ಸ್ಟಾಕ್ಹೋಮ್(ಸ್ವೀಡನ್): ನಾರ್ಡಿಕ್ ದೇಶ ಸ್ವೀಡನ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಮಹಿಳೆಯೊರ್ವರನ್ನು ಪ್ರಧಾನಿಯಾಗಿ ಆಯ್ಕೆ ಮಾಡಲಾಗಿದೆ. ಅಲ್ಲಿನ ಸಂಸತ್ತು ಅನುಮೋದನೆ ನೀಡಿರುವ ಹಿನ್ನೆಲೆ ಮ್ಯಾಗ್ಡಲೇನಾ ಆಂಡರ್ಸನ್ ಸ್ವೀಡನ್ ಮುಂದಿನ ಪ್ರಧಾನಿಯಾಗಲಿದ್ದಾರೆ.
Magdalena Andersson : ಪ್ರಸ್ತುತ ಹಣಕಾಸು ಸಚಿವರಾಗಿರುವ ಮ್ಯಾಗ್ಡಲೇನಾ ಬುಧವಾರ ನಡೆದ ಮತದಾನದಲ್ಲಿ ಸೋತಿದ್ದಾರೆ. ಆದರೂ ಸ್ವೀಡನ್ ಕಾನೂನಿನ ಅಡಿಯಲ್ಲಿ ಚುನಾಯಿತರಾಗಿದ್ದಾರೆ.
Sweden PM : ಮ್ಯಾಗ್ಡಲೇನಾ ಅವರ ಹೆಸರನ್ನು ಪ್ರಧಾನಿ ಹುದ್ದೆಗೆ ಘೋಷಣೆ ಮಾಡುತ್ತಿದ್ದಂತೆ ಸಂಸತ್ತಿನ ಎಲ್ಲಾ ವಿಭಾಗಗಳ ಪ್ರತಿನಿಧಿಗಳು, ಅಧಿಕಾರಿಗಳು ಎದ್ದು ನಿಂತು ಚಪ್ಪಾಳೆ ತಟ್ಟಿ ಗೌರವ ಸಲ್ಲಿಸಿದ್ದಾರೆ ಎಂದು ಸ್ವೀಡನ್ ದೂರದರ್ಶನ ವರದಿ ಮಾಡಿದೆ.
ಸಂಸತ್‌ನ 349 ಸದಸ್ಯರ ಪೈಕಿ 174 ಮಂದಿ ಆಂಡರ್ಸನ್ ವಿರುದ್ಧ ಮತ ಚಲಾಯಿಸಿದ್ದಾರೆ. ಆದರೆ, 117 ಸಂಸದರ ಬೆಂಬಲ ಘೋಷಿಸಿದರೆ, 57 ಮಂದಿ ಗೈರಾಗಿದ್ದಾರೆ.
ಉಪ್ಸಲಾ ವಿಶ್ವವಿದ್ಯಾನಿಲಯದಲ್ಲಿ ವ್ಯಾಸಂಗ ಮಾಡಿರುವ ಮಾಜಿ ಈಜು ಚಾಂಪಿಯನ್ ಮ್ಯಾಗ್ಡಲೇನಾ 1996ರಲ್ಲಿ ಪ್ರಧಾನ ಮಂತ್ರಿ ಗೋರನ್ ಪರ್ಸನ್ ಅವರ ರಾಜಕೀಯ ಸಲಹೆಗಾರರಾಗಿ ತಮ್ಮ ರಾಜಕೀಯ ವೃತ್ತಿ ಜೀವನವನ್ನು ಪ್ರಾರಂಭಿಸಿದ್ದರು. ಆರಂಭದಿಂದಲೂ ಕಠಿಣ ಸವಾಲುಗಳನ್ನು ಎದುರಿಸಿರುವ ಇವರು ಇದೀಗ ಸ್ವೀಡನ್ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ.