ಕೀವ್,ಉಕ್ರೇನ್ : ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ 3ನೇ ದಿನಕ್ಕೆ ಕಾಲಿಟ್ಟಿದ್ದು, ದಾಳಿ-ಪ್ರತಿದಾಳಿಗಳು ತೀವ್ರವಾಗುತ್ತಿವೆ. ಈ ಬೆನ್ನಲ್ಲೇ ರಷ್ಯಾದ ಸಾರಿಗೆ ವಿಮಾನ ಐಎಲ್-76 (IL-76) ಅನ್ನು ಉಕ್ರೇನ್ ಹೊಡೆದುರುಳಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕೀವ್ ನಗರದ ವಾಸಿಲ್ಕಿವ್ ಪಟ್ಟಣದ ಬಳಿ ಈ ಘಟನೆ ನಡೆದಿದೆ. ಉಕ್ರೇನ್ ಸಶಸ್ತ್ರ ಪಡೆಗಳ ಜನರಲ್ ಸ್ಟಾಫ್ ಫೇಸ್‌ಬುಕ್‌ನಲ್ಲಿ ಈ ಕುರಿತು ಮಾಹಿತಿ ನೀಡಿದ್ದಾರೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಶನಿವಾರ ರಾತ್ರಿ ಕೀವ್ನಲ್ಲಿ ಸರಣಿ ಸ್ಫೋಟಗಳು ನಡೆಯುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋಗಳು ಪ್ರಸಾರವಾಗುತ್ತಿವೆ. ಕೀವ್‌ನ ವಾಯವ್ಯ ಪ್ರದೇಶದಲ್ಲಿ ಸ್ಫೋಟಗಳು ಹೆಚ್ಚಾಗಿ ಸಂಭವಿಸುತ್ತಿವೆ. ಮಿಲಿಟರಿ ನೆಲೆಯ ಪಕ್ಕದಲ್ಲಿರುವ ಬೆರೆಸ್ಟಿಸ್ಕಾ ಮೆಟ್ರೋ ನಿಲ್ದಾಣದ ಬಳಿ ಸ್ಫೋಟಗಳು ನಡೆದಿವೆ ಎಂದು ರಷ್ಯನ್ ಟಿವಿ ವರದಿ ಮಾಡಿದೆ.
ಇದನ್ನೂ ಓದಿ: ಉಕ್ರೇನ್ನ ಚೆರ್ನೊಬಿಲ್ ಬಳಿ ವಿಕಿರಣ ಹೊರಸೂಸುವಿಕೆ ಹೆಚ್ಚಳ: ವರದಿ
ಪ್ರತ್ಯಕ್ಷದರ್ಶಿಯೊಬ್ಬರು ಆನ್‌ಲೈನ್‌ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಸ್ಫೋಟದ ಶಬ್ದಗಳು ಮಿಲಿಟರಿ ನೆಲೆಯಿಂದ ಬರುತ್ತಿವೆ ಎಂದು ಮಾಹಿತಿ ನೀಡಿದ್ದಾರೆ. ಮತ್ತೊಂದು ವಿಡಿಯೋದಲ್ಲಿ ರಸ್ತೆ ಮಧ್ಯದಲ್ಲಿ ಬೆಂಕಿ ಉರಿಯುತ್ತಿರುವುದು ಗೊತ್ತಾಗುತ್ತಿದೆ ಎಂದು ರಷ್ಯನ್ ಟಿವಿ ಹೇಳಿದೆ.