ಬರ್ಲಿನ್( ಜರ್ಮನಿ): ಪಶ್ಚಿಮ ಜರ್ಮನಿಯಲ್ಲಿ ಭಾರಿ ಮಳೆ ಮತ್ತು ಪ್ರವಾಹಕ್ಕೆ ಸಿಲುಕಿ 60ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, 100 ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.
ವರುಣನ ಆರ್ಭಟ ಹೆಚ್ಚಾಗಿದ್ದರಿಂದ ಇದ್ದಕ್ಕಿದ್ದಂತೆ ಭಾರಿ ಪ್ರವಾಹ ಉಂಟಾಗಿದೆ. ಅನೇಕ ಮನೆಗಳ ಸುತ್ತ ನೀರು ಆವರಿಸಿದ್ದರಿಂದ ಜನರು ಪರದಾಡುವಂತಾಗಿತ್ತು. ಪ್ರವಾಹದ ಮಟ್ಟ ಏರಿಕೆಯಾಗಿದ್ದರಿಂದ ಅನೇಕರು ನೀರಿನಲ್ಲಿ ಕೊಚ್ಚಿಹೋಗಿದ್ದಾರೆ. ಜೊತೆಗೆ ಬೆಲ್ಜಿಯಂನಲ್ಲಿ ಬಿರುಗಾಳಿ ಮತ್ತು ಪ್ರವಾಹಕ್ಕೆ ಸಿಲುಕಿ 11 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಇನ್ನು ಜರ್ಮನಿಯ ಅಹ್ರ್ವೀಲರ್ ಜಿಲ್ಲೆ ಕೂಡ ಹೆಚ್ಚು ಹಾನಿಗೊಳಗಾದ ಪ್ರದೇಶಗಳಲ್ಲಿ ಒಂದಾಗಿದ್ದು, ಅಹ್ರ್ವೀಲರ್ ಜಿಲ್ಲೆಯಲ್ಲಿ 18 ಜನರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಎಡಬಿಡದೇ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಸಂತ್ರಸ್ತರೊಂದಿಗೆ ಸಂವಹನ ನಡೆಸುವುದಕ್ಕೆ ಸಹ ಅಡ್ಡಿಯಾಗುತ್ತಿದೆ. ಈಗಾಗಲೇ ನೂರಾರು ಅಗ್ನಿಶಾಮಕ ದಳ, ಸೈನಿಕರು ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದಾರೆ. ಸ್ವಿಜರ್ಲ್ಯಾಂಡ್, ಲಕ್ಸೆಂಬರ್ಗ್, ನೆದರ್ಲ್ಯಾಂಡ್ಸ್ ನಲ್ಲಿ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಇನ್ನೂ ಕೆಲವು ಪ್ರದೇಶಗಳಲ್ಲಿ ಅನೇಕ ಮನೆಗಳು ಕುಸಿಯುವ ಭೀತಿಯಲ್ಲಿದ್ದು, ಇನ್ನು ಕೆಲ ಪ್ರದೇಶಗಳ ಪರಿಸ್ಥಿತಿ ಅತ್ಯಂತ ಶೋಚನೀಯವಾಗಿದೆ.