ನ್ಯೂಯಾರ್ಕ್: ಪುಟ್ಟ ರಾಷ್ಟ್ರ ಉಕ್ರೇನ್ ಮೇಲೆ ತನ್ನ ಪ್ರತಾಪ ತೋರುತ್ತಿರುವ ಬಲಿಷ್ಠ ರಷ್ಯಾಗೆ ನಿರ್ಬಂಧಗಳು ಮತ್ತಷ್ಟು ವಿಸ್ತರಣೆಯಾಗುತ್ತಲೇ ಇದ್ದು, ಇದೀಗ ತಂಪು ಪಾನೀಯಗಳ ಸರದಿಯಾಗಿದೆ. ಪೆಪ್ಸಿ- ಕೋಲಾ ಇತರ ಜಾಗತಿಕ ಪಾನೀಯ ಬ್ರ್ಯಾಂಡ್‌ಗಳ ಉತ್ಪಾದನೆ ಮತ್ತು ಮಾರಾಟವನ್ನು ರಷ್ಯಾದಲ್ಲಿ ರದ್ದು ಮಾಡುತ್ತಿರುವುದಾಗಿ ಪೆಪ್ಸಿಕೋ ಕಂಪನಿ ಘೋಷಿಸಿದೆ.
ಉಕ್ರೇನ್‌ನಲ್ಲಿ ನಡೆಯುತ್ತಿರುವ ಭಯಾನಕ ಘಟನೆಗಳನ್ನು ಗಮನಿಸಿ ಪೆಪ್ಸಿ - ಕೋಲಾ, 7Up, ಮಿರಿಂಡಾ ಸೇರಿದಂತೆ ರಷ್ಯಾದಲ್ಲಿ ನಮ್ಮ ಜಾಗತಿಕ ಪಾನೀಯ ಬ್ರ್ಯಾಂಡ್‌ಗಳ ಮಾರಾಟವನ್ನು ಸ್ಥಗಿತಗೊಳಿಸುವುದಾಗಿ ಘೋಷಿಸುತ್ತಿದ್ದೇವೆ.
ಬಂಡವಾಳ ಹೂಡಿಕೆಗಳು ಮತ್ತು ರಷ್ಯಾದಲ್ಲಿ ಎಲ್ಲ ಜಾಹೀರಾತು ಮತ್ತು ಪ್ರಚಾರ ಚಟುವಟಿಕೆಗಳನ್ನು ಸಹ ಸ್ಥಗಿತಗೊಳಿಸುತ್ತೇವೆ ಎಂದು ಪೆಪ್ಸಿಕೋ ಸಿಇಒ ರಾಮನ್ ಲಾಗ್ವಾರ್ಟಾ ಮಂಗಳವಾರ ಉದ್ಯೋಗಿಗಳಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. ಆದರೆ ಕಂಪನಿಯ ಎಲ್ಲ ಉತ್ಪನ್ನಗಳ ಮಾರಾಟವನ್ನು ನಿಲ್ಲಿಸಲಾಗುವುದಿಲ್ಲ ಎಂದು ಹೇಳಿದ್ದಾರೆ.
ಆಹಾರ ಮತ್ತು ಪಾನೀಯ ಕಂಪನಿಯಾಗಿ ಈಗ ಎಂದಿಗಿಂತಲೂ ಹೆಚ್ಚಾಗಿ ನಾವು ನಮ್ಮ ವ್ಯವಹಾರದ ಮಾನವೀಯ ಅಂಶಕ್ಕೆ ಬದ್ಧರಾಗಿರಬೇಕು. ಅಂದರೆ ಹಾಲು ಮತ್ತು ಇತರ ಡೈರಿ ಉತ್ಪನ್ನಗಳು, ಬೇಬಿ ಫಾರ್ಮುಲಾ, ಮಗುವಿನ ಆಹಾರದಂತಹ ದೈನಂದಿನ ಅಗತ್ಯತೆಗಳನ್ನು ಒಳಗೊಂಡ ನಮ್ಮ ಇತರ ಉತ್ಪನ್ನಗಳನ್ನು ರಷ್ಯಾದಲ್ಲಿ ಮಾರಾಟ ಮುಂದುವರಿಸುವ ಜವಾಬ್ದಾರಿಯನ್ನು ನಾವು ಹೊಂದಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.
ಕ್ರಾಫ್ಟ್ ಹೈಂಜ್, ಕೆಲ್ಲಾಗ್ಸ್, ಕೋಕಾ-ಕೋಲಾ, ಸ್ಟಾರ್‌ಬಕ್ಸ್ ಹಾಗೂ ಮೆಕ್‌ಡೊನಾಲ್ಡ್ ಈಗಾಗಲೇ ರಷ್ಯಾದಲ್ಲಿ ತಮ್ಮ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿವೆ. ನಿನ್ನೆ ಅಮೆರಿಕ ತೈಲ, ಅನಿಲ ಖರೀದಿ ಸ್ಥಗಿತದ ಘೋಷಣೆ ಮಾಡಿತ್ತು. ಅಂತಾರಾಷ್ಟ್ರೀಯ ತೈಲ ದೈತ್ಯ ಸಂಸ್ಥೆ ಶೆಲ್ ಕೂಡ ರಷ್ಯಾದಿಂದ ತೈಲ, ನೈಸರ್ಗಿಕ ಅನಿಲ ಖರೀದಿಸುವುದಿಲ್ಲ ಎಂದು ಹೇಳಿತ್ತು.
ಇದನ್ನೂ ಓದಿ: ಆರ್ಥಿಕ ನಿರ್ಬಂಧ ಬಳಿಕ ಮತ್ತೊಂದು ಶಾಕ್; ರಷ್ಯಾದಿಂದ ತೈಲ, ಅನಿಲ ಆಮದಿಗೆ ಅಮೆರಿಕ ನಿಷೇಧ