ಲಂಡನ್: ಇಂಗ್ಲೆಂಡ್ನಲ್ಲಿ 9,529 ಕೊರೊನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ಮೂರು ಸಾವಿರ ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಾಂಕ್ರಾಮಿಕ ರೋಗವನ್ನು ನಿಗ್ರಹಿಸುವ ದೃಷ್ಟಿಯಿಂದ ಇಂಗ್ಲೆಂಡ್ನಲ್ಲಿ ಮೂರನೇ ದಿನವೂ ಲಾಕ್ಡೌನ್ ಮುಂದುವರೆದಿದೆ.
ಯುಕೆಯಲ್ಲಿ ದಿನದಿಂದ ದಿನಕ್ಕೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಆಸ್ಪತ್ರೆಯ ಬೆಡ್ಗಳು ಫುಲ್ ಆಗಿವೆ. ಅಲ್ಲದೇ ಈ ಸೋಂಕು ವೈದ್ಯರಿಗೂ ತಗಲುತ್ತಿರುವುದರಿಂದ ಅವರು ಕೆಲಸಕ್ಕೆ ಬರುತ್ತಿಲ್ಲವೆಂದು ರಾಷ್ಟ್ರೀಯ ಆರೋಗ್ಯ ಸೇವೆಯ (ಎನ್‌ಎಚ್‌ಎಸ್) ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹಾಗಾಗಿ ಯುಕೆಯಲ್ಲಿ ಲಾಕ್ಡೌನ್ ಮೂರನೇ ದಿನಕ್ಕೆ ಮುಂದುವರೆದಿದೆ.
ಸೋಂಕಿನ ಪರಿಣಾಮ ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸಲು ಸಿಬ್ಬಂದಿ ಬರುತ್ತಿಲ್ಲ. ಎಲ್ಲ ಹಾಸಿಗೆಗಳು ಭರ್ತಿಯಾಗಿವೆ. ಆಸ್ಪತ್ರೆಗೆ ಸೋಂಕಿತರು ಸುನಾಮಿ ರೀತಿ ಬರುತ್ತಿದ್ದಾರೆಂದು ಎನ್‌ಎಚ್‌ಎಸ್ ಪೂರೈಕೆದಾರರ ಮುಖ್ಯ ಕಾರ್ಯನಿರ್ವಾಹಕ ಕ್ರಿಸ್ ಹಾಪ್ಸನ್ ತಿಳಿಸಿದ್ದಾರೆ.
ಈ ವಾರದ ಆರಂಭದಲ್ಲಿ ಪೂರ್ವ ಲಂಡನ್‌ನ ಎಕ್ಸೆಲ್ ಕಾನ್ಫರೆನ್ಸ್ ಕೇಂದ್ರದಲ್ಲಿ 4,000 ಹಾಸಿಗೆಗಳನ್ನು ಹೊಂದಿರುವ ತಾತ್ಕಾಲಿಕ ಆಸ್ಪತ್ರೆ ಸ್ಥಾಪಿಸುವುದಾಗಿ ಯುಕೆ ಸರ್ಕಾರ ಘೋಷಿಸಿತ್ತು. ಆದ್ರೆ ಈ ಆಸ್ಪತ್ರೆಯೂ ಸಹ ವೇಗವಾಗಿ ತುಂಬುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಕೊರೊನಾ ವೈರಸ್ನಿಂದ ಯುಕೆಯಲ್ಲಿ ಗುರುವಾರ 465 ಜನ ಮರಣ ಹೊಂದಿದ್ದಾರೆ. ಇಂದು 1,542 ಸೋಂಕಿತರು ಹೆಚ್ಚಾಗಿದ್ದಾರೆ. ಒಟ್ಟಾರೆ ಇದು 9,529 ಕ್ಕೆ ತಲುಪಿದೆ.ಯುಕೆ ಪ್ರಧಾನಿ ಬೋರಿಸ್ ಜಾನ್ಸನ್ ಸೋಮವಾರ ರಾಷ್ಟ್ರವ್ಯಾಪಿ ಲಾಕ್ಡೌನ್ ಜಾರಿಗೆ ತಂದಿದ್ದರೂ, ಸೋಂಕಿತರ ಸಂಖ್ಯೆ ಮತ್ತು ಮರಣ ಪ್ರಮಾಣ ಹೆಚ್ಚಾಗುತ್ತಲೇ ಇದೆ.
ಕೊರೊನಾ ವೈರಸ್ ಬಿಕ್ಕಟ್ಟನ್ನು ಎದುರಿಸಲು 10,000 ವೆಂಟಿಲೇಟರ್ಗಳನ್ನು ನೀಡುವಂತೆ ಹೆಸರುವಾಸಿಯಾದ ವ್ಯಾಕ್ಯೂಮ್ ಡೈಸನ್ ಕ್ಲೀನರ್ಗೆ ಆದೇಶಿಸಿದೆ. ಬ್ರಿಟಿಷ್ ಸಂಶೋಧಕ ಸರ್ ಜೇಮ್ಸ್ ಡೈಸನ್ ನೇತೃತ್ವದ ಸಂಸ್ಥೆಯ ಹೊಸ ರೀತಿಯ ವೆಂಟಿಲೇಟರ್ ವಿನ್ಯಾಸಗೊಳಿಸಿದೆ. ಈ ಸಂದರ್ಭದಲ್ಲಿ ಆಸ್ಪತ್ರೆ ಸಿಬ್ಬಂದಿಗೆ ಎಲ್ಲ ರೀತಿಯ ಸಹಾಯ ಮಾಡಲು ಸರ್ಕಾರ ಸಿದ್ದವಿದೆ ಎಂದು ಯುಕೆ ಆರೋಗ್ಯ ಕಾರ್ಯದರ್ಶಿ ಮ್ಯಾಟ್ ಹ್ಯಾನ್ಕಾಕ್ ತಿಳಿಸಿದ್ದಾರೆ.
ಎನ್‌ಎಚ್‌ಎಸ್ ಮತ್ತು ಸಾಮಾಜಿಕ ಆರೈಕೆ ಸಿಬ್ಬಂದಿಗೆ ಪಾರ್ಕಿಂಗ್ ಶುಲ್ಕವನ್ನು ಸರ್ಕಾರ ಮನ್ನಾ ಮಾಡಿದೆ. ಅಲ್ಲದೇ ತುರ್ತು ವೈಯಕ್ತಿಕ ಸಂರಕ್ಷಣಾ ಸಾಧನಗಳ (ಪಿಪಿಇ) ಸರಬರಾಜುಗಳನ್ನು ವೇಗಗೊಳಿಸಿದೆ. ಅಲ್ಲದೇ, 3.5 ಮಿನಿಯನ್ ಪರೀಕ್ಷಾ ಕಿಟ್ಗಳನ್ನು ಕಮರ್ಷಿಯಲ್ ಪೂರೈಕೆದಾರರಿಂದ ಆಮದು ಮಾಡಿಕೊಳ್ಳಲು ಪ್ರಧಾನಿ ಆದೇಶ ನೀಡಿದ್ದಾರೆ.