ಪ್ಯಾರೀಸ್: ಜಗತ್ಪ್ರಸಿದ್ಧ ಐಫೆಲ್ ಟವರ್‌ಗೆ ಬಾಂಬ್ ಬೆದರಿಕೆ ಕರೆ ಬಂದಿರುವ ಘಟನೆ ವರದಿಯಾಗಿದೆ. ಅಪರಿಚಿತ ವ್ಯಕ್ತಿಯೊರ್ವ ಕರೆ ಮಾಡಿ ಐಫೆಲ್ ಟವರ್ ಕೆಳಗಡೆ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಕರೆ ಹಾಕಿದ್ದಾನೆ. ಕೂಡಲೇ ಎಚ್ಚೆತ್ತ ಪ್ಯಾರೀಸ್ ಪೊಲೀಸರು ಸ್ಥಳದಲ್ಲಿದ್ದ ಪ್ರವಾಸಿಗರನ್ನು ಬೇರೆಡೆಗೆ ಸ್ಥಳಾಂತರಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.
ಟವರ್ ಕೆಳ ಭಾಗದ ರಸ್ತೆಯನ್ನು ಬಂದ್ ಮಾಡಿರುವ ಪೊಲೀಸರು, ಸೀನ್ ನದಿಯಿಂದ ಟ್ರೊಕಾಡೆರೊ ಪ್ಲಾಜಾದ ಸಂಚಾರವನ್ನು ಸ್ಥಗಿತಗೊಳಿಸಿದ್ದಾರೆ. ಸ್ಥಳದಲ್ಲಿ ಯಾವುದೇ ಸ್ಫೋಟಕ ಇಲ್ಲದಿರುವುದು ಸ್ಪಷ್ಟವಾಗಿದೆ. 2 ಗಂಟೆಗಳ ಬಳಿಕ ಅಲ್ಲಿದ್ದ ಎಲ್ಲಾ ಬ್ಯಾರಿಕೇಡ್‌ಗಳನ್ನು ತೆರವು ಮಾಡಲಾಗಿದೆ ಎಂದು ಪೊಲೀಸ್ ಮೂಲಗಳು ಹೇಳಿವೆ.
131 ವರ್ಷಗಳ ಹಳೆಯದಾಗಿರುವ ಐಫೆಲ್ ಟವರ್ ಸಾಮಾನ್ಯ ವರ್ಷಗಳಲ್ಲಿ ಪ್ರತಿನಿತ್ಯ 25 ಸಾವಿರದ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಆದರೆ ಕೊರೊನಾ ವೈರಸ್ ನಿಂದಾಗಿ ಈ ವರ್ಷ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯವಾಗಿ ಇಳಿಕೆಯಾಗಿದೆ. ಆತ್ಮಹತ್ಯೆ ಬೆದರಿಕೆ, ಬಾಂಬ್ ಬೆದರಿಕೆ ಹಾಗೂ ಕಾರ್ಮಿಕರ ಪ್ರತಿಭಟನೆಗಳನ್ನು ಹೊರತುಪಡಿಸಿದರೆ ಉಳಿದ ದಿನಗಳಲ್ಲಿ ಪ್ರವಾಸಿಗರಿಗೆ ಮುಕ್ತವಾಗಿದೆ.