ಕೀವ್: ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ 10ನೇ ದಿನಕ್ಕೆ ಕಾಲಿಟ್ಟಿದೆ. ರಷ್ಯಾದ ಪಡೆಗಳು ಉಕ್ರೇನ್‌ನಲ್ಲಿರುವ ಯುರೋಪಿನ ಅತಿದೊಡ್ಡ ಪರಮಾಣು ಸ್ಥಾವರವನ್ನು ವಶಪಡಿಸಿಕೊಂಡಿವೆ. ಈ ಘಟನೆಯ ನಂತರ, ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಮತ್ತು ಇತರ ದೇಶಗಳ ನಾಯಕರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದ್ದಾರೆ.
ಯುರೋಪಿನ ಅತಿದೊಡ್ಡ ಪರಮಾಣು ಸ್ಥಾವರದಲ್ಲಿ ಬೆಂಕಿಗೆ ಕಾರಣವಾದ ರಷ್ಯಾದ ಶೆಲ್ ದಾಳಿಯು ಹುಚ್ಚುತನದ ಪರಮಾವಧಿ ಎಂದು ನಾರ್ವೆಯ ಪ್ರಧಾನಿ ಜೊನಾಸ್ ಗಹರ್ ಸ್ಟೋರ್ ಪುಟಿನ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ಅಸಮಾಧಾನಗಳ ನಡುವೆಯೇ ಉಕ್ರೇನ್ ಮತ್ತು ರಷ್ಯಾ ನಡುವೆ ಮಧ್ಯಸ್ಥಿಕೆ ವಹಿಸಲು ಟರ್ಕಿ ಹೊಸ ಪ್ರಯತ್ನ ಮಾಡಿದೆ. ವಿಶ್ವಸಂಸ್ಥೆಯ 15 ಸದಸ್ಯರ ಭದ್ರತಾ ಮಂಡಳಿಯು ಈ ಬಗ್ಗೆ ತುರ್ತು ಸಭೆ ನಡೆಸಿತು.
ಭಾರತದಿಂದ ಎಚ್ಚರಿಕೆ: ಪರಮಾಣು ಸೌಲಭ್ಯಗಳನ್ನು ಒಳಗೊಂಡ ಯಾವುದೇ ದುರಂತವು ಜನರ ಆರೋಗ್ಯ ಮತ್ತು ಪರಿಸರದ ಮೇಲೆ ಗಂಭೀರ ಪರಿಣಾಮಗಳನ್ನು ಉಂಟುಮಾಡಬಹುದು ಎಂದು ಭಾರತ ಎಚ್ಚರಿಸಿದೆ. ಉಕ್ರೇನ್‌ನಲ್ಲಿ ಉದ್ಭವಿಸುವ ಮಾನವೀಯ ಬಿಕ್ಕಟ್ಟನ್ನು ಅರ್ಥಮಾಡಿಕೊಳ್ಳಬೇಕು ಎಂದು ವಿಶ್ವಸಂಸ್ಥೆಯಲ್ಲಿ ಭದ್ರತಾ ಮಂಡಳಿಯಲ್ಲಿ ಹೇಳಿದೆ. ಸಾವಿರಾರು ಭಾರತೀಯ ನಾಗರಿಕರು ಅದರಲ್ಲೂ ವಿಶೇಷವಾಗಿ ವಿದ್ಯಾರ್ಥಿಗಳು ಸೇರಿದಂತೆ ಮುಗ್ಧ ನಾಗರಿಕರ ಯುದ್ಧ ಪೀಡಿತ ಉಕ್ರೇನ್‌ನಲ್ಲಿ ಅಪಾಯವನ್ನು ಎದುರಿಸುತ್ತಿರುವುದಾಗಿ ಹೇಳಿದೆ.
ಮಾತುಕತೆ ವಿವರ ನೀಡದ ಪುಟಿನ್ ಸಲಹೆಗಾರ: ಯುದ್ಧದ ಮಧ್ಯೆ, ಉಕ್ರೇನ್ ಮತ್ತು ರಷ್ಯಾದಿಂದ ಸಂಧಾನಕಾರರು ಯುದ್ಧದ ಕುರಿತು ಮೂರನೇ ಸುತ್ತಿನ ಮಾತುಕತೆಯನ್ನು ಶೀಘ್ರದಲ್ಲೇ ನಡೆಸುತ್ತಾರೆ ಎನ್ನಲಾಗಿದೆ. ಗುರುವಾರ ಪೋಲೆಂಡ್ ಗಡಿಯ ಬಳಿಯ ಬೆಲಾರಸ್‌ನಲ್ಲಿ ರಷ್ಯಾದ ನಿಯೋಗದ ಮಾತುಕತೆಗೆ ನೇತೃತ್ವ ವಹಿಸಿದ್ದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಸಲಹೆಗಾರ ವ್ಲಾಡಿಮಿರ್ ಮೆಡಿನ್‌ಸ್ಕಿ, ವಿವರ ನೀಡದೇ ತಮ್ಮ ಕಡೆಯಿಂದ ಪರಸ್ಪರ ಒಪ್ಪಿಗೆ ಪಡೆಯಲಾಗಿದೆ ಎಂದಿದ್ದಾರೆ.
ನಾಗರಿಕರನ್ನು ಸ್ಥಳಾಂತರಿಸಲು ಸುರಕ್ಷಿತ ಕಾರಿಡಾರ್‌ಗಳನ್ನು ನಿರ್ಮಿಸಲು ರಷ್ಯಾ ಮತ್ತು ಉಕ್ರೇನ್ ತಾತ್ಕಾಲಿಕ ಒಪ್ಪಂದಕ್ಕೆ ಬಂದಿವೆ ಎಂದು ಇದೇ ವೇಳೆ ಮೆಡಿನ್‌ಸ್ಕಿ ದೃಢಪಡಿಸಿದ್ದಾರೆ. ಮುಂದಿನ ಸುತ್ತಿನ ಮಾತುಕತೆಗಳು ರಷ್ಯಾ ಮತ್ತು ಉಕ್ರೇನ್ ಸಂಸತ್ತುಗಳು ಅನುಮೋದಿಸಬೇಕಾದ ಒಪ್ಪಂದಗಳಿಗೆ ಕಾರಣವಾಗಬಹುದು ಎಂದು ರಷ್ಯಾದ ಹಿರಿಯ ಸಂಸದ ಲಿಯೊನಿಡ್ ಸ್ಲಟಸ್ಕಿ ಹೇಳಿದ್ದಾರೆ.
ಉಕ್ರೇನ್-ರಷ್ಯಾ ನಡುವೆ ಮಧ್ಯಸ್ಥಿಕೆಗೆ ಟರ್ಕಿ ಹೊಸ ಪ್ರಯತ್ನ: ಮುಂದಿನ ವಾರ ದೇಶದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ರಾಜತಾಂತ್ರಿಕ ಶೃಂಗಸಭೆಯಲ್ಲಿ ರಷ್ಯಾದ ಮತ್ತು ಉಕ್ರೇನಿಯನ್ ಉನ್ನತ ರಾಜತಾಂತ್ರಿಕರ ನಡುವೆ ಮಾತುಕತೆ ನಡೆಸಲು ಬಯಸುತ್ತಿರುವುದಾಗಿ ಟರ್ಕಿ ವಿದೇಶಾಂಗ ಸಚಿವರು ಹೇಳಿದ್ದಾರೆ.
ಮಾರ್ಚ್ 11 ರಿಂದ ಮೆಡಿಟರೇನಿಯನ್ ಕರಾವಳಿ ನಗರದಲ್ಲಿ ನಡೆಯಲಿರುವ ಅಂಟಲ್ಯ ರಾಜತಾಂತ್ರಿಕ ವೇದಿಕೆಯಲ್ಲಿ ರಷ್ಯಾದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ತಮ್ಮ ಉಪಸ್ಥಿತಿಗೆ ಒಪ್ಪಿಗೆ ನೀಡಿದ್ದಾರೆ ಎಂದು ಬ್ರಸೆಲ್ಸ್‌ನಲ್ಲಿ ನಡೆದ ಉತ್ತರ ಅಟ್ಲಾಂಟಿಕ್ ಟ್ರೀಟಿ ಆರ್ಗನೈಸೇಶನ್ (ನ್ಯಾಟೋ) ಸಭೆಯಲ್ಲಿ ಭಾಗವಹಿಸಿದ್ದ ಮೆವ್ಲುಟ್ ಕವುಸೊಗ್ಲು ತಿಳಿಸಿದ್ದಾರೆ.
ಫೆಬ್ರವರಿ 24 ರಿಂದ ಉಕ್ರೇನ್ ಮೇಲೆ ರಷ್ಯಾ ಯುದ್ಧ ಮಾಡುತ್ತಾ ಬಂದಿದೆ. ಕಳೆದೆರಡು ದಿನಗಳಿಂದ ಪರಮಾಣು ಅಣು ಸ್ಥಾವರಗಳನ್ನು ವಶಕ್ಕೆ ಪಡೆಯುವ ಮೂಲಕ ದಾಳಿಯನ್ನು ಮತ್ತಷ್ಟು ತೀವ್ರಗೊಳಿಸಿದೆ.
ಇದನ್ನೂ ಓದಿ: ಉಕ್ರೇನ್ನಿಂದ 11 ಸಾವಿರ ಜನರ ಸ್ಥಳಾಂತರ.. ನವದೆಹಲಿಗೆ ಆಗಮಿಸಿದ 170 ನಾಗರಿಕರ ಹೊತ್ತ ವಿಮಾನ