ಕೀವ್(ಉಕ್ರೇನ್): ಉಕ್ರೇನ್‌ನ ಎರಡನೇ ಅತಿ ದೊಡ್ಡ ನಗರ ಕರ್ಕಿವ್‌ನಲ್ಲಿರುವ ಗ್ಯಾಸ್ ಪೈಪ್‌ಲೈನ್ ಅನ್ನು ರಷ್ಯಾ ಸೇನೆ ಸ್ಫೋಟಿಸಿದೆ ಎಂದು ಉಕ್ರೇನ್ ಅಧ್ಯಕ್ಷರ ಕಚೇರಿ ಅಧಿಕೃತವಾಗಿ ತಿಳಿಸಿದೆ.
ಈ ಸ್ಫೋಟದ ಪರಿಣಾಮ ಆಗಸದಲ್ಲಿ ದೊಡ್ಡ ಅಣಬೆಯಾಕಾರದ ಮೋಡ ಆವರಿಸಿಕೊಂಡಿದೆ. ಇದು ಪರಿಸರಕ್ಕೆ ಅಪಾರ ಪ್ರಮಾಣದಲ್ಲಿ ಹಾನಿ ಉಂಟು ಮಾಡಲಿದೆ ಎಂದು ಸರ್ಕಾರ ತೀವ್ರ ಕಳವಳ ವ್ಯಕ್ತಪಡಿಸಿದೆ.
ಹೀಗಾಗಿ, ನಗರದಲ್ಲಿ ವಾಸಿಸುತ್ತಿರುವ ನಿವಾಸಿಗಳು ಮನೆ ಕಿಟಕಿಗಳನ್ನು ಬಟ್ಟೆಯಲ್ಲಿ ಮುಚ್ಚಬೇಕು. ಜೊತೆಗೆ, ಉತ್ತಮ ಆರೋಗ್ಯ ಕಾಯ್ದುಕೊಳ್ಳಲು ದ್ರವ ಪದಾರ್ಥಗಳನ್ನು ಹೆಚ್ಚು ಸೇವಿಸುವಂತೆ ಸೂಚಿಸಿದೆ.
ಕರ್ಕಿವ್ ನಗರದಲ್ಲಿ ಉಕ್ರೇನ್ ಹಾಗು ರಷ್ಯಾ ಸೇನೆಗಳ ನಡುವೆ ಭಾರಿ ಹೋರಾಟ ನಡೆಯುತ್ತಿದೆ ಎಂದು ತಿಳಿದುಬಂದಿದೆ. ರಷ್ಯಾ ಗಡಿಯಿಂದ ಈ ನಗರ 40 ಕಿಲೋ ಮೀಟರ್ ದೂರದಲ್ಲಿದ್ದು 15 ಲಕ್ಷ ಜನರು ವಾಸಿಸುತ್ತಿದ್ದಾರೆ.
1. ಉಕ್ರೇನ್‌ನಲ್ಲಿ ಕನಿಷ್ಠ 64 ನಾಗರಿಕರ ಸಾವು: ಇಲ್ಲಿಯವರೆಗೆ ನಡೆದ ಸಂಘರ್ಷದಲ್ಲಿ 240 ಮಂದಿ ನಾಗರಿಕರು ಸಾವಿಗೀಡಾಗಿದ್ದಾರೆ. ಆದ್ರೆ ನಿಜವಾದ ಸಾವು-ನೋವಿನ ಪ್ರಮಾಣ ಇದಕ್ಕಿಂತ ಬಹಳಷ್ಟು ಹೆಚ್ಚಿರಬಹುದು ಎಂದು ವಿಶ್ವಸಂಸ್ಥೆ ಅಂದಾಜಿಸಿದೆ. ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವಿಭಾಗದ ಮಾಹಿತಿಯ ಪ್ರಕಾರ, ಬಹುತೇಕ ಈ ಸಾವು ನೋವುಗಳು ಶೆಲ್ಲಿಂಗ್ ಮತ್ತು ಬಾಂಬ್ ದಾಳಿಯಿಂದ ಸಂಭವಿಸಿವೆ.
2. ಅಮೆರಿಕದ ಬಾರ್‌ಗಳಲ್ಲಿ ರಷ್ಯಾದ ವೊಡ್ಕಾ ನಿಷೇಧ: ಅಮೆರಿಕದ ಕೆಲವು ಬಾರ್‌ಗಳು ಮತ್ತು ಮದ್ಯದಂಗಡಿಗಳಲ್ಲಿ ರಷ್ಯಾದ ವೊಡ್ಕಾ ಪೂರೈಕೆ ನಿಷೇಧಿಸಲಾಗಿದ್ದು, ಉಕ್ರೇನ್ ಬ್ರ್ಯಾಂಡ್‌ಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ವಿರೋಧಿಸಿ ಈ ನಿರ್ಧಾರಕ್ಕೆ ಬರಲಾಗಿದೆ.
3. ರಷ್ಯಾದ ಕೇಂದ್ರ ಬ್ಯಾಂಕ್‌ಗೆ ಅಮೆರಿಕ, ಯುರೋಪಿಯನ್ ಯೂನಿಯನ್, ಯುಕೆ ನಿರ್ಬಂಧ: ರಷ್ಯಾದ ಹಣಕಾಸು ವಲಯವನ್ನು ಕಠಿಣ ಆರ್ಥಿಕ ನಿರ್ಬಂಧಗಳ ಮೂಲಕ ಶಿಕ್ಷೆಗೆ ಗುರಿಪಡಿಸಲು ಈ ದೇಶಗಳು ನಿರ್ಧರಿಸಿವೆ. ಇದರ ಭಾಗವಾಗಿ ಜಾಗತಿಕವಾಗಿ ರಷ್ಯಾ ಕೇಂದ್ರ ಬ್ಯಾಂಕ್ ವ್ಯವಹರಿಸದಂತೆ ಅಮೆರಿಕ, ಯುರೋಪಿಯನ್ ಯೂನಿಯನ್ ಮತ್ತು ಯುಕೆ ದೇಶಗಳು ನಿರ್ಬಂಧಗಳನ್ನು ವಿಧಿಸಿವೆ. ಇದೇ ಮೊದಲ ಬಾರಿಗೆ ರಷ್ಯಾ ಕೇಂದ್ರ ಬ್ಯಾಂಕ್‌ಗೆ ಈ ನಿರ್ಬಂಧಗಳನ್ನು ಹೇರಲಾಗಿದೆ.
4. ನಾಲ್ಕು ದೇಶಗಳಿಗೆ ವಿಮಾನ ಹಾರಾಟ ಪ್ರದೇಶ ಬಂದ್ ಮಾಡಿದ ರಷ್ಯಾ: ಲಿತ್ವೇನಿಯಾ, ಎಸ್ಟೋನಿಯಾ ಹಾಗು ಸ್ಲೋವೆನಿಯಾ ಮುಂತಾದ ಯುರೋಪಿಯನ್ ದೇಶಗಳು ತನ್ನ ದೇಶದ ವಿಮಾನ ಹಾರಾಟ ಪ್ರದೇಶ ಬಳಸದಂತೆ ರಷ್ಯಾ ನಿರ್ಬಂಧ ವಿಧಿಸಿದೆ. ಶನಿವಾರವಷ್ಟೇ ರೊಮೇನಿಯಾ, ಬಲ್ಗೇರಿಯಾ ಮತ್ತು ಜೆಕ್ ರಿಪಬ್ಲಿಕ್ ದೇಶಗಳಿಂದ ಆಗಮಿಸುವ ನಾಗರಿಕ ವಿಮಾನಗಳಿಗೆ ರಷ್ಯಾ ತನ್ನ ವಾಯುಪ್ರದೇಶಕ್ಕೆ ಪ್ರವೇಶ ನಿರಾಕರಿಸಿದೆ.
5. ರಷ್ಯಾದಲ್ಲಿ ಹೆಚ್ಚುತ್ತಿರುವ ಯುದ್ಧ ವಿರೋಧಿ ನಿಲುವು: ರಷ್ಯಾ ಸೇನೆ ಯುಕ್ರೇನ್ ಒಳಗೆ ರಣೋತ್ಸಾಹದಲ್ಲಿ ಮುನ್ನುಗ್ಗುತ್ತಿರುವಂತೆ ಅತ್ತ ರಷ್ಯಾದಲ್ಲೇ ನಾಗರಿಕರು, ಅಲ್ಲಿನ ಸರ್ಕಾರಿ ವಲಯ, ಸಾವಿರಾರು ವೈದ್ಯಕೀಯ ಸಿಬ್ಬಂದಿ, ಶಿಕ್ಷಕರು, ಎಂಜಿನಿಯರುಗಳು, ವಾಸ್ತುಶಿಲ್ಪಿಗಳಲ್ಲಿ ಯುದ್ಧ ವಿರೋಧಿ ಭಾವನೆ ಹೆಚ್ಚುತ್ತಿದೆ. ಈ ನಿಟ್ಟಿನಲ್ಲಿ ದೇಶದ ವಿವಿಧೆಡೆ ಅಧ್ಯಕ್ಷ ಪುಟಿನ್ ವಿರುದ್ಧ ಸಾಕಷ್ಟು ಪ್ರತಿಭಟನೆಗಳು ನಡೆದಿವೆ. ಆದರೆ, ಪ್ರತಿಭಟನಾಕಾರರನ್ನು ಬಂಧಿಸುವ ಮೂಲಕ ರಷ್ಯಾ ಸರ್ಕಾರ ಕಟು ನಿಲುವು ತಳೆದಿದೆ.
6. ರಷ್ಯಾದ ವಿಮಾನಗಳಿಗೆ ವಾಯು ಪ್ರದೇಶ ಬಂದ್ ಮಾಡಿದ ಜರ್ಮನಿ: ನಾವು ರಷ್ಯಾ ವಿಮಾನಗಳಿಗೆ ದೇಶದ ವಾಯು ಪ್ರದೇಶ ಪ್ರವೇಶಿಸಲು ಅನುಮತಿ ನೀಡುವುದಿಲ್ಲ ಎಂದು ಜರ್ಮನಿ ಪ್ರಕಟಿಸಿದೆ.
7. ಉಕ್ರೇನ್‌ಗೆ ಶಸ್ತ್ರಾಸ್ತ್ರ ಪೂರೈಕೆಗೆ ಮುಂದಾದ ಜರ್ಮನಿ: ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಎಂಬಂತೆ ಜರ್ಮನಿ, ಉಕ್ರೇನ್ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಪೂರೈಸಲು ಮುಂದಾಗಿದೆ. 1000 ಯುದ್ಧ ಟ್ಯಾಂಕ್ ನಿರೋಧಕ ಶಸ್ತ್ರಾಸ್ತ್ರಗಳು, 500 ಸ್ಟಿಂಜರ್ ಹಾಗು ಭೂಮಿಯಿಂದ ಆಗಸಕ್ಕೆ ಚಿಮ್ಮಿ ದಾಳಿ ಮಾಡಬಲ್ಲ ಕ್ಷಿಪಣಿಗಳನ್ನು ಉಕ್ರೇನ್‌ಗೆ ಪೂರೈಕೆ ಮಾಡುವುದಾಗಿ ಜರ್ಮನಿ ಘೋಷಿಸಿದೆ.
ಇದನ್ನೂ ಓದಿ: ಆಪರೇಷನ್ ಗಂಗಾ: ಇಂದು ಮುಂಜಾನೆ ಉಕ್ರೇನ್‌ನಿಂದ ತವರಿಗೆ ಮರಳಿದ 250 ಭಾರತೀಯರು