1951ರಲ್ಲಿ, ಮೊಟ್ಟ ಮೊದಲ ಬಾರಿಗೆ ವಿಶ್ವ ಸುಂದರಿ ಖ್ಯಾತಿಗೆ ಪಾತ್ರರಾಗಿದ್ದ ಕಿಕಿ ಹಕನ್ಸನ್ (Kiki Hakansson) ತಮ್ಮ 95ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ. ನವೆಂಬರ್ 4, ಸೋಮವಾರದಂದು ಕ್ಯಾಲಿಫೋರ್ನಿಯಾದ ತಮ್ಮ ನಿವಾಸದಲ್ಲಿ ನಿದ್ರೆಯಲ್ಲಿರುವಾಗಲೇ ಚಿರನಿದ್ರೆಗೆ ಜಾರಿದ್ದಾರೆ ಎಂದು ಅವರ ಕುಟುಂಬ ದೃಢಪಡಿಸಿದೆ.
ಅವರು "ಶಾಂತಿಯುತವಾಗಿ, ಆರಾಮವಾಗಿ'' ಹೊರಟರೆಂದು ಹಿತೈಷಿಯೋರ್ವರು ಮಾಹಿತಿ ಹಂಚಿಕೊಂಡಿದ್ದಾರೆ. ಈ ಸುದ್ದಿಯನ್ನು ಮಿಸ್ ವರ್ಲ್ಡ್ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯ ಮೂಲಕ ಸಾರ್ವಜನಿಕವಾಗಿ ಘೋಷಿಸಲಾಗಿದೆ. ಸೌಂದರ್ಯ ಸ್ಪರ್ಧೆಯ ಜಗತ್ತಿನಲ್ಲಿ ಪ್ರವರ್ತಕಿಯಾಗಿ ಅವರ ಪರಂಪರೆಯನ್ನು ಇಲ್ಲಿ ಸ್ಮರಿಸಲಾಗಿದೆ.
ಮೊದಲ ವಿಶ್ವಸುಂದರಿಯ ಹಿನ್ನೆಲೆ: ಸ್ವೀಡನ್‌ನಲ್ಲಿ ಜನಿಸಿದ ಇವರು 1951ರಲ್ಲಿ ವಿಶ್ವ ಸುಂದರಿ ಕಿರೀಟ ಮುಡಿಗೇರಿಸಿಕೊಂಡ ಮೊದಲ ಮಹಿಳೆಯಾಗಿ ಇತಿಹಾಸ ನಿರ್ಮಿಸಿದರು. ಉದ್ಘಾಟನಾ ಸಮಾರಂಭ 1951ರ ಜುಲೈ 29ರಂದು ಲಂಡನ್‌ನ ಲೈಸಿಯಮ್ ಬಾಲ್‌ರೂಮ್‌ನಲ್ಲಿ (Lyceum Ballroom in London) ನಡೆಯಿತು. ಆರಂಭದಲ್ಲಿ ಬ್ರಿಟನ್‌ನ ಉತ್ಸವಕ್ಕೆ ಸಂಬಂಧಿಸಿದ ಈವೆಂಟ್ ಇದಾಗಿತ್ತು. ಆದರೆ ಈ ಸೌಂದರ್ಯ ಸ್ಪರ್ಧೆಯು ಜಾಗತಿಕವಾಗಿ ಪ್ರಸಿದ್ಧ ಸಂಸ್ಥೆಯಾಗಿ ಬೆಳೆಯುತ್ತದೆ ಎಂಬುದನ್ನು ಬಹುಶಃ ಯಾರೂ ಊಹಿಸಿರಕ್ಕಿಲ್ಲ. ಕಿಕಿ ಅವರ ಅಂದಿನ ವಿಜಯವು ಪ್ರಪಂಚದಾದ್ಯಂತ ಅತ್ಯಂತ ಪ್ರಸಿದ್ಧ ಸೌಂದರ್ಯ ಸ್ಪರ್ಧೆಗಳಲ್ಲಿ ಒಂದಾಗಲು ವೇದಿಕೆ ಸ್ಥಾಪಿಸಿತು. ಸೌಂದರ್ಯ ಮತ್ತು ಸಂಸ್ಕೃತಿಗಳೆರಡರಲ್ಲೂ ಅವರನ್ನು ಐಕಾನಿಕ್ ಆಗಿ ಈ ವೇದಿಕೆ ಸೃಷ್ಟಿಸಿತು.
ಪ್ರಶಸ್ತಿಯಿಂದ ಸುದ್ದಿಯಾಗಿದ್ದು ಮಾತ್ರವಲ್ಲದೇ ಕಿರೀಟಧಾರಣೆ ಸಮಾರಂಭದಲ್ಲಿ ಬಿಕಿನಿ ಧರಿಸಿದ ಹಿನ್ನೆಲೆ ವಿವಾದಕ್ಕೆ ಕಾರಣವಾಗಿತ್ತು. ಈ ಉಡುಪು ಸಾಕಷ್ಟು ಟೀಕೆಗೆ ಗುರಿಯಾಯಿತು. ಹಲವು ದೇಶಗಳು ಸ್ಪರ್ಧೆಯಿಂದ ಹಿಂದೆ ಸರಿಯುವುದಾಗಿ ಬೆದರಿಕೆ ಹಾಕಿದ್ದವು. ಪರಿಣಾಮವಾಗಿ, 1952ರಲ್ಲಿ ಬಿಕಿನಿಯನ್ನು ಸ್ಪರ್ಧೆಯಿಂದ ನಿಷೇಧಿಸಲಾಯಿತು. ಅದರ ಬದಲು ಸಾಧಾರಣ ಈಜುಡುಗೆಗಳನ್ನು ರೀಪ್ಲೇಸ್ ಮಾಡಲಾಯಿತು. ಅಂತಿಮವಾಗಿ, ಬಿಕಿನಿಯನ್ನು ವಿಶ್ವ ಸುಂದರಿ ಸ್ಪರ್ಧೆಯಿಂದ ನಿಷೇಧಿಸಿದರೂ, ಕಿರೀಟ ಧಾರಣೆ ಸಂದರ್ಭ ಬಿಕಿನಿಯನ್ನು ಧರಿಸಿದ್ದ ಏಕೈಕ ವಿಜೇತರಾಗಿ ಕಿಕಿ ಗುರುತಿಸಿಕೊಂಡಿದ್ದಾರೆ.
ಇದನ್ನೂ ಓದಿ: ಕಾಂತಾರ ಸೆಟ್ನಲ್ಲಿ ರಿಷಬ್ ಶೆಟ್ಟಿ: 60 ದಿನಗಳ ನಿರಂತರ ಶೂಟಿಂಗ್; 2 ಶೆಡ್ಯೂಲ್ ಕಂಪ್ಲೀಟ್, ಬಜೆಟ್ ಮಾಹಿತಿ ಇಲ್ಲಿದೆ
ಮೊದಲ ಮಿಸ್ ವರ್ಲ್ಡ್ ಕಿಕಿ ಹಕನ್ಸನ್ ನಿಧನಕ್ಕೆ ವಿಶ್ವ ಸುಂದರಿ ಸಂಸ್ಥೆ ಸಾಮಾಜಿಕ ಜಾಲತಾಣದಲ್ಲಿ ಶ್ರದ್ಧಾಂಜಲಿ ಸಲ್ಲಿಸಿದೆ. "ಈ ಕಠಿಣ ಸಂದರ್ಭ ಕಿಕಿ ಕುಟುಂಬಕ್ಕೆ ನಮ್ಮ ಪ್ರೀತಿ, ಪ್ರಾರ್ಥನೆಗಳಿವೆ. ಕಿಕಿ ಕುಟುಂಬಕ್ಕೆ ನಮ್ಮ ಸಂತಾಪ ವ್ಯಕ್ತಪಡಿಸುತ್ತೇವೆ" ಎಂದು ಅಧಿಕೃತ ಪೋಸ್ಟ್ ತಿಳಿಸಿದೆ.
ಇದನ್ನೂ ಓದಿ: ದೊಡ್ಮನೆ ಶಕ್ತಿ ಪಾರ್ವತಮ್ಮ ಹಾದಿಯಲ್ಲಿ ಸೊಸೆ ಗೀತಾ ಶಿವರಾಜ್ಕುಮಾರ್: ಸಿನಿಮಾ ಫೈನಲ್ ಮಾಡೋದು ಇವರೇ
ಪುತ್ರ ಕ್ರಿಸ್ ಆಂಡರ್ಸನ್ ಕೂಡಾ ತಾಯಿಗೆ ಗೌರವ ಸೂಚಿಸಿದ್ದಾರೆ. ಅವರನ್ನು ಗುಣಗಾನ ಮಾಡುವಾಗ ''ರಿಯಲ್, ಕೈಂಡ್, ಲವ್ ಮತ್ತು ಫನ್" ಎಂದು ಉಲ್ಲೇಖಿಸಿದ್ದಾರೆ. "ಅವರು ಅದ್ಭುತ ಹಾಸ್ಯ ಪ್ರಜ್ಞೆ, ಬುದ್ಧಿವಂತಿಕೆ ಮತ್ತು ವಿಶಾಲ ಮನಸ್ಸು ಹೊಂದಿದ್ದರು. ತಮ್ಮ ಉದಾರ ಮನೋಭಾವದಿಂದ ಸದಾ ಸರ್ವರ ಸ್ಮರಣೆಯಲ್ಲಿರುತ್ತಾರೆ'' ಎಂದು ತಿಳಿಸಿದರು.