ನವದೆಹಲಿ: ಮುಂದಿನ ತಿಂಗಳು ಬ್ರಿಟನ್ನಲ್ಲಿ ನಡೆಯಲಿರುವ ಜಿ7 ಶೃಂಗಸಭೆಗೆ ಭಾರತ, ಆಸ್ಟ್ರೇಲಿಯಾ, ದಕ್ಷಿಣ ಕೊರಿಯಾ, ದಕ್ಷಿಣ ಆಫ್ರಿಕಾ ಮತ್ತು ಆಗ್ನೇಯ ಏಷ್ಯಾ ರಾಷ್ಟ್ರಗಳ ಸಂಘದ ಪ್ರಧಾನಿ ಕಾರ್ಯದರ್ಶಿಗಳಿಗೆ ಆಹ್ವಾನ ನೀಡಲಾಗಿದೆ.
ಈ ಕುರಿತು ಇಂಗ್ಲೆಂಡ್ನ ಸಂಸತ್ತಿನಲ್ಲಿ ಘೋಷಿಸಿದ ಡೊಮಿನಿಕ್ ರಾಬ್, ವಿದೇಶಾಂಗ ಮತ್ತು ಅಭಿವೃದ್ಧಿ ಸಚಿವರ ಶೃಂಗಸಭೆಯು ಲಂಡನ್ನಲ್ಲಿ ಇದೇ ಮೇ 3ರಿಂದ 5ರ ವರೆಗೆ ನಡೆಸಲು ನಿರ್ಧರಿಸಲಾಗಿದೆ ಎಂದಿದ್ದಾರೆ.
ಅಲ್ಲದೇ, ಮುಂದಿನ ತಿಂಗಳು ನಡೆಯಲಿರುವ ವಿದೇಶಾಂಗ ಮತ್ತು ಅಭಿವೃದ್ಧಿ ಸಚಿವರ ಜಿ-7 ಸಭೆಯು, ವಿಶ್ವದ ಬಹುದೊಡ್ಡ ಪ್ರಜಾಪ್ರಭುತ್ವ ದೇಶಗಳು ಹೇಗೆ ಲಸಿಕೆ ವಿತರಿಸಲು ಒಟ್ಟಾಗಿ ಕಾರ್ಯನಿರ್ವಹಿಸಿವೆ ಎಂಬುದನ್ನು ತೋರಿಸಲು ಒಂದು ಅವಕಾಶವಾಗಿದೆ. ಸಾಂಕ್ರಾಮಿಕ ರೋಗದಿಂದ ಹೇಗೆ ಮೇಲೆದ್ದು ಬಂದಿವೆ, ಬಡ ಹೆಣ್ಣ ಮಕ್ಕಳಿಗೆ ಉತ್ತಮ ಶಿಕ್ಷಣ ದೊರಕಿಸುವಲ್ಲಿ ಆ ರಾಷ್ಟ್ರಗಳ ಕಾರ್ಯ ವೈಖರಿ, ಹಾಗೂ ಹವಾಮಾನ ವೈಪರಿತ್ಯ ತಡೆಯಲು ನಡೆಸುತ್ತಿರುವ ಕ್ರಮದ ಕುರಿತು ಈ ಸಭೆ ಬೆಳಕು ಚೆಲ್ಲಲಿದೆ ಎಂದಿದ್ದಾರೆ.
ಕಳೆದ ವರ್ಷದ ಕೊನೆಯಲ್ಲಿ ಇಂಗ್ಲೆಂಡ್ ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಸಮ್ಮೇಳನ ಸಹ ಆಯೋಜಿಸಿತ್ತು. ಆದರೆ, ಈ ಸಭೆಯಲ್ಲಿ ಕೋವಿಡ್ ಸೋಂಕು ಹಾಗೂ ಹವಾಮಾನ ಬಿಕ್ಕಟ್ಟನ್ನು ನಿಭಾಯಿಸುವ ಕುರಿತ ಚರ್ಚೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ.
ಯುಕೆ ಕಾರ್ನ್‌ವಾಲ್‌ನ ಕಾರ್ಬಿಸ್ ಕೊಲ್ಲಿಯಲ್ಲಿ ಜೂನ್ 11 ರಿಂದ 13ರ ವರೆಗೆ ನಡೆಯಲಿರುವ 47ನೇ ಜಿ-7 ಶೃಂಗಸಭೆಗೆ ಭಾರತವನ್ನು ಆಹ್ವಾನಿಸಲಾಗಿದೆ. ವಿಶೇಷ ಎಂದರೆ 2019 ರಿಂದ ಭಾರತವನ್ನು ನಿಯಮಿತವಾಗಿ ಜಿ-7 ಶೃಂಗಸಭೆಗೆ ಆಹ್ವಾನಿಸಲಾಗಿದೆ, ಮೊದಲು ಫ್ರಾನ್ಸ್, ನಂತರ 2020 ರಲ್ಲಿ ಅಮೆರಿಕ ಮತ್ತು ಈಗ ಇಂಗ್ಲೆಂಡ್ ಭಾರತಕ್ಕೆ ಆಹ್ವಾನ ನೀಡಿದೆ.