ಹೈದರಾಬಾದ್: ರಷ್ಯಾ-ಉಕ್ರೇನ್ ನಡುವಿನ ಯುದ್ಧದ ಪರಿಸ್ಥಿತಿ ಜಗತ್ತಿಗೆ ಎಚ್ಚರಿಕೆಯ ಗಂಟೆಯಾಗಿದ್ದು, ಇದು ಪ್ರಪಂಚದ ಉಳಿದ ಭಾಗಗಳ ಮೇಲೆ ತೀವ್ರ ಪರಿಣಾಮ ಬೀರುವ ಸಾಧ್ಯತೆ ಇದೆ. ಯುದ್ಧದಿಂದ ಹಾನಿಗೊಳಗಾದ ರಷ್ಯಾ-ಉಕ್ರೇನ್ ವಿದೇಶಿ ರಫ್ತು ಸರಪಳಿಗಳಿಗೆ ಪ್ರಮುಖ ಮಾರ್ಗಗಳಾಗಿರುವುದೇ ತೀವ್ರ ಪರಿಣಾಮಕ್ಕೆ ಕಾರಣವಾಗಿದೆ.
ಈ ಎರಡು ದೇಶಗಳು ಯುರೋಪಿಯನ್ ದೇಶಗಳು ಸೇರಿದಂತೆ ಇತರ ದೇಶಗಳಿಗೆ ಆಹಾರ, ಅಗತ್ಯ ಸರಕುಗಳು, ಕಚ್ಚಾ ವಸ್ತುಗಳು, ಅನಿಲ ಹಾಗೂ ಇಂಧನದಂತಹ ಪ್ರಮುಖ ಉತ್ಪನ್ನಗಳ ಪೂರೈಕೆಗೆ ಮುಖ್ಯ ಮೂಲಗಳಾಗಿವೆ. ಇದರೊಂದಿಗೆ ಉಭಯ ದೇಶಗಳ ನಡುವಿನ ಯುದ್ಧದ ಪರಿಸ್ಥಿತಿಯು ವಿವಿಧ ದೇಶಗಳಿಗೆ ಶಾಪವಾಗಿ ಪರಿಣಮಿಸಲಿದೆ.
ಅನಿಲ ಬೆಲೆ ಗಗನಕ್ಕೆ..?: ನಿರ್ದಿಷ್ಟವಾಗಿ ರಷ್ಯಾ-ಉಕ್ರೇನ್ ನಡುವಿನ ಉದ್ವಿಗ್ನತೆಯಿಂದ ರಷ್ಯಾದಿಂದ ಐರೋಪ್ಯ ರಾಷ್ಟ್ರಗಳಿಗೆ ಪೂರೈಕೆ ಆಗುತ್ತಿದ್ದ ಇಂಧನಕ್ಕೆ ಅಡ್ಡಿಯಾಗಲಿದೆ. ಹೀಗಾಗಿ ಯುರೋಪಿಯನ್ ರಾಷ್ಟ್ರಗಳಲ್ಲಿ ತೈಲ ಬೆಲೆ ಗಗನಕ್ಕೇರಿಕೆಯಾಗಲಿದೆ ಎಂದು ಹೇಳಲಾಗುತ್ತಿದೆ. ಬಹುಪಾಲು ಯುರೋಪಿಯನ್ ರಾಷ್ಟ್ರಗಳು ಭೂಗತ ಕೊಳವೆಗಳ ಮೂಲಕ ರಷ್ಯಾದಿಂದ ಸರಬರಾಜು ಮಾಡುವ ಅನಿಲವನ್ನು ಅವಲಂಬಿಸಿವೆ.
ಆದರೂ ಪ್ರಸ್ತುತ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ರಷ್ಯಾದಿಂದ ಸಂಪೂರ್ಣ ಅನಿಲ ರಫ್ತು ಆಗುವುದಿಲ್ಲ ಎಂದು ಅರ್ಥಶಾಸ್ತ್ರಜ್ಞರು ಹೇಳುತ್ತಾರೆ. ಅನಿಲ ಪೂರೈಕೆಯಲ್ಲಿನ ಅಡಚಣೆಗಳು ಅವಲಂಬಿತ ರಾಷ್ಟ್ರಗಳ ಮೇಲೆ ತೀವ್ರ ಪರಿಣಾಮ ಬೀರುವ ಅಪಾಯವನ್ನುಂಟುಮಾಡುತ್ತದೆ ಎಂದು ಹೇಳಲಾಗುತ್ತದೆ. ಈಗಾಗಲೇ ಕೋವಿಡ್‌ನಿಂದಾಗಿ ಇಂಧನ ಉತ್ಪನ್ನಗಳ ಬೆಲೆ ತೀವ್ರವಾಗಿ ಏರಿಕೆಯಾಗಿದೆ.
ಈ ಪದಾರ್ಥಗಳಿಗೂ ಕೊರತೆ..!: ಮತ್ತೊಂದೆಡೆ ರಷ್ಯಾ-ಉಕ್ರೇನ್ ಯುದ್ಧವು ಆಹಾರ ರಫ್ತಿನ ಮೇಲೆ ಗಂಭೀರ ಪರಿಣಾಮ ಬೀಳಲಿದೆ. ವಿಶ್ವದ ಗೋಧಿ ರಫ್ತಿನ ಕಾಲುಭಾಗವನ್ನು ರಷ್ಯಾ-ಉಕ್ರೇನ್ ರಾಷ್ಟ್ರಗಳೇ ಹೊಂದಿವೆ. ಸೂರ್ಯಕಾಂತಿ ಎಣ್ಣೆಯ ಅರ್ಧದಷ್ಟು ಭಾಗ ಉಕ್ರೇನ್‌ನಿಂದ ಇತರ ದೇಶಗಳಿಗೆ ರಫ್ತಾಗುತ್ತದೆ. ಇದರ ಜೊತೆಗೆ, ಅನೇಕ ಆಹಾರ ಉತ್ಪನ್ನಗಳಲ್ಲಿನ ಪ್ರಮುಖ ಪದಾರ್ಥಗಳನ್ನು ರಷ್ಯಾ ಮತ್ತು ಉಕ್ರೇನ್‌ನಿಂದ ರಫ್ತು ಮಾಡಲಾಗುತ್ತದೆ. ಉಭಯ ದೇಶಗಳ ನಡುವಿನ ಉದ್ವಿಗ್ನತೆಯು ವಿಶ್ವದಲ್ಲಿ ಆಹಾರದ ಕೊರತೆಗೆ ಕಾರಣವಾಗಬಹುದು ಎಂದು ತಜ್ಞರು ಹೇಳುತ್ತಾರೆ.
ರಷ್ಯಾ - ಉಕ್ರೇನ್ ಯುದ್ಧದಿಂದ ಅಂತಾರಾಷ್ಟ್ರೀಯ ಸಾರಿಗೆ ವ್ಯವಸ್ಥೆಗೂ ಅಡ್ಡಿಯಾಗಲಿದೆ. ಏಷ್ಯಾದಿಂದ ಯುರೋಪಿಯನ್ ದೇಶಗಳಿಗೆ ರಫ್ತು ಮಾಡುವ ಆಹಾರ ಮತ್ತು ಕಚ್ಚಾ ವಸ್ತುಗಳಂತಹ ಪ್ರಮುಖ ಉತ್ಪನ್ನಗಳಿಗೆ ರಷ್ಯಾ ಮತ್ತು ಉಕ್ರೇನ್ ಮುಖ್ಯ ಸಾರಿಗೆ ಮಾರ್ಗಗಳಾಗಿವೆ. ಇತ್ತೀಚಿನ ಯುದ್ಧದ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಸಾರಿಗೆ ಮಾರ್ಗಗಳನ್ನು ಬದಲಾಯಿಸಬೇಕಾದ ಪರಿಸ್ಥಿತಿ ಉದ್ಭವಿಸಿದೆ. ಈಗಾಗಲೇ ಹಲವಾರು ಹಡಗು ಕಂಪನಿಗಳು ಕಪ್ಪು ಸಮುದ್ರದಾದ್ಯಂತ ಸರಬರಾಜನ್ನು ಸ್ಥಗಿತಗೊಳಿಸುವುದಾಗಿ ಘೋಷಿಸಿವೆ. ಪರ್ಯಾಯ ಮಾರ್ಗಗಳ ಮೂಲಕ ಸರಕುಗಳನ್ನು ಸಾಗಿಸಲು ಮಾರ್ಗಗಳನ್ನು ಹುಡುಕುತ್ತಿದ್ದೇವೆ.
ಹಳೆಯ ಸಾರಿಗೆ ಸರಪಳಿಗೆ ಹೋಲಿಸಿದರೆ ಹೊಸ ಮಾರ್ಗವು ದೂರವಾಗಿರುವುದರಿಂದ ರಫ್ತು ವೆಚ್ಚವು ಭಾರೀ ಪ್ರಮಾಣದಲ್ಲಿ ಹೆಚ್ಚಾಗುತ್ತದೆ. ಪರಿಣಾಮವಾಗಿ, ಹಿಂದಿನದಕ್ಕೆ ಹೋಲಿಸಿದರೆ ಸರಕು ಮತ್ತು ಸೇವೆಗಳ ಬೆಲೆಗಳು ತೀವ್ರವಾಗಿ ಏರುತ್ತವೆ ಎಂದು ಅರ್ಥಶಾಸ್ತ್ರಜ್ಞರು ಊಹಿಸಿದ್ದಾರೆ.
ಏರೋಸ್ಪೇಸ್ ಉದ್ಯಮಕ್ಕೂ ಸಂಕಷ್ಟ: ಉಕ್ರೇನ್-ರಷ್ಯಾ ಯುದ್ಧವು ವಿಶ್ವ ದೇಶಗಳಿಗೆ ಲೋಹಗಳ ರಫ್ತಿನ ಮೇಲೆ ಪ್ರಮುಖ ಪರಿಣಾಮ ಬೀರುತ್ತದೆ. ನಿಕ್ಕಲ್, ತಾಮ್ರ ಮತ್ತು ಕಬ್ಬಿಣದಂತಹ ಲೋಹಗಳ ರಫ್ತುಗಳು ರಷ್ಯಾ ಮತ್ತು ಉಕ್ರೇನ್‌ನಿಂದ ಬರುತ್ತವೆ. ಆದರೆ ಅಮೆರಿಕ, ಯುರೋಪ್ ಹಾಗೂ ಬ್ರಿಟನ್‌ನಲ್ಲಿ ಏರೋಸ್ಪೇಸ್ ಉದ್ಯಮ ರಷ್ಯಾದಿಂದ ಆಮದು ಮಾಡಿಕೊಳ್ಳುವ ಟೈಟಾನಿಯಂ ಅನ್ನು ಹೆಚ್ಚು ಅವಲಂಬಿಸಿದೆ. ಪ್ರಸ್ತುತ ಯುದ್ಧದ ಸಂದರ್ಭದಲ್ಲಿ, ಲೋಹಗಳ ಪೂರೈಕೆಯಲ್ಲಿ ಅಡಚಣೆಯಾಗುವ ಸಾಧ್ಯತೆಯಿದೆ.
ಮೈಕ್ರೋಚಿಪ್‌ಗಳ ಕೊರತೆ ತೀವ್ರ..?: ರಷ್ಯಾ-ಉಕ್ರೇನ್ ಯುದ್ಧದಿಂದಾಗಿ ವಿಶ್ವದ ರಾಷ್ಟ್ರಗಳನ್ನು ಕಾಡುತ್ತಿರುವ ಮೈಕ್ರೋಚಿಪ್‌ಗಳ ಕೊರತೆ ತೀವ್ರಗೊಳ್ಳಲಿದೆ. ಮೈಕ್ರೋಚಿಪ್‌ಗಳಲ್ಲಿ ಬಳಸುವ ಪ್ರಮುಖ ನಿಯಾನ್‌ನ ಶೇ.90ಕ್ಕೂ ಹೆಚ್ಚು ರಷ್ಯಾದಿಂದ ಬರುತ್ತದೆ. ಇತ್ತೀಚಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ನಿಯಾನ್ ರಫ್ತಿನಲ್ಲಿ ಅಡಚಣೆಯಾದರೂ ಆಶ್ಚರ್ಯವಿಲ್ಲ. ಇದು ಮೈಕ್ರೋಚಿಪ್ ತಯಾರಿಕೆಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ.
ಇದನ್ನೂ ಓದಿ: ಉಕ್ರೇನ್ ನಡುವಿನ ಯುದ್ಧದಲ್ಲಿ 450 ರಷ್ಯನ್ ಸೈನಿಕರು ಮೃತ : ಬ್ರಿಟನ್ ಮಾಹಿತಿ