ಮಾಸ್ಕೋ: ರಷ್ಯಾ ಉಕ್ರೇನ್ ಮೇಲೆ ಶಸ್ತ್ರಾಸ್ತ್ರಗಳಿಂದ ಯುದ್ಧ ನಡೆಸುತ್ತಿದೆ. ಇನ್ನೊಂದೆಡೆ, ಇದೇ ವೇಗದಲ್ಲಿ ವಿಶ್ವದ ಹಲವಾರು ರಾಷ್ಟ್ರಗಳು ರಷ್ಯಾವನ್ನು ಕಟ್ಟಿಹಾಕಲು ಆರ್ಥಿಕ ದಿಗ್ಬಂಧನಗಳನ್ನು ಹೇರುತ್ತಿವೆ. ಇದರಿಂದ ರಷ್ಯಾದ ರೂಬಲ್ ಕರೆನ್ಸಿ ಡಾಲರ್ ಮುಂದೆ ಶೇ.30 ರಷ್ಟು ಭಾರಿ ಕುಸಿತ ಕಂಡಿದೆ.
ಯುರೋಪಿಯನ್ ರಾಷ್ಟ್ರಗಳ ಬ್ಯಾಂಕುಗಳನ್ನು ನಿಯಂತ್ರಿಸುವ 'ಸ್ವಿಫ್ಟ್' ರಷ್ಯಾದ ಕರೆನ್ಸಿ ಮತ್ತು ಬ್ಯಾಂಕ್‌ಗಳ ವಹಿವಾಟು ನಿಷೇಧಿಸಿದ ಬಳಿಕ ರೂಬಲ್ ದಾಖಲೆಯ ಪ್ರಮಾಣದಲ್ಲಿ ಇಳಿಕೆ ಕಂಡಿದೆ.
ರೂಬಲ್ ಕರೆನ್ಸಿ ಶೇ.30 ರಷ್ಟು ಕುಸಿತ ಕಂಡಿದ್ದರ ಮಧ್ಯೆಯೂ ಉಕ್ರೇನ್ ಮೇಲೆ ರಷ್ಯಾ ಯುದ್ಧ ಮುಂದುವರಿಸಿದೆ. ಇದರಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆಯೂ ಏರಿಕೆ ಕಾಣುತ್ತಿದ್ದು, ಒಂದು ಬ್ಯಾರಲ್ ಇದೀಗ 100 ಡಾಲರ್ ಆಗಿದೆ.
ಯುರೋಪಿಯನ್ ಯೂನಿಯನ್, ಅಮೆರಿಕ, ಇಂಗ್ಲೆಂಡ್ ಮತ್ತು ಮಿತ್ರರಾಷ್ಟ್ರಗಳು ಸ್ವಿಫ್ಟ್‌ನಿಂದ ರಷ್ಯಾದ ಹಲವಾರು ಬ್ಯಾಂಕ್‌ಗಳ ವಹಿವಾಟನ್ನು ಕಡಿತಗೊಳಿಸಿವೆ. ಅಲ್ಲದೇ, ರಷ್ಯಾದ ಕೇಂದ್ರ ಬ್ಯಾಂಕ್‌ನ ಸ್ವತ್ತುಗಳನ್ನು ಮುಟ್ಟುಗೋಲು ಹಾಕಿಕೊಂಡಿವೆ. ರಷ್ಯಾದ ಸಾಗರೋತ್ತರ ವಹಿವಾಟು ಸಾಮರ್ಥ್ಯಕ್ಕೆ ಕಡಿವಾಣ ಹೇರಿವೆ.
ಇದನ್ನೂ ಓದಿ: 'ಈ ಪರಿಸ್ಥಿತಿ ಯಾವ ಪೋಷಕರಿಗೂ ಬೇಡ..': ವಿಡಿಯೋ ಹಂಚಿಕೊಂಡ ರಾಹುಲ್ ಗಾಂಧಿ