ಟಸ್ಕನಿ: ಇಟಲಿಯ ರೈತರೊಬ್ಬರು ಬೃಹತ್ ಸಿಹಿ ಕುಂಬಳಕಾಯಿ ಬೆಳೆದು ವಿಶ್ವದಾಖಲೆ ಬರೆದಿದ್ದಾರೆ. ಇದರ ತೂಕ ಕೇಳಿದ್ರೆ ಶಾಕ್ ಆಗುತ್ತೆ.
ಟಸ್ಕನಿಯ ಚಿಯಾಂಟಿಯಲ್ಲಿರುವ ರಾಡ್ಡಾದ ಕಮ್ಯೂನ್ ಗ್ರಾಮದ ರೈತ ಸ್ಟೆಫಾನೊ ಕಟ್ರುಪಿ ಎಂಬವರು ಸುಮಾರು 2008ರಿಂದ ಈ ಸಿಹಿ ಕುಂಬಳಕಾಯಿ ಬೆಳೆದಿದ್ದಾರಂತೆ. ಸೆಪ್ಟೆಂಬರ್ 26ರಂದು ಪಿಸಾ ಬಳಿಯ ಪೆಸಿಯೋಲಿಯಲ್ಲಿ 'ಕ್ಯಾಂಪಿಯೊನಾಟೊ ಡೆಲ್ಲಾ ಜುಕೋನ್ ಕುಂಬಳಕಾಯಿ ಉತ್ಸವ'ದ 10ನೇ ಆವೃತ್ತಿಯಲ್ಲಿ ರೈತ ಸ್ಟೆಫಾನೊ ಭೀಮಾಕಾರದ ಫಸಲನ್ನು ಪ್ರಸ್ತುತಪಡಿಸಿದರು. ಕುಂಬಳಕಾಯಿಯನ್ನು ತಕ್ಕಡಿಯಲ್ಲಿ ಹಾಕಿ ತೂಗಿದಾಗ ಅಲ್ಲಿದ್ದ ಎಲ್ಲರೂ ಅಚ್ಚರಿಗೊಳಗಾಗಿದ್ದಾರೆ. ಬರೋಬ್ಬರಿ 1,226 kg (2,702 lb 13.9 oz) ತೂಗುವ ಮೂಲಕ ಈ ಕುಂಬಳಕಾಯಿ ವಿಶ್ವದಾಖಲೆ ಬರೆಯಿತು.
'ತೂಕದ ಸಮಯದಲ್ಲಿ ನಾನು ಅತ್ತ ನೋಡಲೇ ಇಲ್ಲ. ನನ್ನ ಸ್ನೇಹಿತರು ಮತ್ತು ಪ್ರೇಕ್ಷಕರು ತೂಕವನ್ನು ನೋಡಿದಾಗ ಸಂಭ್ರಮದಲ್ಲಿ ಮುಳುಗಿದರು. ಆ ಕ್ಷಣದಲ್ಲಿ ನಾನು ವಿಶ್ವ ದಾಖಲೆ ನಿರ್ಮಿಸಿದ್ದೇನೆ ಎಂಬುದು ತಿಳಿಯಿತು. ನನ್ನ ಧ್ವನಿ ಕಳೆದುಕೊಳ್ಳುವವರೆಗೂ ನಾನು ಸಂಭ್ರಮಿಸಿದೆ' ಎಂದು ಸ್ಟೆಫಾನೊ ಕಟ್ರಪಿ ತಮ್ಮ ಭಾವನೆಗಳನ್ನು ಹಂಚಿಕೊಂಡರು.
ಸ್ಪರ್ಧೆಯಲ್ಲಿ ಕಟ್ರುಪಿ ಕುಂಬಳಕಾಯಿ ಮೊದಲನೇ ಪಡೆದು ವಿಶ್ವದಾಖಲೆ ನಿರ್ಮಿಸಿದ್ರೆ, ಎರಡನೇ ಸ್ಥಾನದಲ್ಲಿ 978.99 ಕೆಜಿಯ (2,158 lb 4.8 oz) ಕುಂಬಳಕಾಯಿ ಮತ್ತು ಮೂರನೇ ಸ್ಥಾನದಲ್ಲಿ 794.51 ಕೆಜಿಯ (1,751 lb 9.5 oz) ಕುಂಬಳಕಾಯಿಗಳು ಪ್ರಶಸ್ತಿ ಪಡೆದವು.
2016ರಲ್ಲಿ 1,190.49 ಕೆಜಿಯ (2,624-lb 9.3-oz) ಕುಂಬಳಕಾಯಿ ಈ ಹಿಂದಿನ ವಿಶ್ವದಾಖಲೆಯ ಹೆಸರಿನಲ್ಲಿತ್ತು. ಈ ಕುಂಬಳಕಾಯಿಯನ್ನು ಬೆಲ್ಜಿಯನ್ ಬೆಳೆಗಾರ ಮಥಿಯಾಸ್ ವಿಲ್ಲೆಮಿನ್ಸ್ ಬೆಳೆದಿದ್ದರು. ಈ ದಾಖಲೆಯನ್ನು ಅಳಿಸಿರುವ ಕಟ್ರುಪಿ ಹೊಸ ದಾಖಲೆ ನಿರ್ಮಿಸಿದ್ದಾರೆ.