ಒಟ್ಟಾವಾ (ಕೆನಡಾ): ಬೇರೆ ದೇಶಗಳಿಗೆ ಹೋಲಿಸಿದರೆ ಯುರೋಪ್ನ ರಾಷ್ಟ್ರಗಳಲ್ಲಿನ ಸಮಾಜದಲ್ಲಿ ಉದಾರವಾದ ಹೆಚ್ಚಿದೆ. ಯುರೋಪ್ನ ಈ 'ಅಲ್ಟ್ರಾ-ಲಿಬರಲ್ ವ್ಯವಸ್ಥೆ'ಯನ್ನು ಬಳಸಿಕೊಂಡು ಖಲಿಸ್ತಾನಿ ಪ್ರತ್ಯೇಕತಾವಾದಿ ಚಳವಳಿಯನ್ನು ಮತ್ತಷ್ಟು ಉತ್ತೇಜಿಸಲು ಪಾಕಿಸ್ತಾನವು ಮುಂದಾಗಿದೆ.
1970 ರ ದಶಕದಲ್ಲಿ ಬರ್ಮಿಂಗ್ ಹ್ಯಾಮ್ನಲ್ಲಿ ಮೊದಲ ಬಾರಿ ಖಲಿಸ್ತಾನಿ ಧ್ವಜವನ್ನು ಹಾರಿಸಲಾಗಿತ್ತು. ಬಳಿಕ ಇದು ಯುರೋಪ್ನ ಪ್ರತ್ಯೇಕತಾವಾದಿ ಚಳವಳಿಯ ಕೇಂದ್ರವಾಯಿತು. ಸಿಖ್ರು ತಮಗಾಗಿ ಪ್ರತ್ಯೇಕ ರಾಜ್ಯ-ರಾಷ್ಟ್ರ ಬೇಕೆಂದು ಸರ್ಕಾರಗಳ ವಿರುದ್ಧ ಪ್ರತಿಭಟಿಸಲು ಕ್ರಾಂತಿಯ ಬೀಜಗಳನ್ನು ಬಿತ್ತುವ ಕೆಲಸವನ್ನು ಖಲಿಸ್ತಾನ್ ಸಂಘಟನೆ ಮಾಡುತ್ತಾ ಬಂದಿದೆ.
ಪಾಕಿಸ್ತಾನದ ಗುಪ್ತಚರ ಸಂಸ್ಥೆಯಾದ ಐಎಸ್‌ಐ (ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್) ಪ್ರತ್ಯೇಕತಾವಾದಿ ಚಳವಳಿಗೆ, ವಿಶೇಷವಾಗಿ ಸಿಖ್ ಸಮುದಾಯದ ಜನರಲ್ಲಿ ಪ್ರತ್ಯೇಕತಾವಾದ ಬೆಳೆಸಲು ಪ್ರೋತ್ಸಾಹ ಹಾಗೂ ಧನಸಹಾಯ ನೀಡುತ್ತಾ ಬಂದಿದೆ ಎಂದು ಕೆನಡಾದ ಮೆಕ್ ಡೊನಾಲ್ಡ್-ಲೌರಿಯರ್ ಸಂಸ್ಥೆಯ 'ಖಲಿಸ್ತಾನ್: ಪಾಕಿಸ್ತಾನದ ಯೋಜನೆ' ಎಂಬ ಶೀರ್ಷಿಕೆಯ ವರದಿ ಹೇಳುತ್ತದೆ.
ಇದನ್ನೂ ಓದಿ: ಯುಎಸ್ನಲ್ಲಿ ಮಹಾತ್ಮ ಗಾಂಧಿ ಪ್ರತಿಮೆ ವಿರೂಪ : ಭಾರತದಿಂದ ಖಂಡನೆ
ಯುರೋಪಿನ ಪ್ರಮುಖ ಭಾಗಗಳಲ್ಲಿ ಭಾರತ ವಿರೋಧಿ ಪ್ರತಿಭಟನೆಗಳನ್ನು ಸೃಷ್ಟಿಸಲು ಪಾಕಿಸ್ತಾನವು ಖಲಿಸ್ತಾನಿ ಪ್ರತ್ಯೇಕತಾವಾದಿ ಸಂಘಟನೆಗಳನ್ನು ಉತ್ತೇಜಿಸುತ್ತಿದೆ. ಜುಲೈನಲ್ಲಿ ಕೇಂದ್ರ ಗೃಹ ಸಚಿವಾಲಯವು ಖಲಿಸ್ತಾನಿ ಭಯೋತ್ಪಾದಕರು ಎಂದು ಗೊತ್ತುಪಡಿಸಿದ ಒಂಬತ್ತು ವ್ಯಕ್ತಿಗಳ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಈ ಲಿಸ್ಟ್ನಲ್ಲಿ ಭಾರತದ ಮೂವರ ಹೆಸರೂ ಇತ್ತು. ಭಾರತದಲ್ಲಿ ಅನೇಕ ಕಡೆಗಳಲ್ಲಿ ಖಲಿಸ್ತಾನ್ ಪರ ಘೋಷಣೆಗಳು ಇದೀಗ ಹೆಚ್ಚಾಗಿ ಕೇಳಿಬರುತ್ತಿವೆ. ಕಾಶ್ಮೀರ ಮತ್ತು ಭಾರತದ ಇತರೆಡೆಗಳಲ್ಲಿ ಭಯೋತ್ಪಾದನಾ ಚಟುವಟಿಕೆಗಳನ್ನು ನಡೆಸುತ್ತಾ ಅಶಾಂತಿಯ ಅಲೆಯನ್ನು ಬೀಸುತ್ತಿದೆ ಖಲಿಸ್ತಾನ್ ಸಂಘಟನೆ.
ಭಾರತದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸುವ ಹಿನ್ನೆಲೆ ಸಿಖ್-ಅಮೆರಿಕನ್ ಯುವಕರು ಆಯೋಜಿಸಿದ್ದ ಪ್ರತಿಭಟನೆ ವೇಳೆ ಖಲಿಸ್ತಾನಿ ಸದಸ್ಯರು ಅಮೆರಿಕದ ಭಾರತೀಯ ರಾಯಭಾರ ಕಚೇರಿಯ ಮುಂಭಾಗದಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆ ವಿರೂಪಗೊಳಿಸಿದ್ದಾರೆ. ಪ್ರತಿಭಟನಾಕಾರರ ಈ ವರ್ತನೆಯನ್ನು ಭಾರತೀಯ ರಾಯಭಾರಿ ಅಧಿಕಾರಿಗಳು ಖಂಡಿಸಿದ್ದು, ಘಟನೆ ಕುರಿತು ಅಮೆರಿಕದ ಕಾನೂನು ಜಾರಿ ಏಜೆನ್ಸಿಯಲ್ಲಿ ದೂರು ದಾಖಲಿಸಲಾಗಿದೆ.