ಮಾಸ್ಕೋ( ರಷ್ಯಾ): ಉಕ್ರೇನ್ ಮೇಲೆ ರಷ್ಯಾ ಸಾರಿರುವ ಈ ಯುದ್ಧ ಒಟ್ಟಾರೆ ಅಟ್ಟರ್ ಪ್ಲಾಪ್ ಎಂದು ಅಲ್ಲಿನ ವಿಶಲ್ಬ್ಲೋವರ್ ಹೇಳಿದೆ. ಅಲ್ಲಿನ ಗೂಢಾಚಾರಿಕೆ ವಿಭಾಗವನ್ನು ಪುಟಿನ್ ಕತ್ತಲೆಯಲ್ಲಿ ಇಟ್ಟಿದ್ದಾರೆ ಎಂದು ವಿಶಲ್ಬ್ಲೋವರ್ ಬಣ್ಣಿಸಿದೆ.
ಯುದ್ಧವನ್ನು ಸಂಪೂರ್ಣ ವಿಫಲ ಎಂದಿರುವ ವಿಶಲ್ ಬ್ಲೋವರ್, ಈ ಯುದ್ಧವನ್ನು ನಾಜಿ ಜರ್ಮನಿಯ ಕುಸಿತಕ್ಕೆ ಮಾತ್ರ ಹೋಲಿಸಬಹುದು ಎಂದು ಬಣ್ಣಿಸಿದೆ ಎಂದು ವರದಿಯಾಗಿದೆ. ಕೆಜಿಬಿಯ ಉತ್ತರಾಧಿಕಾರಿ ಏಜೆನ್ಸಿಯಾದ ಎಫ್‌ಎಸ್‌ಬಿಯಲ್ಲಿನ ವಿಶ್ಲೇಷಕರು ಭಾವಿಸಿರುವ ವರದಿಯ ಪ್ರಕಾರ, ಉಕ್ರೇನ್‌ನಲ್ಲಿ ರಷ್ಯಾದ ಸುಮಾರು 10,000 ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಹೇಳಿದೆ. ಆದರೆ ರಷ್ಯಾ ರಕ್ಷಣಾ ಸಚಿವಾಲಯವು ಉಕ್ರೇನ್‌ನಲ್ಲಿ ಕೇವಲ 498 ಸೈನಿಕರು ಮೃತಪಟ್ಟಿದ್ದಾರೆ ಎಂದು ಒಪ್ಪಿಕೊಂಡಿದೆ.
ರಷ್ಯಾ ಸೇನೆಗೆ ಎದುರಾದ ಮೂರು ಅಡ್ಡಿಗಳೇನು?: ರಷ್ಯಾದ ಸೇನೆಯು ಉಕ್ರೇನ್ ಆಕ್ರಮಿಸಿದ ನಂತರ ಮಿಲಿಟರಿ ವಿಶ್ಲೇಷಕರಿಗೆ ಮೂರು ಪ್ರಮುಖ ಆಶ್ಚರ್ಯ ಎದುರಾಗಿದೆ. ಲಾಜಿಸ್ಟಿಕ್ಸ್, ರಷ್ಯಾ ಪಡೆಗಳ ನಡುವಣ ಸಮನ್ವಯತೆ, ನೈತಿಕತೆ ಮತ್ತು ಚಲನಶೀಲತೆಯ ವಿಷಯದಲ್ಲಿ ರಷ್ಯಾ ಸೈನ್ಯವು ಎದುರಿಸುತ್ತಿರುವ ತೊಂದರೆಗಳ ವ್ಯಾಪ್ತಿ ಈಗ ಚರ್ಚಿತ ವಿಷಯವಾಗಿದೆ. ಇದು ಮೊದಲನೇ ಸಮಸ್ಯೆಯಾದರೆ, ಎರಡನೇಯದು ರಷ್ಯಾದ ವಾಯುಪಡೆ ಉಕ್ರೇನಿಯನ್ ವಾಯುಪಡೆ ಧ್ವಂಸ ಮಾಡುವಲ್ಲಿ ಮತ್ತು ಉಕ್ರೇನ್ ಮೇಲೆ ಶ್ರೇಷ್ಠತೆ ಸಾಧಿಸಲು ಸಂಪೂರ್ಣ ವಿಫಲವಾಗಿದೆ. ಉಕ್ರೇನಿಯನ್ ಪಡೆಗಳ ವಿರುದ್ಧ ಸಮರ್ಥ ದಾಳಿ ಮಾಡುವಲ್ಲಿ ಎಡವಿದೆ.
ಇನ್ನು ಮೂರನೇಯದ್ದಾಗಿ ಉಕ್ರೇನಿಯನ್ ಸೇನೆ ತನ್ನ ಅಸಾಧಾರಣ ಏಕತೆ ಹಾಗೂ ಪರಿಣಾಮಕಾರಿ ಪ್ರತಿದಾಳಿಯ ಮೂಲಕ ರಷ್ಯಾ ದಾಳಿಯನ್ನು ತಡೆಗಟ್ಟುವಲ್ಲಿ ಹಾಗೂ ಪ್ರತಿ ಏಟು ಕೊಡುವಲ್ಲಿ ಸಫಲವಾಗಿದೆ. ರಷ್ಯಾ ಸೇನೆಯ ಅಬ್ಬರವನ್ನ ತಡೆಗಟ್ಟುವಲ್ಲಿ ಅಷ್ಟರ ಮಟ್ಟಿಗೆ ಯಶಸ್ವಿಯಾಗಿದೆ ಎಂದು ಹೇಳಲಾಗುತ್ತಿದೆ.
ಉಕ್ರೇನ್‌ನ ಈ ಕೆಚ್ಚೆದೆಯ ಪ್ರತಿರೋಧವೇ ಈಗ ಉಕ್ರೇನ್‌ನ ಉತ್ತರದಲ್ಲಿ ರಷ್ಯಾದ ಮುನ್ನಡೆಯನ್ನು ಗಮನಾರ್ಹವಾಗಿ ನಿಧಾನಗೊಳಿಸಿದೆ. ಇನ್ನು ರಷ್ಯಾ ಉಕ್ರೇನ್‌ಗೆ ಭಾರಿ ಏಟು ನೀಡಿದೆಯಾದರೂ, ತನ್ನ ಪಡೆಗಳ ಪ್ರಮುಖ ಸಿಬ್ಬಂದಿ ಅಪಾರ ಪ್ರಮಾಣ ಯುದ್ದೋಪಕರಣಗಳನ್ನು ಕಳೆದುಕೊಂಡಿದೆ.
ಈ ಅಂಶಗಳೇನೇ ಇರಲಿ ರಷ್ಯಾ ವಿಜಯವನ್ನ ಅಲ್ಲಗಳೆಯಲಾಗುವುದಿಲ್ಲ: ದುರದೃಷ್ಟವಶಾತ್, ಈ ಮೇಲಿನ ಯಾವುದೇ ಅಂಶಗಳು ರಷ್ಯಾ ಮುನ್ನಡೆಯನ್ನ ಹಾಗೂ ಯುದ್ಧ ಗೆಲ್ಲುವುದನ್ನ ತಡೆಯಲಾಗುವುದಿಲ್ಲ. ಆದಾಗ್ಯೂ, ರಷ್ಯಾ ಸೈನ್ಯವು ಉಕ್ರೇನ್‌ಗೆ ಗಡಿಯನ್ನು ದಾಟಿದೆ ಆದರೂ ಅದು ಅತ್ಯಂತ ಕಳಪೆ ಸಮನ್ವಯ ಹೊಂದಿತ್ತು ಎಂಬುದು ಬಹಿರಂಗವಾಗಿದೆ.
ಭೂ ದಳ ಹಾಗೂ ವಾಯುಪಡೆ ನಡುವೆ ಸಮನ್ವಯತೆ ಕೊರತೆ ಎದ್ದು ಕಂಡಿದೆ. ರಷ್ಯಾ ಸೇನೆ, ಪ್ರಮುಖ ಉಕ್ರೇನಿಯನ್ ನಾಯಕರನ್ನು ಹತ್ಯೆ ಮಾಡಲು ಅಥವಾ ಸೆರೆ ಹಿಡಿಯಲು ವಿಶೇಷ ಪಡೆಗಳ ಮೇಲೆ ಅವಲಂಬಿತವಾಗಿದೆ. ಅಷ್ಟೇ ಅಲ್ಲ ಉಕ್ರೇನ್‌ನ ವಿವಿಧ ನಗರಗಳ ಮೇಲೆ ಹಿಡಿತ ಸಾಧಿಸಲು ಮಿಲಿಟರಿ ನುಗ್ಗಿಸುವ ಯತ್ನ ಮಾಡಿದ ರಷ್ಯಾ, ಉಕ್ರೇನ್ ಸರ್ಕಾರದ ಶರಣಾಗತಿಗೆ ಸ್ಕೆಚ್ ಹಾಕಿತ್ತು. ಆದರೆ ರಷ್ಯಾದ ಈ ಯೋಜನೆ ವಿಫಲವಾಗಿದೆ.
ಖಾರ್ಕಿವ್, ಕೀವ್ ಸುತ್ತುವರೆದಿರುವ ರಷ್ಯಾ ಸೇನೆ ಸಂಘಟಿತ ಹೋರಾಟ ಮಾಡುವಲ್ಲಿ ವಿಫಲವಾಗಿದೆ. ಏಕೆಂದರೆ ರಷ್ಯಾದ ಟಾಂಕ್ಗಳು, ಸೇನಾ ದಾಳಿಗೆ ಪ್ರತ್ಯುತ್ತರ ಕೊಡುವಲ್ಲಿ ಉಕ್ರೇನ್ ತನ್ನ ಶಕ್ತಿ ಮೀರಿ ಪ್ರತಿದಾಳಿ ಮಾಡಿದೆ. ರಷ್ಯಾ ಸೈನ್ಯದ ಮೇಲೆ ಉಕ್ರೇನಿಗರು ನಡೆಸಿದ ಪ್ರತಿದಾಳಿಯಲ್ಲಿ ಭಾರಿ ಸಾವು ನೋವುಗಳು ಸಂಭವಿಸಿವೆ. ಅಷ್ಟೇ ಅಲ್ಲ ರಷ್ಯಾ ಸೈನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸಾವನ್ನಪ್ಪಿದ್ದಾರೆ. ಉಕ್ರೇನಿಯನ್ ಕ್ಷಿಪ್ರ ಪಡೆಗಳಿಂದ ತ್ವರಿತ ಪ್ರತಿದಾಳಿ ನಡೆಸಿದ್ದರಿಂದ ರಷ್ಯಾ ಸೇನಾ ಕಾರ್ಯಾಚರಣೆ ವೇಗಕ್ಕೆ ತಡೆಯೊಡ್ಡಿದೆ ಎಂದು ಹೇಳಲಾಗುತ್ತಿದೆ.
ಇದೇನೇ ಇದ್ದರೂ ರಷ್ಯಾ ತನ್ನ ದೈತ್ಯ ಶಕ್ತಿಯಿಂದ ದಾಳಿ ಮುಂದುವರಿಸಿದೆ. ಇಂದು ಮೂರನೇ ಹಂತದ ಮಾತುಕತೆ ನಡೆಯಲಿದೆ. ಆದರೆ, ಉಕ್ರೇನ್‌ನಲ್ಲಿ ಝೆಲೆನ್ಸ್ಕಿ ಸರ್ಕಾರ ಕಿತ್ತೊಗೆದು, ಕೈಗೊಂಬೆ ಸರ್ಕಾರ ನಿರ್ಮಾಣ ಮಾಡುವವರೆಗೂ ರಷ್ಯಾ ದಾಳಿಯಿಂದ ನಿರ್ಗಮಿಸುವಂತೆ ಕಾಣುತ್ತಿಲ್ಲ. ಅತ್ತ ಝಲೆನ್ಸ್ಕಿ ಮಾತ್ರ ಜಪ್ಪಯ್ಯ ಅಂದರೂ ಬಗ್ಗೆದೆ ಪ್ರತಿದಾಳಿ ಮಾಡಿ ರಷ್ಯಾ ಸೇನೆಗೆ ಪ್ರತಿ ಏಟು ಕೊಡ್ತಿದ್ದಾರೆ.