ನವದೆಹಲಿ: ಬೆಲಾರಸ್ ನೇತೃತ್ವದಲ್ಲಿ ಪೋಲೆಂಡ್ ಹಾಗೂ ಬೆಲಾರಸ್ ಗಡಿ ಪ್ರದೇಶದಲ್ಲಿ ನಡೆಯುತ್ತಿರುವ ಮಾತುಕತೆ ಅಂತಿಮ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗದಿದ್ದರೂ ಮಾಸ್ಕೋ ಮತ್ತು ಕೀವ್ ಕದನ ವಿರಾಮ ಮಾತುಕತೆಯ ಸಮಯದಲ್ಲಿ ಒಪ್ಪಿಕೊಳ್ಳಬಹುದಾದ ಕೆಲವು ಅಂಶಗಳನ್ನು ಕಂಡುಕೊಂಡಿವೆ ಎಂದು ವರದಿಯಾಗಿದೆ. ಮುಂದಿನ ಸುತ್ತಿನ ಮಾತುಕತೆ ವೇಳೆ ಒಂದು ನಿಲುವಿಗೆ ಬರುವ ಸಾಧ್ಯತೆಗಳಿವೆ ಎಂದು ಆರ್‌ಟಿ ವರದಿ ಮಾಡಿದೆ.
ನಿನ್ನೆ ಐದು ಗಂಟೆಗಳಿಗೂ ಹೆಚ್ಚಿನ ಕಾಲ ನಡೆದ ಮಾತುಕತೆ ವೇಳೆ, ಉಕ್ರೇನ್ ಕದನ ವಿರಾಮಕ್ಕೆ ಪಟ್ಟು ಹಿಡಿದಿದೆ. ಅತ್ತ ರಷ್ಯಾ ತನ್ನ ಪಟ್ಟ ಸಡಿಲಿಸಲು ಹಿಂಜರಿದೆ. ಈ ನಡುವೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಯ ಸಲಹೆಗಾರ ಮೈಖೈಲೊ ಪೊಡೊಲ್ಯಾಕ್, ಕದನ ವಿರಾಮದ ಕುರಿತು ಚರ್ಚಿಸುವುದೇ ಮಾತುಕತೆಯ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದ್ದಾರೆ. ಮಾತುಕತೆ ವೇಳೆ ಅಂತಿಮ ನಿರ್ಧಾರಕ್ಕೆ ಬರಲು ಸಾಧ್ಯವಾಗದಿದ್ದರೂ, ಎರಡು ಕಡೆಯವರು ಹಲವಾರು ಆದ್ಯತೆಯ ವಿಷಯಗಳನ್ನು ಗುರುತಿಸುವಲ್ಲಿ ಸಫಲರಾಗಿದ್ದಾರೆ. ಅಷ್ಟೇ ಅಲ್ಲ ಕೆಲವು ಪರಿಹಾರಗಳನ್ನು ಹೇಗೆ ಕಂಡುಕೊಳ್ಳಬಹುದು ಎಂಬ ಬಗ್ಗೆಯೂ ಮಾತುಕತೆ ವೇಳೆ ಚರ್ಚಿಸಲಾಗಿದೆ ಎಂದು ಮೈಖೈಲೊ ಪೊಡೊಲ್ಯಾಕ್ ಹೇಳಿದ್ದಾರೆ.
ಎರಡು ನಿಯೋಗಗಳು ಸಾಮಾನ್ಯ ಅಂಶಗಳನ್ನು ಕಂಡುಕೊಂಡಿವೆ ಎಂದು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಸಹಾಯಕ ವ್ಲಾಡಿಮಿರ್ ಮೆಡಿನ್ಸ್ಕಿ ಸಹ ದೃಢಪಡಿಸಿದ್ದಾರೆ ಎಂದು ಆರ್‌ಟಿ ವರದಿ ಮಾಡಿದೆ. ರಕ್ಷಣಾ ಸಚಿವ ಅಲೆಕ್ಸಿ ರೆಜ್ನಿಕೋವ್ ಉಕ್ರೇನ್ ನೇತೃತ್ವ ವಹಿಸಿದ್ದರು. ಮಾತುಕತೆ ವೇಳೆ ಉಕ್ರೇನ್ ತಕ್ಷಣ ಕದನ ವಿರಾಮ ಘೋಷಣೆ ಮಾಡಬೇಕು ಹಾಗೂ ಉಕ್ರೇನ್ನಿಂದ ರಷ್ಯಾ ಸೇನೆ ವಾಪಸ್ ಹೋಗಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟಿತ್ತು.
ಈ ನಡುವೆ ಉಭಯ ರಾಷ್ಟ್ರಗಳ ನಡುವಣ ಮಾತುಕತೆ ಬಗ್ಗೆ ಪ್ರತಿಕ್ರಿಯಿಸಿರುವ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ, ಮಾತುಕತೆ ಸಫಲವಾಗುತ್ತದೆ ಎಂದು ತಾವು ನಂಬಿಲ್ಲ. ಆದರೆ ಅವರು ಪರಿಸ್ಥಿತಿ ತಿಳಿಗೊಳಿಸುವ ಸಣ್ಣ ಅವಕಾಶ ಇದೆ ಎಂಬುದಾಗಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿ:ಪರಸ್ಪರ ಮಾತುಕತೆ ಮೂಲಕವೇ ಸಮಸ್ಯೆ ಬಗೆಹರಿಸಿಕೊಳ್ಳಿ: ತಕ್ಷಣಕ್ಕೆ ಸಮರ ನಿಲ್ಲಿಸಿ, ರಷ್ಯಾ- ಉಕ್ರೇನ್ಗೆ ಭಾರತ ಕರೆ