ಗ್ರೀನ್ಲ್ಯಾಂಡ್ : ಯುರೋಪ್ನ ಐದು ರಾಷ್ಟ್ರಗಳಲ್ಲಿ ಕಳೆದೊಂದು ವಾರದಲ್ಲಿ ಜೋರಾಗಿ ಬೀಸುತ್ತಿರುವ ಬಿಸಿಗಾಳಿಯಿಂದಾಗಿ ತಾಪಮಾನದಲ್ಲಿ ಭಾರೀ ಏರಿಕೆ ಕಂಡಿದೆ. ಇನ್ನೊಂದೆಡೆ ವಿಶ್ವದ ಅತಿದೊಡ್ಡ ದ್ವೀಪವಾಗಿರುವ ಗ್ರೀನ್ಲ್ಯಾಂಡ್ನ ಹಿಮಪದರ ಭಾರೀ ಪ್ರಮಾಣದಲ್ಲಿ ಕರಗಿದೆ.
ಗ್ರೀನ್ಲ್ಯಾಂಡ್, ವಿಶ್ವದ ಅತಿದೊಡ್ಡ ದ್ವೀಪರಾಷ್ಟ್ರ. ಇದು ಅಟ್ಲಾಂಟಿಕ್ ಮತ್ತು ಆರ್ಕಟಿಕ್ ಸಾಗರಗಳ ನಡುವೆ ಇದೆ. ಈ ದ್ವೀಪದ ಮೇಲ್ಪದರದ 82 ಶೇ. ಭಾಗ ಹಿಮದಿಂದಲೇ ತುಂಬಿದೆ. ಸದ್ಯ ಗ್ರೀನ್ಲ್ಯಾಂಡ್ ಹಾಗೂ ಸುತ್ತಮುತ್ತಲ ರಾಷ್ಟ್ರಗಳಲ್ಲಿ ಜೋರಾಗಿ ಬೀಸುತ್ತಿರುವ ಬಿಸಿಗಾಳಿಯಿಂದಾಗಿ ಭಾರೀ ಪ್ರಮಾಣದಲ್ಲಿ ಹಿಮಪದರ ಕರಗಿ ನೀರಾಗುತ್ತಿದೆ.
ದಿನದಿಂದ ದಿನಕ್ಕೆ ಹಿಮಪದರ ಕರಗುವಿಕೆಯ ಪ್ರಮಾಣ ಹೆಚ್ಚಾಗುತ್ತಿದ್ದು, ಈ ವರ್ಷ ಶೇ. 56.5 ರಷ್ಟು ದಾಖಲೆಯ ಕರಗುವಿಕೆ ದಾಖಲಾಗಿದೆ. ಕಳೆದ ಬುಧವಾರ ಒಂದರಲ್ಲೇ ಸುಮಾರು ಒಂದು ಸಾವಿರ ಕೋಟಿ ಟನ್ನಷ್ಟು ಮಂಜು ಕರಗಿ ನೀರಾಗಿ ಹೋಗಿದೆ. ಅಲ್ಲದೆ ಕಳೆದ ಜುಲೈನಿಂದ 19700 ಕೋಟಿ ಟನ್ನಷ್ಟು ಹಿಮ ಕರಗಿ ನೀರಾಗಿದೆ ಎಂದು ಡ್ಯಾನಿಶ್ ಹವಾಮಾನ ಸಂಸ್ಥೆಯ ಹವಾಮಾನ ವಿಜ್ಞಾನಿ ರುತ್ ಮೊಟ್ರಾಮ್ ಹೇಳಿದ್ದಾರೆ.
ಇದೇ ರೀತಿಯ ವಾತಾವರಣ ಇನ್ನೂ ಮುಂದುವರಿಯುವ ಸಾಧ್ಯತೆಯಿದ್ದು, ಹಿಮಪದರದ ಕರಗುವಿಕೆ ಇದೇ ರೀತಿ ಮುಂದುವರಿಯಲಿದೆ ಎಂದು ರುತ್ ಮೊಟ್ರಾಮ್ ತಿಳಿಸಿದ್ದಾರೆ.