ಯಾಂಗೊನ್ (ಮ್ಯಾನ್ಮಾರ್): ಇತ್ತೀಚೆಗೆ ನಡೆದ ಮ್ಯಾನ್ಮಾರ್ ಸಾರ್ವತ್ರಿಕ ಚುನಾವಣೆಯಲ್ಲಿ ಆಡಳಿತಾರೂಢ ನ್ಯಾಷನಲ್ ಲೀಗ್ ಫಾರ್ ಡೆಮಾಕ್ರಸಿ ಪಕ್ಷ (ಎನ್‌ಎಲ್‌ಡಿ) ಭರ್ಜರಿ ಗೆಲುವು ಸಾಧಿಸಿದ್ದು ಕೇಂದ್ರ ಚುನಾವಣಾ ಆಯೋಗ ಅಧಿಕೃತವಾಗಿ ಫಲಿತಾಂಶ ಪ್ರಕಟಿಸಿದ ನಂತರ ಇದೇ ಮೊದಲ ಬಾರಿಗೆ ಪಕ್ಷದ ನಾಯಕಿ ಆಂಗ್ ಸಾನ್ ಸೂಕಿ ಮಾಧ್ಯಮದ ಮುಂದೆ ಬಂದು ಹೇಳಿಕೆ ನೀಡಿದ್ದಾರೆ.
ಮತ್ತೆ ಆಡಳಿತಕ್ಕೆ ಕರೆ ತಂದಿರುವ ದೇಶದ ಜನರನ್ನುದ್ದೇಶಿಸಿ ಮಾತನಾಡಿದ ಆಂಗ್ ಸಾನ್ ಸೂಕಿ, ಚುನಾವಣೆಗೂ ಮುನ್ನ ಪಕ್ಷ ಘೋಷಿಸಿದ್ದ ಭರವಸೆಗಳನ್ನು ಈಡೇಸುತ್ತದೆ ಎಂದು ಪ್ರತಿಜ್ಞೆ ಮಾಡಿದ್ದಾರೆ. ದೇಶದ ಜನರ ಅಭಿವೃದ್ಧಿಗಾಗಿ ಚುನಾವಣಾ ಪ್ರಣಾಳಿಕೆಯಲ್ಲಿ ಉಲ್ಲೇಖಿಸಿರುವ ಜನಾಂಗೀಯ ಸಂಘರ್ಷ ಸೇರಿದಂತೆ ತಮ್ಮ ಮೂರು ಗುರಿಗಳನ್ನು ಕಾರ್ಯಗತಗೊಳಿಸುವುದಾಗಿ ಸಾರ್ವಜನಿಕರ ಭಾಷಣದಲ್ಲಿ ಸೂಕಿ ಭರವಸೆ ನೀಡಿರುವುದಾಗಿ ಪಕ್ಷ ಹೇಳಿದೆ.
1990ರ ಸಾರ್ವತ್ರಿಕ ಚುನಾವಣೆಯಿಂದ ಹಿಡಿದು ಇಲ್ಲಿಯವರೆಗೆ ಅಂದರೆ 30 ವರ್ಷಗಳ ಕಾಲ ಪಕ್ಷವು ಸಾರ್ವಜನಿಕ ಬೆಂಬಲವನ್ನು ಸಾಧಿಸುವಲ್ಲಿ ಯಶಸ್ವಿಯಾಗಿದ್ದು ಪಕ್ಷದ ಬೆಂಬಲಕ್ಕೆ ನಿಂತ ಸಾರ್ವಜನಿಕರ ನಂಬಿಕೆಯೇ ಇದಕ್ಕೆ ಸಾಕ್ಷಿ ಎಂದಿದ್ದಾರೆ. 2011ರಲ್ಲಿ ರಾಷ್ಟ್ರವು ಸಂಪೂರ್ಣ ಮಿಲಿಟರಿ ಆಡಳಿತದಿಂದ ಹೊರಹೊಮ್ಮಿದ ನಂತರದ ಇದು ಎರಡನೆಯ ಮತದಾನವಾಗಿದ್ದು ಎನ್‌ಎಲ್‌ಡಿ ಮತ್ತೆ ಮರು ಆಯ್ಕೆ ಆಗಿದೆ.
ಈ ವರ್ಷದ ಸಾರ್ವತ್ರಿಕ ಚುನಾವಣೆಯಲ್ಲಿ ಬಹುಮತ ಗಳಿಸುವ ಮೂಲಕ ಎನ್‌ಎಲ್‌ಡಿ ಪಕ್ಷವು ಭರ್ಜರಿ ಜಯ ಸಾಧಿಸಿದೆ. ಕೇಂದ್ರ ಚುನಾವಣಾ ಆಯೋಗ ಭಾನುವಾರ ಪ್ರಕಟಿಸಿದ ಫಲಿತಾಂಶದ ಪ್ರಕಾರ, ಚುನಾವಣೆಯಲ್ಲಿ ಸ್ಪರ್ಧಿಸಿದ್ದ 1,117 ಸಂಸತ್ ಸ್ಥಾನಗಳಲ್ಲಿ ಎನ್‌ಎಲ್‌ಡಿ ಪಕ್ಷ 920 ಸ್ಥಾನಗಳನ್ನು ಪಡೆದುಕೊಂಡಿದೆ.