ವ್ಯಾಟಿಕನ್ ಸಿಟಿ: ಮುಂದಿನ ವಾರದಿಂದ ವ್ಯಾಟಿಕನ್ ಸಿಟಿಯಲ್ಲಿ ಕೋವಿಡ್ -19 ಲಸಿಕೆ ನೀಡುವುದನ್ನು ಪ್ರಾರಂಭಿಸಲಾಗುತ್ತದೆ ಎಂದು ಪೋಪ್ ಫ್ರಾನ್ಸಿಸ್ ತಿಳಿಸಿದ್ದಾರೆ.
ಇಟಲಿಯ ಚಾನೆಲ್ವೊಂದರಲ್ಲಿ ನೀಡಿದ ಸಂದರ್ಶನದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡ ಪೋಪ್ ಫ್ರಾನ್ಸಿಸ್, ಲಸಿಕೆ ತೆಗೆದುಕೊಳ್ಳುವುದು ನೈತಿಕ ಕರ್ತವ್ಯ. ಮುಂದಿನ ವಾರದಿಂದ ವ್ಯಾಟಿಕನ್‌ನಲ್ಲಿ ನಾವು ಲಸಿಕೆ ನೀಡಲು ಪ್ರಾರಂಭಿಸುತ್ತೇವೆ. ಲಸಿಕೆ ತೆಗೆದುಕೊಳ್ಳುವವರ ಸಾಲಿನಲ್ಲಿ ನಾನು ಕೂಡ ಇದ್ದೇನೆ ಎಂದು ತಿಳಿಸಿದರು.
ಇದೇ ವೇಳೆ ಗರ್ಭಪಾತ ಪ್ರಕರಣಗಳು ಹೆಚ್ಚುತ್ತಿರುವುದಕ್ಕೆ ಕಳವಳ ವ್ಯಕ್ತಪಡಿಸಿದ ಅವರು, ಗರ್ಭಪಾತವಾಗಿರುವ ಭ್ರೂಣದಿಂದ ಕೊರೊನಾ ವೈರಸ್ಗೆ ಲಸಿಕೆಯನ್ನು ತಯಾರಿಸುತ್ತಿರುವುದು ಸ್ವೀಕಾರಾರ್ಹ. ಕ್ಯಾಥೊಲಿಕ್ ಬಿಷಪ್‌ಗಳ ಸಮಿತಿಯು (ಯುಎಸ್‌ಸಿಸಿಬಿ) ಇದಕ್ಕೆ ಅನುಮತಿ ನೀಡಿದ್ದು, ಇದೀಗ ಎಲ್ಲರೂ ಇದರ ಚಿಕಿತ್ಸೆ ಪಡೆಯಬಹುದು ಎಂದು ಹೇಳಿದರು.
ಇನ್ನು ಈಗಾಗಲೇ ರಾಣಿ ಎಲಿಜಬೆತ್ II ಮತ್ತು ಡ್ಯೂಕ್ ಆಫ್ ಎಡಿನ್‌ಬರ್ಗ್, ಪ್ರಿನ್ಸ್ ಫಿಲಿಪ್ ಕೋವಿಡ್-19 ಲಸಿಕೆಯನ್ನು ಪಡೆದಿದ್ದಾರೆ ಎಂದು ಬಕಿಂಗ್ಹ್ಯಾಮ್ ಅರಮನೆ ನಿನ್ನೆ ತಿಳಿಸಿದೆ.