ಜಿನೇವಾ : ಕೊರೊನಾ ವೈರಸ್ ದೇಶದ ಆರ್ಥಿಕತೆ ಸೇರಿದಂತೆ ಹಲವು ವಲಯಗಳ ಮೇಲೆ ದುಷ್ಪರಿಣಾಮ ಬೀರಿದೆ. ಕೊರೊನಾ ವಕ್ರದೃಷ್ಠಿ ಯುವಕರ ಉದ್ಯೋಗಗಳ ಮೇಲೂ ಬಿದ್ದಿದೆ.
ಇತ್ತೀಚೆಗೆ ಬಿಡುಗಡೆಯಾಗಿರುವ ವರದಿಯೊಂದರ ಪ್ರಕಾರ, ಕೊರೊನಾದಿಂದಾಗಿ ಪ್ರಪಂಚದಲ್ಲಿ ಪ್ರತಿ 6 ಯುವಕರ ಪೈಕಿ ಒಬ್ಬರೇ ಕೆಲಸ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಹೀಗೆ ಕೆಲಸ ಮಾಡುತ್ತಿರುವ ಆ ಒಬ್ಬ ವ್ಯಕ್ತಿಗೂ ಕೈ ತುಂಬ ಕೆಲಸವೇನಿಲ್ಲ. ಆತನಿಗೆ ಒಟ್ಟಾರೆ ಅವಧಿಯ ಕೇವಲ ಶೇ 23 ರಷ್ಟು ಮಾತ್ರ ಕೆಲಸವಿದೆ ಎಂದು ಇಂಟರ್ನ್ಯಾಷನಲ್ ಲೇಬರ್ ಆರ್ಗನೈಜೇಷನ್ ಆಂತಕ ವ್ಯಕ್ತಪಡಿಸಿದೆ.
ಕಳೆದ ಫೆಬ್ರವರಿಯಿಂದ ಪ್ರಪಂಚದ ಯುವಕರಲ್ಲಿ ನಿರುದ್ಯೋಗದ ಸಮಸ್ಯೆ ಹೆಚ್ಚೆಚ್ಚು ಕಾಡುತ್ತಿದೆ. ಅದ್ರಲ್ಲೂ ಯುವತಿಯರು ಹೆಚ್ಚು ನಿರುದ್ಯೋಗಕ್ಕೆ ಒಳಗಾಗುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದೆ.
ಕೊರೊನಾ ಕೇವಲ ಯುವಕರ ಉದ್ಯೋಗವನ್ನಷ್ಟೇ ಕಸಿದುಕೊಂಡಿಲ್ಲ. ಬದಲಾಗಿ ಅವರ ವಿದ್ಯಾಭ್ಯಾಸ, ತರಬೇತಿಯನ್ನೂ ಮೊಟಕುಗೊಳಿಸಿದೆ. 2019ರಲ್ಲಿ ಶೇ.13.6 ರಷ್ಟು ಯುವಕರು ಉದ್ಯೋಗಗಳನ್ನು ಕಳೆದುಕೊಂಡರೆ, 261 ಮಿಲಿಯನ್ ಯುವ ಜನತೆ ಕೇವಲ ಉದ್ಯೋಗದ ಜೊತೆಗೆ ವಿದ್ಯಾಭ್ಯಾಸ ಹಾಗೂ ತರಬೇತಿಯನ್ನು ಕಳೆದುಕೊಂಡಿದ್ದಾರೆ ಎಂದು ಐಎಲ್‌ಒ ತಿಳಿಸಿದೆ.
ನಾವು ಕೊರೊನಾ ಬಗ್ಗೆ ತಕ್ಷಣ ಸೂಕ್ತ ರೀತಿಯ ಪರಿಹಾರ ಕಂಡುಕೊಳ್ಳದಿದ್ದರೆ ಮುಂದಿನ ಶತಮಾನಗಳಲ್ಲಿ ನಿರುದ್ಯೋಗದ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಈ ವೈರಸ್ ಯುವಕರ ಪ್ರತಿಭೆ ಹಾಗೂ ಅವರಲ್ಲಿರುವ ಆತ್ಮಸ್ಥೈರ್ಯವನ್ನು ನಾಶ ಮಾಡಿದೆ ಎಂದು ILO ವರದಿ ಕಳವಳ ವ್ಯಕ್ತಪಡಿಸಿದೆ.