮನವಿ ಮಾಡಿದೆ. ಅನ್ನ ಆಹಾರವಿಲ್ಲದೇ ಲಕ್ಷಾಂತರ ಜನರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಆರೋಗ್ಯವನ್ನು ಕಾಪಾಡಿಕೊಳ್ಳುವುದೂ ಅವರಿಗೆ ಸವಾಲಾಗಿದೆ. ಹೀಗಾಗಿ ವಿಶ್ವದ ಜನರು ಅವರ ನೆರವಿಗೆ ಬರಬೇಕಿದೆ ಎಂದು ಕೋರಿದೆ.
3. ರಾಯಭಾರಿ ಕಚೇರಿಯಲ್ಲಿ ಆಶ್ರಯ: ಮಹಿಳೆಯರು- ಮಕ್ಕಳು ಸೇರಿದಂತೆ 87 ಜನರಿಗೆ ಇಟಲಿ ರಾಯಭಾರಿ ಅಧಿಕಾರಿಗಳು ತಮ್ಮ ಅಧಿಕೃತ ನಿವಾಸದಲ್ಲಿಯೇ ಆಶ್ರಯ ನೀಡಿದ್ದಾರೆ. ದಾಳಿ ಭೀತಿಗೆ ಸಿಲುಕಿರುವ ಸಂತ್ರಸ್ತರಿಗೆ ರಾಯಭಾರಿ ಕಚೇರಿ ನೆರವಾಗಿದೆ. ಉಕ್ರೇನ್‌ನಲ್ಲಿ ಸುಮಾರು 2,300 ಇಟಾಲಿಯನ್ನರಿದ್ದಾರೆ.
ಇದನ್ನೂ ಓದಿ: ಖಾರ್ಕಿವ್ನ ರಣಭೀಕರತೆ ಬಿಚ್ಚಿಟ್ಟ ಮೃತ ನವೀನ್ ಸ್ನೇಹಿತ ಪಂಜಾಬ್ನ ಲವಕೇಶ್